ಹಿಂದೂಗಳ ದೊಡ್ಡ ಹಬ್ಬ ಗೌರಿ-ಗಣೇಶ ಹಬ್ಬಕ್ಕೆ ಇನ್ನೊಂದೆ ದಿನ ಬಾಕಿ ಇದ್ದು , ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ನಾಳಿನ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರು ಹಬ್ಬದ ಸಾಮಾಗ್ರಿಗಳನ್ನ ಖರೀದಿಸಿ ಹಬ್ಬಕ್ಕೆ ಸಜ್ಜಾಗಿದ್ದಾರೆ.
ಒಂದಷ್ಟು ಕಡೆಗಳಲ್ಲಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನ ವಿತರಿಸೋ ಕೆಲಸ ಕೂಡ ನಡೆದಿದ್ದು, ಗಜಮುಖನನ್ನ ವೆಲ್ ಕಮ್ ಮಾಡೋಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗಿನಿಂತಿದ್ದಾರೆ. ಸೆಪ್ಟೆಂಬರ್ ಬಂತು ಅಂದರೆ ಸಾಕು ಹಳ್ಳಿಯಿಂದ ದಿಲ್ಲಿವರೆಗೆ, ಗಲ್ಲಿ ಗಲ್ಲಿಯಲ್ಲೂ ಗಣಪತಿ ಬಪ್ಪಾ ಮೋರಿಯಾ ಅನ್ನೋ ಸೌಂಡ್ ಕೇಳುತ್ತೆ.

ಇಂದು ಬೆಳ್ಳಂಬೆಳಗ್ಗೆಯೇ ಕೆ.ಆರ್.ಮಾರ್ಕೆಟ್ ಗೆ ಎಂಟ್ರಿ ಕೊಟ್ಟ ಜನರು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳನ್ನ ಖರೀದಿಸಿದರು. ಹೂ-ಹಣ್ಣು, ಎಕ್ಕದ ಹೂ ಹಾರ, ಗರಿಕೆಗೆ ಸಖತ್ ಡಿಮ್ಯಾಂಡ್ ಇದ್ದು, ಖರೀದಿಗೆ ಬಂದವರಿಗೆ ಹೂ-ಹಣ್ಣಿನ ಸ್ವಲ್ಪ ಮಟ್ಟಿನ ದರ ಹೆಚ್ಚಳದಿಂದ ಕೊಂಚ ಬೇಸರವಾದರೂ, ಹಬ್ಬಕ್ಕೆ ಭರ್ಜರಿಯಾಗೇ ಶಾಪಿಂಗ್ ಮಾಡಿದರು.
ಇನ್ನು ಬೆಂಗಳೂರಿನ ಹಲವೆಡೆ ಕೆಲ ಸಂಘ-ಸಂಸ್ಥೆಗಳು, ಯುವಕರು ಸೇರಿ ಮಕ್ಕಳು , ಅಕ್ಕಪಕ್ಕದ ಏರಿಯಾ ನಿವಾಸಿಗಳಿಗೆ ಮಣ್ಣಿನ ಗೌರಿ-ಗಣೇಶ ಮೂರ್ತಿ ಹಂಚಿ ಸಂಭ್ರಮಿಸಿದರು. ಇತ್ತ ಕಾಕ್ಸ್ ಟೌನ್ ನಲ್ಲಿ ನಟಿ ತಾರಾ ಅನುರಾಧ ಪೌರಕಾರ್ಮಿಕರಿಗೆ ಮಣ್ಣಿನ ಗಣಪನ ಮೂರ್ತಿಗಳನ್ನ ಹಂಚುವ ಮೂಲಕ ಹಬ್ಬಕ್ಕೆ ಶುಭಕೋರಿದರು.
ಇನ್ನು ಈ ಬಾರೀ ಗೌರಿ-ಗಣೇಶ ಹಬ್ಬ ಎರಡು ಒಟ್ಟಿಗೆ ಬಂದಿರೋದರಿಂದ ಜನರು ಇಬ್ಬರನ್ನೂ ಬರ ಮಾಡಿಕೊಳ್ಳೋಕೆ ಸಜ್ಜಾಗಿದ್ದಾರೆ. ಅಕಾಲಿಕ ಮಳೆಯಿಂದ ಹಬ್ಬಕ್ಕೂ ಕೊಂಚ ಎಫೆಕ್ಟ್ ತಟ್ಟಿದ್ದು ಹೂ-ಹಣ್ಣುಗಳ ದರ ನಿಯಮಿತವಾಗಿ ಏರಿಕೆಯಾಗಿದೆ. ಸದ್ಯ ಯಾವ್ಯಾವ ಹೂ-ಹಣ್ಣಿನ ಬೆಲೆ ಹೇಗಿದೆ ಅಂತಾ ನೋಡುವುದಾದರೆ,
ಗಗನಕ್ಕೇರಿದ ಹೂಗಳ ದರ (KG):
ಮಲ್ಲಿಗೆ : ಕೆಜಿಗೆ 1,000 ರಿಂದ 1,200 ರೂ.
ಸೇವಂತಿಗೆ: 20 ರಿಂದ 350 ರೂ.
ಗುಲಾಬಿ: 250 ರಿಂದ 300 ರೂ.
ಕನಕಾಂಬರ: 1,000 ದಿಂದ 1,200 ರೂ.
ಹಣ್ಣುಗಳ ದರ (KG):
ಏಲಕ್ಕಿ ಬಾಳೆ: 120 ರಿಂದ 140 ರೂ
ಅನಾನಸ್ : 70 ರಿಂದ 120 ರೂ.
ದಾಳಿಂಬೆ: 150 ರಿಂದ 200 ರೂ.
ಸೇಬು : 250 ರಿಂದ 400 ರೂ.
ಒಟ್ಟಿನಲ್ಲಿ ದರ ಏರಿಕೆಯ ಮಧ್ಯೆ ಕೂಡ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಗೌರಿ-ಗಣೇಶರನ್ನ ಬರಮಾಡಿಕೊಳ್ಳುವ ಕಾತುರದಲ್ಲಿ ಜನರು ಕಾದು ಕುಳಿತಿದ್ದಾರೆ. ನಾಳೆಯಿಂದ ಗಲ್ಲಿ ಗಲ್ಲಿಯಲ್ಲೂ ಗಣಪನ ಗುಣಗಾನ ನುಡಿಸೋಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗಿ ನಿಂತಿದ್ದಾರೆ.


Click it and Unblock the Notifications