ಸಾಮಾನ್ಯ ಭವಿಷ್ಯ ನಿಧಿ (GPF) ಯ ಬಡ್ಡಿದರವನ್ನು ಸಾಮಾನ್ಯವಾಗಿ ಒಂದು ಹಣಕಾಸು ವರ್ಷದ ಕೊನೆಯಲ್ಲಿ ಜಮೆ ಮಾಡಲಾಗುತ್ತದೆ. ಆದರೆ ಚಂದಾದಾರರು ಮಾಡಿದ ಮನವಿಯನ್ನು ಪರಿಗಣಿಸಿರುವ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು ಉದ್ಯೋಗಿಗಳಿಗೆ ಸಿಹಿಸುದ್ದಿಯನ್ನು ನೀಡಿತ್ತು. ಆದರೆ ಈಗ ಉಲ್ಟಾ ಹೊಡೆದಿದೆ.
ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡಲು ಕೋರಲಾಗಿತ್ತು. ಅದರಂತೆ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಬಡ್ಡಿಯನ್ನು ವಾರ್ಷಿಕವಾಗಿ ಆರ್ಥಿಕ ವರ್ಷದ ಕೊನೆಯ ದಿನದಂದು ಜಮೆ ಮಾಡುವ ಬದಲು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡುವಂತೆ ಆದೇಶಿಸಲಾಗಿತ್ತು.

ಆದರೆ ಸಾಮಾನ್ಯ ಭವಿಷ್ಯ ನಿಧಿ ಖಾತೆಯ ಚಂದಾದರರ ಖಾತೆಗಳಿಗೆ ಮಾಸಿಕ ನೇರವಾಗಿ ಬಡ್ಡಿಯನ್ನು ಜಮಾ ಮಾಡುವುದರಿಂದ ಹೆಚ್ಚಿನ ಬಡ್ಡಿದರ ಪಾವತಿ ಮಾಡಿದಂತಾಗುತ್ತದೆ. ಒಟ್ಟಾರೆಯಾಗಿ ಬಡ್ಡಿ ಪಾವತಿಯಲ್ಲಿ ಹೆಚ್ಚಳವಾಗಿ ಸರ್ಕಾರದ ಖಜಾನೆಯಿಂದ ಹೆಚ್ಚುವರಿ ಹಣ ಖರ್ಚಾಗುತ್ತದೆ.
ಹಾಗೆಯೇ ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ ಪ್ರಕಾರ ಚಂದಾದಾರರ ಖಾತೆಯನ್ನು ಮುಕ್ತಾಯಗೊಳಿಸುವ / ಅಂತಿಮ ಹಿಂಪಡೆಯುವಿಕೆಯ ಸಂದರ್ಭದಲ್ಲಿ ಮಾತ್ರ ಆ ಆರ್ಥಿಕ ವರ್ಷದಲ್ಲಿ ಅದುವರೆಗೂ ಗಳಿಸಿದ ಸರಳ ಬಡ್ಡಿಯನ್ನು ವರ್ಷದ ಮಧ್ಯದಲ್ಲಿಯೇ ಲೆಕ್ಕ ಹಾಕಲಾಗುತ್ತದೆಂದು, ಎಲ್ಲಾ ಇತರ ಸಂದರ್ಭಗಳಲ್ಲಿ ಆರ್ಥಿಕ ವರ್ಷದ ಕೊನೆಯಲ್ಲಿ ಲೆಕ್ಕ ಹಾಕಿ ಜಮೆ ಮಾಡಲಾಗುತ್ತದೆ. ಈ ಅಂಶಗಳ ಹಿನ್ನೆಯಲ್ಲಿ ಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಜಮೆ ಮಾಡುವುದನ್ನು ಒಪ್ಪಲಾಗುವುದಿಲ್ಲವೆಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರವು ನೂತನ ಆದೇಶವನ್ನು ಹೊರಡಿಸಿದೆ. ನೂತನ ಆದೇಶದ ಪ್ರಕಾರ ರಾಜ್ಯದಲ್ಲಿ ಸಾಮಾನ್ಯ ಭವಿಷ್ಯ ನಿಧಿ ಚಂದಾದರರ ಖಾತೆಗೆ ಬಡ್ಡಿಯನ್ನು ವಾರ್ಷಿಕವಾಗಿ ಆರ್ಥಿಕ ವರ್ಷದ ಕೊನೆಯ ದಿನದಂದು ಜಮೆ ಮಾಡುವ ಬದಲು ಪ್ರತಿ ತಿಂಗಳ ಕೊನೆಯ ದಿನ ಜಮೆ ಮಾಡುವಂತೆ ಆದೇಶಿಸಲಾಗಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ.
ಏನಿದು ಸಾಮಾನ್ಯ ಭವಿಷ್ಯ ನಿಧಿ?
ಸಾಮಾನ್ಯ ಭವಿಷ್ಯ ನಿಧಿ (GPF) ಯೋಜನೆಯು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಒಂದು ವರ್ಷದವರೆಗೆ ನಿರಂತರ ಸೇವೆ ಸಲ್ಲಿಸಿದ ಎಲ್ಲಾ ತಾತ್ಕಾಲಿಕ ಸರ್ಕಾರಿ ನೌಕರರು ಎಲ್ಲಾ ಖಾಯಂ ನೌಕರರು ಮತ್ತು ಎಲ್ಲಾ ಮರು ಉದ್ಯೋಗಿ ಪಿಂಚಣಿದಾರರು (ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್‌ಗೆ ಪ್ರವೇಶಿಸಲು ಅರ್ಹರನ್ನು ಹೊರತುಪಡಿಸಿ) ಜಿಪಿಎಫ್ ಖಾತೆಯನ್ನು ತೆರೆಯಬಹುದು.
ಮಾಸಿಕ ವೇತನದ ಕನಿಷ್ಠ ಶೇಕಡ 6 ರಷ್ಟು ಜಿಪಿಎಫ್ ಖಾತೆಗೆ ನೀಡಬೇಕು. 2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ ಜಿಪಿಎಫ್ ಬಡ್ಡಿ ದರವು ಶೇಕಡ 7.1 ರಷ್ಟು ಇದೆ. ಜಿಪಿಎಫ್ ಯೋಜನೆಯನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ನಿರ್ವಹಿಸುತ್ತದೆ.


Click it and Unblock the Notifications