ಟರ್ಕಿಯಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. 99 ಟನ್, ಅಂದರೆ 99,000 ಕೇಜಿಯಷ್ಟು ಚಿನ್ನದ ನಿಕ್ಷೇಪ ಇದಾಗಿದ್ದು, ಎಷ್ಟೋ ದೇಶಗಳ ಜಿಡಿಪಿಗಿಂತ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಈ ಚಿನ್ನದ ಮೌಲ್ಯ ಹೆಚ್ಚಾಗುತ್ತದೆ. ಟರ್ಕಿಯ ಸುದ್ದಿ ಸಂಸ್ಥೆಯೊಂದರ ಪ್ರಕಾರ ಈ ಚಿನ್ನದ ಮೌಲ್ಯ 6 ಬಿಲಿಯನ್ ಯುಎಸ್ ಡಿ ಅಥವಾ 44,000 ಕೋಟಿ ರುಪಾಯಿಗೂ ಹೆಚ್ಚಾಗುತ್ತದೆ.
1 ಕೇಜಿ ಚಿನ್ನ ಅಂದರೆ, ಸಾವಿರ ಗ್ರಾಮ್ ಸೇರಬೇಕು. ಟರ್ಕಿಯಲ್ಲಿ ಸಿಕ್ಕಿರುವುದು 99,000 ಕೇಜಿ. ಅದನ್ನು ಗ್ರಾಮ್ ಗಳಿಗೆ ಪರಿವರ್ತಿಸಿದರೆ 9,90,00,000 ಗ್ರಾಮ್ (9 ಕೋಟಿಯ 90 ಲಕ್ಷ ಗ್ರಾಮ್) ಆಗುತ್ತದೆ. ಇವತ್ತಿನ ಲೆಕ್ಕಕ್ಕೆ ಭಾರತದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 4971 ರುಪಾಯಿ ಇದೆ.
ಯಾವುದಕ್ಕೂ ಹೋಲಿಕೆಗೆ ಇರಲಿ ಎಂದು ಕೆಲವು ದೇಶಗಳ ಜಿಡಿಪಿಯನ್ನು ಸಹ ನಿಮ್ಮೆದುರು ಇಡಲಾಗುತ್ತಿದೆ. ವರ್ಲ್ಡ್ ಮೀಟರ್ ಪ್ರಕಾರ, ಮಾಲ್ಡೀವ್ಸ್ ಜಿಡಿಪಿ 4.87 ಬಿಲಿಯನ್ ಯುಎಸ್ ಡಿ, ಲೈಬಿರಿಯಾ 3.29 ಬಿಲಿಯನ್ ಯುಎಸ್ ಡಿ, ಭೂತಾನ್ 2.53 ಬಿಲಿಯನ್ ಯುಎಸ್ ಡಿ, ಬುರಂಡಿ 3.17 ಬಿಲಿಯನ್ ಯುಎಸ್ ಡಿ ಮತ್ತು ಲೆಸೊಥೊ 2.58 ಬಿಲಿಯನ್ ಯುಎಸ್ ಡಿ.

ಅಷ್ಟೇ ಅಲ್ಲ, ಮಾರಿಟಾನಿಯಾ, ಬಾರ್ಬಡೋಸ್ ಮತ್ತು ಗಯಾನದ ಜಿಡಿಪಿ ಕೂಡ ಈಗ ಟರ್ಕಿಯಲ್ಲಿ ಸಿಕ್ಕಿರುವ ಚಿನ್ನದ ನಿಕ್ಷೇಪ ಮೌಲ್ಯಕ್ಕಿಂತ ಕಡಿಮೆ ಇದೆ. ಈ ಚಿನ್ನದ ನಿಕ್ಷೇಪವು ಕೇಂದ್ರ ಪಶ್ಚಿಮ ಟರ್ಕಿಯ ಸೊಗಟ್ ನಲ್ಲಿ ಪತ್ತೆಯಾಗಿದೆ. ಈ ಚಿನ್ನದ ಮೌಲ್ಯ 600 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಎಂಬುದನ್ನು ಟರ್ಕಿ ಅಧಿಕಾರಿಗಳು ಅಧಿಕೃತವಾಗಿ ಖಾತ್ರಿ ಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಟರ್ಕಿ ದೇಶವು ಚಿನ್ನದ ಉತ್ಪಾದನೆ ಹೆಚ್ಚು ಮಾಡಿಕೊಂಡು ಬಂದಿದೆ. ಅಲ್ಲಿನ ಸಚಿವರು ಹೇಳಿರುವ ಪ್ರಕಾರ, 38 ಟನ್ ಚಿನ್ನ ಉತ್ಪಾದಿಸುವ ಮೂಲಕ ಟರ್ಕಿ ತನ್ನದೇ ದಾಖಲೆ ಮುರಿದಿದೆ. ಮುಂದಿನ ಗುರಿ ಎಂಬಂತೆ ವರ್ಷಕ್ಕೆ ನೂರು ಟನ್ ಚಿನ್ನ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.
ಅಂದ ಹಾಗೆ, ಈಗ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಗಣಿಗಾರಿಕೆಯನ್ನು ಮುಂದಿನ ಎರಡು ವರ್ಷಗಳ ಕಾಲ ಮಾಡಲಾಗುತ್ತದೆ.


Click it and Unblock the Notifications