ಜಾಗತಿಕ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲ ಬಗೆಯ ಅಕ್ಕಿಯ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಭಾರತದ ಕುಸುಬಲಕ್ಕಿ ಮತ್ತು ಥಾಯ್ಲೆಂಡ್‌ನ ಬಿಳಿ ಅಕ್ಕಿ ಹೊರತುಪಡಿಸಿ ಉಳಿದೆಲ್ಲ ಅಕ್ಕಿ ಪ್ರತಿ ಟನ್‌ಗೆ 600 ಡಾಲರ್‌ಗಿಂತ ಅಧಿಕ ಬೆಲೆಯಲ್ಲಿ ಅಕ್ಕಿ ವ್ಯಾಪಾರವು ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಜುಲೈ 20 ರಂದು ಭಾರತವು ಬಾಸ್ಮತಿಯೇತರ ರಫ್ತಿನ ಮೇಲೆ ನಿಷೇಧವನ್ನು ಹೇರಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಸುಮಾರು 15 ವರ್ಷಗಳಲ್ಲೇ ಈಗ ಅಕ್ಕಿ ಬೆಲೆಯಲ್ಲಿ ಗರಿಷ್ಠ ಏರಿಕೆಯಾಗಿದೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂ ಅಕ್ಕಿ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ ಎಂದು ಜಾಗತಿಕ ವ್ಯಾಪಾರಿಗಳು ಈಗ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಭಾರತವು ಕುಸುಬಲಕ್ಕಿ ಮೇಲೆ ನಿರ್ಬಂಧವನ್ನು ಹೇರುವ ಸಾಧ್ಯತೆಯಿದೆ ಎಂಬುವುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಜಾಗತಿಕ ಗ್ರಾಹಕರಲ್ಲಿ ಆತಂಕ
ಜುಲೈ 20, 2023 ರಂದು ಭಾರತವು ಬಾಸ್ಮತಿ ಅಲ್ಲದ ಇತರೆ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿದೆ. ಇದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವೀಡಿಯೊಗಳು ವೈರಲ್ ಆಗಿದೆ. ಇದರಿಂದಾಗಿ ವಿದೇಶಿ ಖರೀದಿದಾರು ಆತಂಕದಲ್ಲಿ ಅಕ್ಕಿಯನ್ನು ಖರೀದಿ ಮಾಡಲು ಆರಂಭಿಸಿದರು.
Open Market: ಬೆಲೆ ಏರಿಕೆ ತಡೆಗೆ ಸರ್ಕಾರದ ಕ್ರಮ, ಹೆಚ್ಚುವರಿ ಅಕ್ಕಿ, ಗೋಧಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ
ಬಾಸ್ಮತಿ ಹೊರತುಪಡಿಸಿ ಇತರೆ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧದ ನಂತರ ಭಾರತೀಯ ಕುಸುಬಲಕ್ಕಿ ಬೇಡಿಕೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದರ ರಫ್ತುಗಳನ್ನು ನಿಗ್ರಹಿಸಲು ಭಾರತ ಸರ್ಕಾರವು ಮಧ್ಯಪ್ರವೇಶಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತದೆ. ನಿಷೇಧದ ನಂತರವೂ, ಜುಲೈ 21 ಮತ್ತು ಆಗಸ್ಟ್ 17 ರ ನಡುವೆ ಸರಿಸುಮಾರು 7 ಲಕ್ಷ ಟನ್ ಅಕ್ಕಿಯನ್ನು ಈಗಾಗಲೇ ರಫ್ತು ಮಾಡಲಾಗಿದೆ. ಅಂದರೆ ರಫ್ತು ಶೇಕಡ 25ರಷ್ಟು ಏರಿಕೆಯಾಗಿದೆ.
ಎಲ್ ನಿನೋ ಹವಾಮಾನದ ಮಾದರಿಯು ಮತ್ತೆ ಆರಂಭವಾಗುತ್ತಿದ್ದಂತೆ ಹಲವಾರು ವಸ್ತುಗಳ ದರವು ಜಾಗತಿಕವಾಗಿ ಏರಿಕೆಯಾಗಿದೆ. ಎಲ್ ನಿನೊ ಎಂಬುವುದು ಪೂರ್ವ ಪೆಸಿಫಿಕ್, ಸೈಕ್ಲಿಕಲ್‌ನ ನೀರಿನ ತಾಪಮಾನ ಏರಿಕೆಗೆ ಸಂಬಂಧಿಸಿದ ಒಂದು ವಿದ್ಯಮಾನವಾಗಿದೆ, ಇದು ಪ್ರತಿ ಮೂರು ಅಥವಾ ಎಂಟು ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು 8-10 ತಿಂಗಳುಗಳವರೆಗೆ ಇರುತ್ತದೆ. ಈ ಕಾರಣದಿಂದಾಗಿ ಅಕ್ಕಿ ಬೆಲೆಯು ಮತ್ತಷ್ಟು ಏರಿಕೆಯ ನಿರೀಕ್ಷೆಯಿದೆ.
ಭಾರತವು ಜಾಗತಿಕ ಅಕ್ಕಿ ರಫ್ತಿನಲ್ಲಿ ಸರಿಸುಮಾರು ಶೇಕಡ 40ರಷ್ಟು ಕೊಡುಗೆ ನೀಡುತ್ತದೆ. ಇದರಿಂದಾಗಿ ಬಾಸ್ಮತಿಯೇತರ ರಫ್ತುಗಳನ್ನು ನಿಷೇಧಿಸುವ ಭಾರತದ ಕ್ರಮವು ಜಾಗತಿಕ ಅಕ್ಕಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಷ್ಯಾದಲ್ಲಿ ಅಕ್ಕಿ ರಫ್ತಿಗೆ ಪ್ರಮುಖ ಮೂಲ ದೇಶ ಭಾರತವಾಗಿದೆ.
ತೆರೆದ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ
ಆಹಾರ ಹಣದುಬ್ಬರ ಏರಿಕೆಯ ಮಧ್ಯೆ, ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಕ್ಕಿಯ ಮೀಸಲು ಬೆಲೆಯನ್ನು ಕೆಜಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಇದರಿಂದಾಗಿ ಅಕ್ಕಿ ಮೀಸಲು ಬೆಲೆ 29 ರೂಪಾಯಿ ಆಗಿದೆ. ಗೋಧಿಯ ಮೀಸಲು ಬೆಲೆ ಬದಲಾಗದೆ ಉಳಿದಿದೆ.
ಈ ಹಿಂದೆ 15 ಲಕ್ಷ ಟನ್ ಗೋಧಿ ಮತ್ತು 5 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈಗ ಇದನ್ನು ಏರಿಕೆ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಎಫ್‌ಸಿಐ ಇ-ಹರಾಜು ಮೂಲಕ 8 ಲಕ್ಷ ಟನ್ ಗೋಧಿ ಮತ್ತು 1,900 ಟನ್ ಅಕ್ಕಿಯನ್ನು ಮಾರಾಟ ಮಾಡಿದೆ. ಇತ್ತೀಚಿನ ಹರಾಜಿನಲ್ಲಿ ಬಿಡ್‌ದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಅಕ್ಕಿಯ ಮೀಸಲು ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


Click it and Unblock the Notifications