ಬೆಂಗಳೂರು, ನವೆಂಬರ್ 09: ಬೆಂಗಳೂರು ನಗರದ ರಸ್ತೆಗೆ ಇಳಿದ ಮೇಲೆ ಎಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತೇವೆ? ಎಂಬುದನ್ನು ಊಹಿಸುವುದು ಅಸಾಧ್ಯ. ಮಳೆ ಬಂದರೆ ನಗರದ ರಸ್ತೆಗಳಲ್ಲಿ ನೀರು ನಿಂತು ತಾಸು ಗಟ್ಟಲೇ ರಸ್ತೆಯಲ್ಲಿ ಕಾಯಬೇಕಾಗುತ್ತದೆ. ನಗರದ ಟ್ರಾಫಿಕ್ ಅಪ್‌ಟೇಟ್ ನೀಡಲು ಸಾಮಾಜಿಕ ಜಾಲತಾಣದಲ್ಲಿ ಹಲವು ಖಾತೆಗಳಿವೆ. ಆದರೆ ಈಗ ನಗರದ ಸಂಚಾರಿ ಪೊಲೀಸರೇ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಮಾಹಿತಿ ನೀಡಲು ಅಪ್ಲಿಕೇಶನ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಮುಂದಿನ ಎರಡು ತಿಂಗಳಿನಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ASTraM ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಲಿದ್ದಾರೆ. ನಿಮ್ಮ ಸುತ್ತಲಿನ 5 ಕಿ. ಮೀ. ಪ್ರದೇಶದ ಟ್ರಾಫಿಕ್ ಅಪ್‌ಡೇಟ್ ಈ ಅಪ್ಲಿಕೇಶನ್ ಮೂಲಕ ಬೆರಳ ತುದಿಯಲ್ಲಿ ನಿಮಗೆ ಸಿಗಲಿದೆ. ಟ್ರಾಫಿಕ್ ಸಂಬಂಧಿತ ಹಲವು ಸಮಸ್ಯೆಗಳಿಗೆ ಒಂದೇ ಅಪ್ಲಿಕೇಶನ್ ಪರಿಹಾರವಾಗಿದೆ.

ಜನರು ಈ ಅಪ್ಲಿಕೇಶನ್ ಸಹಾಯದಿಂದ ರಿಯಲ್ ಟೈಂ ಟ್ರಾಫಿಕ್ ಅಪ್‌ಡೇಟ್ ಪಡೆಯಬಹುದು, ನಿಮ್ಮ ಸುತ್ತಮುತ್ತ ನಡೆದ ರಸ್ತೆ ಅಪಘಾತಗಳ ಮಾಹಿತಿ ಅಪ್‌ಲೋಡ್ ಮಾಡಬಹುದು, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಕಟ್ಟಬಹುದು, ನಿಮ್ಮ ಸುತ್ತಲೂ ಯಾರಾದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಫೋಟೋ ತೆಗೆದು ದೂರು ನೀಡಬಹುದು.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕುರಿತು ಮಾಹಿತಿ ನೀಡಲು ಸದ್ಯ ಹಲವು ಸಾಮಾಜಿಕ ಜಾಲತಾಣದ ಪೇಜ್, ಗೂಗಲ್ ಮ್ಯಾಪ್ ಇದೆ. ಹಲವು ಸಲ ಜನರು ಇವುಗಳನ್ನು ನೋಡುವುದಿಲ್ಲ. ಆದ್ದರಿಂದ ಕೈಯಲ್ಲಿರುವ ಸ್ಮಾರ್ಟ್ ಫೋನ್‌ನಲ್ಲಿಯೇ ಮಾಹಿತಿ ಸಿಗಲು ಅನುಕೂಲವಾಗುವಂತೆ ಹೊಸ ಅಪ್ಲಿಕೇಶನ್ ಅನ್ನು ಪೊಲೀಸರು ಅಭಿವೃದ್ಧಿಗೊಳಿಸಿದ್ದಾರೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಬಗೆಹರಿಸಲು ಸಂಚಾರಿ ಪೊಲೀಸರು 26 ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಇದರಲ್ಲಿ ಈ ಅಪ್ಲಿಕೇಶನ್ ಕೂಡಾ ಒಂದು. ಇದಕ್ಕೆ ಸರ್ಕಾರದ ಒಪ್ಪಿಗೆಯೂ ಸಿಕ್ಕಿದ್ದು, ಖಾಸಗಿ ಸಂಸ್ಥೆಗಳಿಂದ ಅಪ್ಲಿಕೇಶನ್ ನಿರ್ವಹಣೆ ಮಾಡಲು ಟೆಂಡರ್ ಕರೆಯಲಾಗುತ್ತದೆ. ಬಳಿಕ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುತ್ತದೆ. ಸುಮಾರು 3 ತಿಂಗಳಿನಲ್ಲಿ ಈ ಅಪ್ಲಿಕೇಶನ್ ಜನರಿಗೆ ಲಭ್ಯವಿರಲಿದೆ.
