ಜಾಗತಿಕ ಮಟ್ಟದ ದುರ್ಬಲತೆ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದೆ. ಎಂಸಿಎಕ್ಸ್ ನಲ್ಲಿ ಸೋಮವಾರ (ಜನವರಿ 18, 2021) ಚಿನ್ನದ ಫ್ಯೂಚರ್ಸ್ ದರ 0.14% ಇಳಿಕೆ ಕಂಡು, ಒಂದು ತಿಂಗಳಿಗೂ ಹೆಚ್ಚು ಸಮಯದ ಕನಿಷ್ಠ ಮಟ್ಟ 10 ಗ್ರಾಮ್ ಗೆ 48,636 ರುಪಾಯಿ ತಲುಪಿದೆ. ಸತತ ಮೂರನೇ ದಿನ ಚಿನ್ನದ ದರದಲ್ಲಿ ಇಳಿಕೆ ಆಗಿದೆ. ಬೆಳ್ಳಿ ಬೆಲೆ 0.3% ಹೆಚ್ಚಳವಾಗಿ, ಕೇಜಿಗೆ ರು. 64,984 ತಲುಪಿದೆ.
ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯಲ್ಲಿ ರು. 500 ಇಳಿಕೆ ಕಂಡಿದ್ದರೆ, ಬೆಳ್ಳಿ ದರದಲ್ಲಿ ಕೇಜಿಗೆ ರು. 1700 ತಲುಪಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರಲ್ಲಿ ಇಂದು ತೀಕ್ಷ್ಣ ಇಳಿಕೆ ಆಗಿದೆ. ಅದಕ್ಕೆ ಕಾರಣ ಆಗಿರುವುದು ಯುಎಸ್ ಡಾಲರ್ ಪ್ರಬಲ ಆಗಿರುವುದು. ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,819.77 ಇತ್ತು. ಕಳೆದ ವಾರ 1% ಕುಸಿತ ಕಂಡಿತ್ತು.
ಇತರ ಬೆಲೆ ಬಾಳುವ ಲೋಹಗಳಾದ ಬೆಳ್ಳಿ ಹಾಗೂ ಪಲ್ಲಾಡಿಯಂ ಒತ್ತಡದಲ್ಲಿತ್ತು. ಬೆಳ್ಳಿ ದರವು ಔನ್ಸ್ ಗೆ 0.6% ಕುಸಿದು, ಔನ್ಸ್ ಗೆ $ 24.57 ಮತ್ತು ಪಲ್ಲಾಡಿಯಂ 0.2% ಇಳಿದು, $ 2377.49 ತಲುಪಿತು. ಆದರೆ ಪ್ಲಾಟಿನಂ 0.4% ಹೆಚ್ಚಳವಾಗಿ, $ 1078.19ಗೆ ಏರಿಕೆ ಆಗಿದೆ.
ಈ ವರ್ಷ ಇಲ್ಲಿಯ ತನಕ 3% ಇಳಿಕೆ ಕಂಡಿರುವ ಚಿನ್ನ
ಕಳೆದ ವರ್ಷ 25% ಏರಿಕೆ ಕಂಡಿದ್ದ ಚಿನ್ನದ ದರವು ಈ ವರ್ಷ ಇಲ್ಲಿಯ ತನಕ 3% ಇಳಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ದರ ಕುಸಿತ ಆಗಿರುವುದನ್ನು ಚಿನ್ನ ಅನುಸರಿಸಿದೆ. ಯುಎಸ್ ಟ್ರೆಷರಿ ರಿಟರ್ನ್ಸ್ ಹೆಚ್ಚಳ ಮತ್ತು ಡಾಲರ್ ನಿಂದ ಚಿನ್ನದ ಮೇಲೆ ಒತ್ತಡ ಆಗಿದೆ. ಕೇಂದ್ರ ಬ್ಯಾಂಕ್ ಗಳು ಮತ್ತು ಸರ್ಕಾರಗಳ ಆರ್ಥಿಕ ಉತ್ತೇಜನ ಪ್ಯಾಕೇಜ್ ಗಳಿಂದ ಚಿನ್ನಕ್ಕೆ ಖರೀದಿ ಬೆಂಬಲ ಸಿಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ವಿಶ್ವದಲ್ಲಿ ಅತಿ ದೊಡ್ಡ ಚಿನ್ನದ ವ್ಯವಹಾರ ನಡೆಸುವ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಅಥವಾ ಚಿನ್ನದ ಇಟಿಎಫ್, ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಶುಕ್ರವಾರದಂದು 1.4% ಏರಿಕೆ ಕಂಡು, 1,177.63 ಟನ್ ತಲುಪಿದೆ.
