ತೈಲ ಮಾರ್ಕೆಟಿಂಗ್ ಕಂಪೆನಿಗಳು (OMC's) ಬುಧವಾರದಂದು (ಫೆಬ್ರವರಿ 10, 2021) ಮತ್ತೆ ಪೆಟ್ರೋಲ್- ಡೀಸೆಲ್ ದರವನ್ನು ಏರಿಕೆ ಮಾಡಿವೆ. ಪೆಟ್ರೋಲ್ ಲೀಟರ್ ಗೆ 35 ಪೈಸೆ ಹಾಗೂ ಡೀಸೆಲ್ ಲೀಟರ್ ಗೆ 25 ಪೈಸೆಯನ್ನು ದೆಹಲಿ- ನ್ಯಾಷನಲ್ ಕ್ಯಾಪಿಟಲ್ ರೀಜನ್ (NCR)ನಲ್ಲಿ ಹೆಚ್ಚಳ ಮಾಡಿವೆ. ದೆಹಲಿಯಲ್ಲಿ ಲೀಟರ್ ಗೆ ರು. 87.60, ಎನ್ ಸಿಆರ್ ನಲ್ಲಿ ಡೀಸೆಲ್ ರು. 77.73 ತಲುಪುವ ಮೂಲಕ ಹೊಸ ದಾಖಲೆ ಬರೆದಿವೆ.
ಭಾರತವು ಖರೀದಿ ಮಾಡುವ ಒಮನ್, ದುಬೈ ಹಾಗೂ ಬ್ರೆಂಟ್ ಕಚ್ಚಾ ತೈಲ ಫೆಬ್ರವರಿ 8ಕ್ಕೆ ಬ್ಯಾರೆಲ್ ಗೆ $ 59.78 ಇತ್ತು. ಬುಧವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ ಗೆ $ 61 ಇತ್ತು. ಇನ್ನು ಪಶ್ಚಿಮ ಟೆಕ್ಸಾಸ್ ಇಂಟರ್ ಮೀಡಿಯಟ್ ಬ್ಯಾರೆಲ್ ಗೆ $ 58.21 ಇತ್ತು.
ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಪ್ರಮಾಣ ತೈಲ ಆಮದು ಮಾಡಿಕೊಳ್ಳುವ ದೇಶ ಭಾರತ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಏರಿಕೆಯಾದರೂ ಅದರಿಂದ ಇಲ್ಲಿ ಬೆಲೆ ಹೆಚ್ಚಾಗುತ್ತದೆ. ಆಮದು ವೆಚ್ಚವನ್ನು ಹೆಚ್ಚು ಮಾಡುತ್ತದೆ. ಅಷ್ಟೇ ಅಲ್ಲ, ಅದರಿಂದ ಹಣದುಬ್ಬರ ಮತ್ತು ವಾಣಿಜ್ಯ ಕೊರತೆ ಉಂಟಾಗುತ್ತದೆ.

ಒಂದು ಡಾಲರ್ ಬೆಲೆ ಹೆಚ್ಚಾದರೆ ಭಾರತದ ಆಮದು ವೆಚ್ಚ ವಾರ್ಷಿಕ ಲೆಕ್ಕಾಚಾರದಲ್ಲಿ ರು. 10,700 ಕೋಟಿ ಹೆಚ್ಚಳವಾಗುತ್ತದೆ. ಭಾರತವು 2019-20ರಲ್ಲಿ ಕಚ್ಚಾ ತೈಲ ಆಮದಿಗಾಗಿ 101.4 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿದ್ದು, 2018-19ರಲ್ಲಿ 111.9 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಿದೆ.
ಅಂದ ಹಾಗೆ, ಕೊರೊನಾ ನಂತರ ಭಾರತದ ಕಚ್ಚಾ ತೈಲ ಬ್ಯಾಸ್ಕೆಟ್ ದರವು ಏಪ್ರಿಲ್ 2020ರಲ್ಲಿ ಬ್ಯಾರೆಲ್ ಗೆ $ 49.84ಕ್ಕೆ ಚೇತರಿಸಿಕೊಳ್ಳುವ ಮೊದಲಿಗೆ $ 19.90ಗೆ ಕುಸಿದಿತ್ತು.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಹೀಗಿದೆ:
ಬೆಂಗಳೂರು: 90.53, 82.40
ಚೆನ್ನೈ: 89.96, 82.90
ಹೈದರಾಬಾದ್: 91.09, 84.79
ಮುಂಬೈ: 94.12, 84.63
ದೆಹಲಿ: 87.60, 77.73
ಕೋಲ್ಕತ್ತಾ: 88.92, 81.31


Click it and Unblock the Notifications