ಅಪ್ಲಿಕೇಶನ್ ಅನ್ನು ಸಂಚಾರಿ ಪೊಲೀಸರು ಈಗಾಗಲೇ ಬಳಕೆ ಮಾಡುತ್ತಿದ್ದಾರೆ. ನಗರದ ಸಂಚಾರ ದಟ್ಟಣೆ ಕುರಿತು ಈ ಅಪ್ಲಿಕೇಶನ್‌ನಲ್ಲಿಯೇ ಮಾಹಿತಿ ಅಪ್‌ಡೇಟ್ ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರು 21 ಮೇಜರ್ ಟ್ರಾಫಿಕ್ ಕಾರಿಡಾರ್‌ಗಳನ್ನು ನಗರದಲ್ಲಿ ಗುರುತಿಸಿದ್ದಾರೆ. ಇವುಗಳ ಬಗ್ಗೆ ಮಾತ್ರ ಅಪ್‌ಡೇಟ್ ನೀಡಲಾಗುತ್ತದೆ. ಆದರೆ ಯೋಜನೆಯಡಿ ಇಡೀ ನಗರದ ಮಾಹಿತಿ ಲಭ್ಯವಾಗಲಿದೆ.
ಹೊಸ ಅಪ್ಲಿಕೇಶನ್ ಕುರಿತು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ. "ಹೊಸ ಒನ್-ಸ್ಟಾಪ್ ಅಪ್ಲಿಕೇಶನ್ ಜನರಿಗೆ 5 ಕಿ. ಮೀ. ವ್ಯಾಪ್ತಿಯ ಸಂಚಾರ ದಟ್ಟಣೆಯ ಕುರಿತು ರಿಯಲ್ ಟೈಂ ಮಾಹಿತಿ ನೀಡಲಿದೆ. ರಸ್ತೆ ಅಪಘಾತಗಳ ಕುರಿತು ಅಪ್‌ಡೇಟ್ ಪಡೆಯಲು ಸಹಾಯ ಒದಗಿಸಲಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡವನ್ನು ಇದರ ಮೂಲಕ ಪಾವತಿ ಮಾಡಬಹುದು" ಎಂದು ತಿಳಿಸಿದ್ದಾರೆ.
"ಸಂಚಾರಿ ಪೊಲೀಸರು ಉಳಿದಂತೆ ಶಾಲೆಗಳಿಗೆ ಸುರಕ್ಷಿತ ಮಾರ್ಗ, 150 ಸೋಲಾಕ್ ಬ್ಲಿಂಕ್ಸ್, 500 ಬಾಡಿ ವೋರ್ನ್ ಕ್ಯಾಮರಾ ಸೇರಿದಂತೆ ಇತರ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಎಲ್ಲದಕ್ಕೂ ಶೀಘ್ರವೇ ಟೆಂಡರ್ ಕರೆದು, ಜನವರಿಯಲ್ಲಿ ಎಲ್ಲವನ್ನೂ ಪೂರ್ಣಗೊಳಿಸುವ ಗುರಿ ಪೊಲೀಸರ ಮುಂದಿದೆ" ಎಂದು ಅನುಚೇತ್ ಹೇಳಿದ್ದಾರೆ.
ಸದ್ಯ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್‌ಬುಕ್ ಮೂಲಕ ಟ್ರಾಫಿಕ್ ಅಪ್‌ಡೇಟ್ ನೀಡುತ್ತಿದ್ದಾರೆ. ಆದರೆ ಹೊಸ ಅಪ್ಲಿಕೇಶನ್ ಬಂದರೆ ಇನ್ನಷ್ಟು ವೇಗವಾಗಿ ಅಪ್‌ಡೇಟ್ ಜನರಿಗೆ ಸಿಗಲಿದೆ.


Click it and Unblock the Notifications