ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಥಾಳೆಕ್ಕೋಡ್ ಎಂಬ ಗ್ರಾಮ ಪಂಚಾಯಿತಿ ಇದೆ. ಯಾವಾಗ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಣೆ ಆಯಿತೋ ಆಗ ಇಲ್ಲಿ ಒಂದು ಸ್ಪರ್ಧೆ ಘೋಷಣೆ ಮಾಡಿದ್ದಾರೆ. ಯಾವ ಕುಟುಂಬದವರು ಲಾಕ್ ಡೌನ್ ಅವಧಿಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದಿಲ್ಲವೋ ಅಂಥ ಕುಟುಂಬಕ್ಕೆ ಪಂಚಾಯಿತಿಯಿಂದ ಬಹುಮಾನ ಸಿಗುತ್ತದೆ.
ಲಾಕ್ ಡೌನ್ ಮುಗಿದ ಮೇಲೆ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಮೊದಲ ಬಹುಮಾನವಾಗಿ ನಾಲ್ಕು ಗ್ರಾಮ್ ಚಿನ್ನ, ಎರಡನೇ ಬಹುಮಾನ ರೆಫ್ರಿಜರೇಟರ್ ಹಾಗೂ ಮೂರನೇ ಬಹುಮಾನ ವಾಷಿಂಗ್ ಮಷೀನ್. ಅಷ್ಟೇ ಅಲ್ಲ, ಐವತ್ತು ಸಮಾಧಾನಕರ ಬಹುಮಾನಗಳು ಸಹ ಇವೆ.
ಲಾಕ್ ಡೌನ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವವರಿಗೆ ಬಹುಮಾನ ನೀಡಬೇಕು ಅಂತ ನನಗೆ ಅನ್ನಿಸಿತು ಎಂದು ಪಂಚಾಯಿತಿ ಅಧ್ಯಕ್ಷರಾದ ಎ.ಕೆ. ನಾಸರ್ ಹೇಳಿದ್ದಾರೆ. "ಏಪ್ರಿಲ್ 6ನೇ ತಾರೀಕು ಈ ಯೋಜನೆ ಬಗ್ಗೆ ತೀರ್ಮಾನ ಮಾಡಿದೆವು. ಮರುದಿನವೇ ಅದನ್ನು ಜಾರಿಗೆ ತಂದೆವು. ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಾವಿರದಷ್ಟು ಕುಟುಂಬಗಳಿವೆ. ನಮ್ಮ ಜನರು ಮನೆಯೊಳಗೆ ಸುರಕ್ಷಿತವಾಗಿರಬೇಕು ಅನ್ನೋದು ನಮ್ಮ ಉದ್ದೇಶ. ಅದಕ್ಕಾಗಿ ಬಹುಮಾನ ನೀಡಲು ನಿರ್ಧರಿಸಿದೆವು. ಗಮನಿಸುವುದಕ್ಕೆ ಜನರನ್ನು ನೇಮಿಸಿದೆವು" ಎಂದಿದ್ದಾರೆ.

ಇದೀಗ ಲಾಕ್ ಡೌನ್ ಅವಧಿ ವಿಸ್ತರಣೆ ಆಗಿದ್ದರಿಂದ ಈ ಸ್ಪರ್ಧೆ ಯಾವಾಗ ಕೊನೆ ಮಾಡಬೇಕು ಎಂಬ ತೀರ್ಮಾನ ಮಾಡಬೇಕು. ಮೇ 3ಕ್ಕೆ ಅಂತಿಮ ಆಗಬಹುದು ಅನ್ನಿಸುತ್ತದೆ. ಇದನ್ನು ನಮ್ಮ ಪಂಚಾಯಿತಿ ತೀರ್ಮಾನಿಸುತ್ತದೆ. ಈ ಸ್ಪರ್ಧೆ ಕೊನೆ ಆದಮೇಲೆ, ಕುಟುಂಬಗಳಿಗೆ ಅಫಿಡವಿಟ್ ಸಲ್ಲಿಸಲು ತಿಳಿಸುತ್ತೇವೆ, ಯಾವ ಕುಟುಂಬ ಮನೆಯಿಂದ ಆಚೆ ಬಂದಿಲ್ಲ ಎಂಬುದನ್ನು ತಿಳಿಸಬೇಕು. ಅಂಥ ಎಲ್ಲ ಕುಟುಂಬಗಳಿಗೆ ಕೂಪನ್ ನೀಡುತ್ತೇವೆ. ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡುತ್ತೇವೆ" ಎಂದು ನಾಸರ್ ತಿಳಿಸಿದ್ದಾರೆ.


Click it and Unblock the Notifications