ಚಿನ್ನ ಮತ್ತು ಬೆಳ್ಳಿ ದರವು ಭಾರತದ ಮಾರುಕಟ್ಟೆಯಲ್ಲಿ ಸೋಮವಾರ (ಫೆಬ್ರವರಿ 8, 2021) ಇಳಿಕೆ ಕಂಡಿದೆ. ಅಂದ ಹಾಗೆ ಈ ಹಿಂದಿನ ಸೆಷನ್ ನಲ್ಲಿ ಭರ್ಜರಿ ಏರಿಕೆ ದಾಖಲಿಸಿತ್ತು. ಎಂಸಿಎಕ್ಸ್ ನಲ್ಲಿ ಚಿನ್ನದ ಫ್ಯೂಚರ್ಸ್ 0.12% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ ರು. 47,200 ಇದೆ. ಈ ಮೂಲಕ ಕಳೆದ ಆರು ಸೆಷನ್ ಪೈಕಿ ಐದರಲ್ಲಿ ಕುಸಿತ ಕಂಡಿದೆ.
ಬೆಳ್ಳಿ ಫ್ಯೂಚರ್ಸ್ 0.2% ಇಳಿಕೆ ಕಂಡು, ಕೇಜಿಗೆ ರು. 68,593 ತಲುಪಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನ 1.2% ಹೆಚ್ಚಳವಾಗಿದ್ದರೆ, ಬೆಳ್ಳಿ 2.8% ಮೇಲೇರಿತ್ತು. ಕಳೆದ ವರ್ಷ ಆಗಸ್ಟ್ ನಲ್ಲಿ ಚಿನ್ನವು ಸಾರ್ವಕಾಲಿಕ ದಾಖಲೆ ಮಟ್ಟವಾದ ರು. 56,200 ತಲುಪಿತ್ತು. ಆದರೆ ಈ ವರ್ಷ ಬಹಳ ಏರಿಳಿತ ಕಾಣುತ್ತಿದೆ.
ದೇಶೀ ಚಿನ್ನದ ದರ ಕುಸಿತ
ಯು.ಎಸ್. ಬಾಂಡ್ ಗಳಿಕೆ ಮತ್ತು ಡಾಲರ್ ಚಲನೆಗೆ ತಕ್ಕಂತೆ ಜಾಗತಿಕ ಮಟ್ಟದ ಚಿನ್ನದ ದರ ಕೂಡ ಭಾರೀ ಏರಿಳಿತ ಕಾಣುತ್ತಿದೆ. ಇದರ ಜತೆಗೆ, ಭಾರತೀಯ ಸರ್ಕಾರ ಬಜೆಟ್ ಮಂಡನೆ ವೇಳೆ ಆಮದು ಸುಂಕ ಕಡಿತ ಮಾಡಿರುವುದರಿಂದ ದೇಶೀ ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ. ಆಮದು ಸುಂಕ ಇಳಿಸಿದ ಮೇಲೆ ದೇಶೀ ಚಿನ್ನದ ದರ ಕುಸಿತವಾಗಿದೆ. ಇನ್ನು ಯು.ಎಸ್. ಡಾಲರ್ ಸೂಚ್ಯಂಕ ಹೆಚ್ಚಳ ಆಗಿದ್ದು ಮತ್ತು ಯು.ಎಸ್. ಬಾಂಡ್ ಗಳಿಕೆ ಸೇರಿಕೊಂಡು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರವು ಇಳಿಕೆ ಆಘಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬಡ್ಡಿ ದರ ಏರಿಕೆ ಮುಂದುವರಿದರೆ ಒಳ್ಳೆ ಸುದ್ದಿ ಅಲ್ಲ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಸೋಮವಾರ ಸ್ಥಿರವಾಗಿದ್ದು, ಈಕ್ವಿಟಿ ಮಾರ್ಕೆಟ್ ಹೊಸ ಎತ್ತರಕ್ಕೆ ಏರುವುದರೊಂದಿಗೆ ಚಿನ್ನದ ದರ ಔನ್ಸ್ ಗೆ (28.3495 ಗ್ರಾಮ್) $ 1,811.80ಯಲ್ಲಿ ಸ್ಥಿರವಾಗಿದೆ. ಯು.ಎಸ್. ಬಾಂಡ್ ಯೀಲ್ಡ್ಸ್ ಹೆಚ್ಚಾದ ಮೇಲೆ ಬುಲಿಯನ್ ಹೋಲ್ಡಿಂಗ್ ವೆಚ್ಚ ದುಬಾರಿ ಆಗುತ್ತದೆ. ಮುಂದುವರಿಯುತ್ತಿರುವ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮ, ಕೆಲವು ದೇಶಗಳಲ್ಲಿ ಇಳಿಕೆ ಆಗುತ್ತಿರುವ ಸೋಂಕು ಪ್ರಕರಣಗಳು ಅಪಾಯದ ಪ್ರಮಾಣ ಕಡಿಮೆ ಮಾಡಿದೆ. ಕಳೆದ ವಾರ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡು, $ 1786 ತಲುಪಿತ್ತು. ಒಂದು ವೇಳೆ ಯು.ಎಸ್. ನಲ್ಲಿ ಬಡ್ಡಿ ದರ ಏರಿಕೆ ಮುಂದುವರಿದರೆ ಅದು ಚಿನ್ನ ಒಳ್ಳೆ ಸುದ್ದಿ ಇಲ್ಲ. ಆಗ ಚಿನ್ನವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ ಎನ್ನುತ್ತಾರೆ ತಜ್ಞರು.
ಉತ್ತೇಜನಾ ಪ್ಯಾಕೇಜ್ ನಿಂದ ಹಣದುಬ್ಬರ ಹೆಚ್ಚಾಗುತ್ತದೆ
ಶುಕ್ರವಾರದಂದು ಬಿಡುಗಡೆಯಾದ ಯು.ಎಸ್. ಉದ್ಯೋಗ ದತ್ತಾಂಶದ ಪ್ರಕಾರ, ನಿರೀಕ್ಷೆ ಮಾಡಿದ್ದಕ್ಕಿಂತ ದುರ್ಬಲವಾಗಿದೆ. ಕೊರೊನಾ ಉತ್ತೇಜನಾ ಪ್ಯಾಕೇಜ್ ಅಗತ್ಯವನ್ನು ಈಗಿನ ದತ್ತಾಂಶವು ಮತ್ತಷ್ಟು ಬಲವಾಗಿ ಪ್ರತಿಪಾದಿಸುತ್ತದೆ. ಯು.ಎಸ್. ಅಧ್ಯಕ್ಷ ಜೋ ಬೈಡನ್ ಘೋಷಿಸಿರುವ $ 1.9 ಟ್ರಿಲಿಯನ್ ಅದೆಷ್ಟು ಶೀಘ್ರವಾಗಿ ಬಿಡುಗಡೆ ಆಗುತ್ತದೆ ಎಂದು ಎದುರು ನೋಡಲಾಗುತ್ತಿದೆ ಎನ್ನುತ್ತಾರೆ ತಜ್ಞರು. ಅಮೆರಿಕನ್ ಉತ್ತೇಜನಾ ಪ್ಯಾಕೇಜ್ ನಿಂದ ಹಣದುಬ್ಬರ ಹೆಚ್ಚಾಗಬಹುದು ಮತ್ತು ಆಸ್ತಿ ಬೆಲೆ ಹೆಚ್ಚಳ ಆಗುತ್ತದೆ ಎಂದು ಕೆಲವು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications