ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಮಂಗಳವಾರ (ಡಿಸೆಂಬರ್ 15, 2020) ಭಾರತದ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ಕೆಲವು ದೇಶಗಳಲ್ಲಿ ಮತ್ತೆ ಕೊರೊನಾ ನಿರ್ಬಂಧ ಹೇರಬಹುದು ಎಂಬ ಜಾಗತಿಕ ಸಕಾರಾತ್ಮಕ ಪ್ರಭಾವವು ಹಳದಿ ಲೋಹದ ಮೇಲೆ ಆಗಿದೆ. ಎಂಸಿಎಕ್ಸ್ ನಲ್ಲಿ ಫೆಬ್ರವರಿ ಚಿನ್ನದ ಫ್ಯೂಚರ್ಸ್ 0.2% ಹೆಚ್ಚಳವಾಗಿದ್ದು, ಪ್ರತಿ 10 ಗ್ರಾಮ್ ಗೆ 49,035 ತಲುಪಿದೆ.
ಇನ್ನು ಬೆಳ್ಳಿ ಫ್ಯೂಚರ್ಸ್ 0.26% ಗಳಿಕೆ ಕಂಡಿದ್ದು, ಕೇಜಿಗೆ 63,634 ರುಪಾಯಿ ಆಗಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯು 0.8% ಹಾಗೂ ಬೆಳ್ಳಿ ಬೆಲೆ 0.5% ಇಳಿಕೆ ಆಗಿತ್ತು. "ಎಂಸಿಎಕ್ಸ್ ನಲ್ಲಿ ಫೆಬ್ರವರಿ ಚಿನ್ನದ ಬೆಲೆಯು ಅಲ್ಪಾವಧಿಯ ರೆಸಿಸ್ಟೆನ್ಸ್ ಪ್ರತಿ 10 ಗ್ರಾಮ್ ಗೆ 50,200 ರುಪಾಯಿ ಆಗಿದ್ದರೆ, ಸಪೋರ್ಟ್ ಪ್ರತಿ 10 ಗ್ರಾಮ್ ಗೆ 48,500 ರುಪಾಯಿ ಇದೆ," ಎಂದು ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ಹೇಳಿದೆ.
ಆರ್ಥಿಕ ಉತ್ತೇಜನ ಪ್ಯಾಕೇಜ್ ಬಿಡುಗಡೆ ಹೊಯ್ದಾಟ ಮುಂದುವರಿಕೆ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ನಿರ್ಬಂಧಗಳನ್ನು ಹೇರಬಹುದು ಎಂಬ ಕಾರಣಕ್ಕೆ ಹೂಡಿಕೆದಾರರು ಚಿನ್ನದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಚಿನ್ನದ ಬೆಲೆಯು ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.2% ಹೆಚ್ಚಳವಾಗಿ $ 1831.9 ತಲುಪಿದೆ. ಇನ್ನು ಬೆಳ್ಳಿ ದರ 0.2% ಏರಿಕೆ ಕಂಡು, ಪ್ರತಿ ಔನ್ಸ್ ಗೆ $ 23.87 ಇದೆ. ಆದರೆ ಕೊರೊನಾಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿರುವುದರಿಂದ ಚಿನ್ನದ ದರದ ಏರಿಕೆಗೆ ಒಂದು ಮಿತಿ ನಿಗದಿ ಆಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇದರ ಜತೆಗೆ ಯುಎಸ್ ನಲ್ಲಿ ಆರ್ಥಿಕ ಉತ್ತೇಜನ ಪ್ಯಾಕೇಜ್ ಬಿಡುಗಡೆಗೆ ಸಂಬಂಧಿಸಿದಂತೆ ಹೊಯ್ದಾಟ ಮುಂದುವರಿದಿರುವುದು ಕೂಡ ಚಿನ್ನದ ದರ ನಿಗದಿ ಆಗುವ ಅಂಶಗಳಲ್ಲಿ ಒಂದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನು ಯುಎಸ್ ಡಾಲರ್ ಮೌಲ್ಯ ಇಳಿಕೆ ಆಗಿದ್ದು, ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕವು ಎರಡೂವರೆ ವರ್ಷಗಳ ಕನಿಷ್ಠ ಮಟ್ಟವನ್ನು ಮುಟ್ಟಿತು.
