ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ತೀಕ್ಷ್ಣ ಏರಿಕೆ ದಾಖಲಾಗಿದೆ. ಎಂಸಿಎಕ್ಸ್ ಚಿನ್ನದ ಫ್ಯೂಚರ್ಸ್ 650 ಅಥವಾ 1.3% ಏರಿಕೆ ಕಂಡು, ಪ್ರತಿ 10 ಗ್ರಾಮ್ ಗೆ 50,817 ರುಪಾಯಿಯಂತೆ ವಹಿವಾಟು ನಡೆಸಿತು. ಇನ್ನು ಬೆಳ್ಳಿ ಫ್ಯೂಚರ್ಸ್ 4% ಅಥವಾ 2500 ರುಪಾಯಿ ಹೆಚ್ಚಳವಾಗಿ, ಪ್ರತಿ ಕೇಜಿಗೆ 62,955 ರುಪಾಯಿಯಂತೆ ಶುಕ್ರವಾರ ವ್ಯವಹಾರ ನಡೆಸಿತು.
ಯುಎಸ್ ಡಾಲರ್ ಮೌಲ್ಯದಲ್ಲಿನ ಇಳಿಕೆ, ಕೊರೊನಾ ಬಿಕ್ಕಟ್ಟಿಗಾಗಿ ಆರ್ಥಿಕ ಉತ್ತೇಜನಾ ಕ್ರಮಗಳ ಘೋಷಣೆ ಮಾಡುವ ಭರವಸೆ ಮೇಲೆ ಜಾಗತಿಕ ದರವು ಮೇಲಕ್ಕೆ ಹೋಯಿತು. "ಡಾಲರ್ ಮೌಲ್ಯದಲ್ಲಿನ ಇಳಿಕೆ ಹಾಗೂ ಯುಎಸ್ ಆರ್ಥಿಕ ಉತ್ತೇಜನದ ನಿರೀಕ್ಷೆಯಲ್ಲಿ ಬೆಲೆಬಾಳುವ ಲೋಹಗಳ ದರದಲ್ಲಿ ಮೇಲೇರಿದೆ. ಜಾಗತಿಕ ದರವನ್ನು ಅನುಸರಿಸಿ ಎಂಸಿಎಕ್ಸ್ ನಲ್ಲೂ ಚಿನ್ನ, ಬೆಳ್ಳಿ ದರ ಹೆಚ್ಚಳವಾಗಿದೆ," ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಹೇಳಿದೆ.
ಪ್ರತಿ ಔನ್ಸ್ ಗೆ $ 1,925ರಲ್ಲಿ ವಹಿವಾಟು
ಯುಎಸ್ ಚಿನ್ನದ ಫ್ಯೂಚರ್ಸ್ ಶುಕ್ರವಾರದಂದು ಪ್ರತಿ ಔನ್ಸ್ ಗೆ (28.3495 ಗ್ರಾಮ್) 2% ಗೂ ಹೆಚ್ಚು ಏರಿಕೆಯಾಗಿ $ 1,925ರಲ್ಲಿ ವಹಿವಾಟು ನಡೆಸಿತು. ಜೋ ಬಿಡೆನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಹೆಚ್ಚಿದ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ 0.7% ಇಳಿಯಿತು. ಈ ಮೂಲಕ ಯಾರು ಇತರ ಕರೆನ್ಸಿಗಳನ್ನು ಇಟ್ಟುಕೊಂಡಿರುತ್ತಾರೋ ಅವರಿಗೆ ಚಿನ್ನ ಅಗ್ಗವಾಯಿತು.
ಈ ವರ್ಷ ಚಿನ್ನದ ದರದಲ್ಲಿ 26% ಏರಿಕೆ
ಕಡಿಮೆ ಬಡ್ಡಿ ದರ ಹಾಗೂ ಕೊರೊನಾ ವೈರಾಣುವಿನಿಂದ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರವಾಗಿ ಕೇಂದ್ರ ಬ್ಯಾಂಕ್ ಗಳಿಂದ ನೋಟು ಮುದ್ರಣ ಮಾಡುತ್ತಿರುವುದರಿಂದ ಈ ವರ್ಷ ಚಿನ್ನದ ದರದಲ್ಲಿ 26% ಏರಿಕೆಯಾಗಿದೆ. ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರು ಆರ್ಥಿಕ ಪ್ಯಾಕೇಜ್ ಸಾಧ್ಯತೆ ಇನ್ನಷ್ಟು ಹೆಚ್ಚಿಸಿದ್ದು, ಚಿನ್ನವು ಮತ್ತಷ್ಟು ಆಕರ್ಷಕ ಆಗುವಂತೆ ಮಾಡಿದೆ ಎನ್ನುತ್ತಾರೆ ವಿಶ್ಲೇಷಕರು.
ದೊಡ್ಡ ಮೊಟ್ಟದ ಪ್ಯಾಕೇಜ್ ಬರಲಿದೆ: ಟ್ರಂಪ್
ಚುನಾವಣೆಗೆ ಮುಂಚೆ ಕೊರೊನಾ ಆರ್ಥಿಕ ಪ್ಯಾಕೇಜ್ ನಿರೀಕ್ಷೆಯನ್ನು ಟ್ರಂಪ್ ಆಡಳಿತ ಹೆಚ್ಚು ಮಾಡುತ್ತಿದೆ. ಶುಕ್ರವಾರದಂದು ಟ್ರಂಪ್ ಟ್ವೀಟ್ ಮಾಡಿ, ಕೊರೊನಾ ಪರಿಹಾರ ಮಾತುಕತೆ ನಡೆಯುತ್ತಿದೆ. ದೊಡ್ಡ ಮೊಟ್ಟದ ಪ್ಯಾಕೇಜ್ ಬರಲಿದೆ ಎಂದಿದ್ದಾರೆ. ಡಾಲರ್ ಮೌಲ್ಯದಲ್ಲಿ ಇನ್ನಷ್ಟು ಕುಸಿತವಾದಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಗೆ ಕಾರಣ ಆಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಏಳನೇ ಕಂತಿನ ಸವರನ್ ಗೋಲ್ಡ್ ಬಾಂಡ್
ಭಾರತದಲ್ಲಿ ಏಳನೇ ಕಂತಿನ ಸವರನ್ ಗೋಲ್ಡ್ ಬಾಂಡ್ ಗಳು ಸೋಮವಾರದಂದು ಸಬ್ ಸ್ಕ್ರಿಪ್ಷನ್ ಆರಂಭಿಸುತ್ತದೆ. ಸವರನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯಲ್ಲಿ ಪ್ರತಿ ಗ್ರಾಮ್ ಗೆ 5,051 ರುಪಾಯಿ ಎಂದು ನಿಗದಿ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೇಳಿಕೆಯಲ್ಲಿ ತಿಳಿಸಲಾಗಿದೆ.


Click it and Unblock the Notifications