ಸತತ ಮೂರನೇ ದಿನ ಏರಿಕೆ ದಾಖಲಿಸಿದ ಫ್ಯೂಚರ್ ರಿಟೇಲ್ ಷೇರು
ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮತ್ತು ಫ್ಯೂಚರ್ಸ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಕಳೆದ ಶುಕ್ರವಾರ ಅನುಮೋದನೆ ನೀಡಿದ ಬಳಿಕ ಸತತ ಮೂರನೇ ದಿನ ಫ್ಯೂಚರ್ ರಿಟೇಲ್ ಷೇರುಗಳು ಏರಿಕೆಯಾಗಿವೆ.
ಸೋಮವಾರ ಮತ್ತು ಮಂಗಳವಾರದ ದಿನದ ವಹಿವಾಟಿನಲ್ಲಿ ತಲಾ ಶೇ. 10 ರಂತೆ ಏರಿಕೆ ದಾಖಲಿಸಿದ್ದ ಈ ಷೇರು ಬುಧವಾರ ಕೂಡ ಶೇ.5ರಷ್ಟು ಏರಿಕೆ ದಾಖಲಿಸಿ ಎನ್‌ಎಸ್‌ಇನಲ್ಲಿ 91.50 ರೂಪಾಯಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ 87.15 ರೂಪಾಯಿಗೆ ಮುಕ್ತಾಯಗೊಂಡಿದ್ದ ಷೇರು ನವೆಂಬರ್ 25ರಂದು 4.35 ರೂಪಾಯಿ ಏರಿಕೆ ದಾಖಲಿಸಿ 91.50 ರೂ. ಮುಟ್ಟಿದೆ. ಜೊತೆಗೆ ಕಳೆದ 5 ದಿನಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಶೇ. 35ರಷ್ಟು ಆದಾಯವನ್ನು ನೀಡಿದೆ.
ಈ ಸ್ಟಾಕ್ ಕಳೆದ ಒಂದು ವಾರದಲ್ಲಿ ಹೂಡಿಕೆದಾರರಿಗೆ ಶೇ. 21 ಮತ್ತು ಒಂದು ತಿಂಗಳಲ್ಲಿ ಶೇ. 15ರಷ್ಟು ಆದಾಯವನ್ನು ನೀಡಿದೆ. ಆದಾಗ್ಯೂ, ಇದು ಈ ವರ್ಷದ ಆರಂಭದಿಂದ ಶೇ. 73ರಷ್ಟು ಮತ್ತು ಒಂದು ವರ್ಷದಲ್ಲಿ ಶೇ. 72.33 ರಷ್ಟು ಕುಸಿದಿದೆ. ಸಂಸ್ಥೆಯ ಮಾರುಕಟ್ಟೆ ಬಂಡವಾಳವು 4,945 ಕೋಟಿ ರೂ.ಗೆ ಏರಿದೆ.
ಫ್ಯೂಚರ್ ರಿಟೇಲ್ ಜೊತೆಗೆ, ಫ್ಯೂಚರ್ ಲೈಫ್‌ಸ್ಟೈಲ್ ಫ್ಯಾಷನ್ಸ್, ಫ್ಯೂಚರ್ ಕನ್ಸ್ಯೂಮರ್, ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್, ಫ್ಯೂಚರ್ ಎಂಟರ್‌ಪ್ರೈಸಸ್ ಡಿವಿಆರ್, ಫ್ಯೂಚರ್ ಸಪ್ಲೈ ಚೈನ್ ಮತ್ತು ಫ್ಯೂಚರ್ ಮಾರ್ಕೆಟ್‌ನೆಟ್ವರ್ಕ್ ಷೇರುಗಳು ಸಹ ಬಿಎಸ್‌ಇಯಲ್ಲಿ ಸತತ ಮೂರನೇ ದಿನಕ್ಕೆ ತಲಾ ಶೇ. 5ರಷ್ಟು ಲಾಭ ಗಳಿಸಿವೆ.