ಪ್ಲಾಟಿನಂ, ಬೆಳ್ಳಿ ಇತರ ಬೆಲೆ ಬಾಳುವ ಲೋಹಗಳು
ಸದ್ಯದ ತನಕ ಚಿನ್ನದ ಬೆಲೆಯು ಔನ್ಸ್ ಗೆ $ 1800 ಮೇಲ್ಮಟ್ಟ ಕಾಯ್ದುಕೊಳ್ಳಲು ಸಫಲವಾಗಿದೆ. ಆದರೆ ಔನ್ಸ್ ಗೆ $ 1860 ದಾಟಲು ಸಾಧ್ಯವಾಗುತ್ತಿಲ್ಲ. ಚಿನ್ನದ ದರದಲ್ಲಿ ಏರಿಳಿತಗಳನ್ನು ಕಾಣುವ ಸಾಧ್ಯತೆ ಇದೆ. ಆದರೆ ಕೊರೊನಾ ಉತ್ತೇಜನಾ ಪ್ಯಾಕೇಜ್ ಗಳ ಕಾರಣಕ್ಕೆ ಸಾಮಾನ್ಯವಾದ ನಿರೀಕ್ಷೆ ಏರಿಕೆ ಕಡೆಗೆ ಇದೆ ಎಂದು ಈಚೆಗೆ ಕೊಟಕ್ ಸೆಕ್ಯೂರಿಟೀಸ್ ಹೇಳಿದೆ. ಚಿನ್ನದ ಟ್ರೆಂಡ್ ನಲ್ಲಿ ಸ್ಪಷ್ಟತೆ ಸಿಗದ ಹೊರತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿಯಬಹುದು. ಯುಎಸ್ ಉತ್ತೇಜನಾ ಪ್ಯಾಕೇಜ್ ನಿಂದ ಕಮಾಡಿಟಿಗಳಿಗೆ ಬೆಂಬಲ ಸಿಗಬಹುದು ಎಂಬ ಕಾರಣಕ್ಕೆ ಸಾಮಾನ್ಯ ಆಲೋಚನೆ ಏನೆಂದರೆ, ದರ ಏರಿಕೆ ಆಗಬಹುದು ಎನ್ನುತ್ತಾರೆ.
1.9 ಲಕ್ಷ ಕೋಟಿ ಡಾಲರ್ ಪ್ರಸ್ತಾವ
ಇತರ ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ನಾಲ್ಕು ವಾರಗಳ ಗರಿಷ್ಠ ಮಟ್ಟದಲ್ಲಿ ಯುಎಸ್ ಡಾಲರ್ ಇದೆ. ಡಾಲರ್ ಸೂಚ್ಯಂಕವು ಇಂದು 0.03% ಹೆಚ್ಚಳವಾಗಿ 90.793ರಲ್ಲಿ ಇದೆ. ಕಳೆದ ವಾರ ಯು.ಎಸ್. ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮಾತನಾಡಿ, ಅಧಿಕಾರಕ್ಕೆ ಏರಿದ ನೂರು ದಿನದೊಳಗಾಗಿ 10 ಕೋಟಿ ಕೋವಿಡ್- 19 ಲಸಿಕೆ ಬೇಕು ಎಂದಿದ್ದಾರೆ. ಅದಕ್ಕೂ ಮುನ್ನ 1.9 ಲಕ್ಷ ಕೋಟಿ ಡಾಲರ್ ಉತ್ತೇಜನಾ ಪ್ಯಾಕೇಜ್ ಪ್ರಸ್ತಾವ ಮುಂದಿಟ್ಟರು. ಯು.ಎಸ್. ಡಾಲರ್ ಬಲವಾಗುತ್ತಿದ್ದಂತೆಯೇ ಇತರ ಕರೆನ್ಸಿಗಳನ್ನು ಇರಿಸಿಕೊಂಡವರಿಗೆ ಚಿನ್ನದ ದರವು ದುಬಾರಿ ಆಗಲಿದೆ. ಈ ಮಧ್ಯೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ನಿರೀಕ್ಷೆ ಮಾಡುವಂತೆ, ಈ ವರ್ಷ ಚಿನ್ನದ ಬೇಡಿಕೆ ಮತ್ತೆ ಬರಬಹುದು. ಕೊರೊನಾ ಲಸಿಕೆ ಬೇಡಿಕೆ ಹಾಗೂ ಜಾರಿಯಿಂದ ಚಿನ್ನದ ಮಾರಾಟಕ್ಕೆ ಉತ್ತೇಜನ ಸಿಗಬಹುದು.


Click it and Unblock the Notifications