ಕೊರೊನಾದಿಂದ ಅತಿ ಹೆಚ್ಚು ಬಾಧಿತವಾದ ದೇಶ
ಕೊರೊನಾದಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ ಮತ್ತು ಲಾಕ್ ಡೌನ್ ಘೋಷಣೆಯು ಕೊರೊನಾ ಲಸಿಕೆಯ ಭರವಸೆಯನ್ನೂ ಮೀರಿ ಆತಂಕ ಮೂಡಿಸಿರುವುದರಿಂದ ಏಷ್ಯನ್ ಈಕ್ವಿಟಿ ಮಾರುಕಟ್ಟೆ ಇಳಿಕೆ ಕಂಡಿತು. ಲಂಡನ್ ನಲ್ಲಿ ಕೊರೊನಾ ನಿರ್ಬಂಧವನ್ನು ಬಿಗಿಗೊಳಿಸಲಾಗಿದೆ. ಹೊಸ ಬಗೆಯ ಕೊರೊನಾ ವೈರಾಣು ಹಿನ್ನೆಲೆಯಲ್ಲಿ ಸೋಂಕು ಪ್ರಮಾಣ ಹೆಚುತ್ತಿದ್ದುದರಿಂದ ಬ್ರಿಟನ್ ಸರ್ಕಾರ ಹೊಸದಾಗಿ ನಿರ್ಬಂಧ ಹೇರಿದೆ. ಇನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಸೋಮವಾರದಂದು ಕೊರೊನಾ ಸಾವಿನ ಪ್ರಕರಣವು 3 ಲಕ್ಷ ದಾಟಿದೆ. ಕೊರೊನಾದಿಂದ ಅತಿ ಹೆಚ್ಚು ಬಾಧಿತವಾದ ದೇಶ ಯುಎಸ್ ಎನಿಸಿಕೊಂಡಿದೆ.
ಇಟಿಎಫ್ ಹೂಡಿಕೆದಾರರು ಖರೀದಿಯಿಂದ ದೂರ
ಇಟಿಎಫ್ ಹೂಡಿಕೆದಾರರು ಇನ್ನೂ ಖರೀದಿಯಿಂದ ದೂರವೇ ಉಳಿದಿದ್ದಾರೆ. ವಿಶ್ವದ ಅತಿದೊಡ್ಡ ಚಿನ್ನದ ಇಟಿಎಫ್ ಫಂಡ್ ಆದ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಹೋಲ್ಡಿಂಗ್ಸ್ ನಲ್ಲಿ 0.4% ಇಳಿಕೆ ಆಗಿದ್ದು, ಸೋಮವಾರ 1,171.32 ಟನ್ ತಲುಪಿದೆ. ಈ ವಾರದಲ್ಲಿ ಆರಂಭವಾಗುವ ಯುಎಸ್ ಫೆಡರಲ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ನೀತಿ ಸಭೆ ಕಡೆಗೆ ಚಿನ್ನದ ವಹಿವಾಟುದಾರರು ಗಮನ ಇಟ್ಟುಕೊಂಡಿದ್ದಾರೆ. ಇನ್ನು ವಿವಿಧ ಮಾರುಕಟ್ಟೆಗಳ ಹೂಡಿಕೆದಾರರು ಯುಎಸ್ ನಿಂದ ಘೋಷಣೆ ಆಗಬಹುದಾದ ಕೊರೊನಾ ಆರ್ಥಿಕ ಪ್ಯಾಕೇಜ್ ಎದುರು ನೋಡುತ್ತಿದ್ದಾರೆ.


Click it and Unblock the Notifications