ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಬೆಂಗಳೂರನ್ನ ಟ್ರಾಫಿಕ್ ಸಿಟಿ ಅಂದರೂ ತಪ್ಪಾಗಲ್ಲ. ಯಾಕಂದ್ರೆ ಟ್ರಾಫಿಕ್ ಅನ್ನೋ ಕಿರಿ ಕಿರಿ ಮನೆ ಬಾಗಿಲಿಂದ ಹೊರಗೆ ಕಾಲಿಟ್ಟ ಕೂಡಲೇ ಹೆಗಲೇರುತ್ತೆ. ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಗೆ ಹೆಚ್ಚು ಪ್ರಸಿದ್ಧವಾದ ಸ್ಥಳಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರಮುಖವಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ಇಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವು ವರ್ಷಗಳಿಂದ ವಿವಿಧ ಯೋಜನೆಗಳು ಕೈಗೊಳ್ಳಲಾಗುತ್ತಿದ್ದು, ಇದೀಗ ವಾಹನ ಸವಾರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಗುವ ಸಾಧ್ಯತೆ ಕಾಣುತ್ತಿದೆ.

ಈ ಭಾಗದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ. ಸುಮಾರು 449 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಫ್ಲೈಓವರ್ 3.36 ಕಿಲೋಮೀಟರ್ ಉದ್ದ ಹೊಂದಿದ್ದು, ಲೂಪ್ ಹಾಗೂ ಇಳಿಜಾರುಗಳನ್ನು ಸೇರಿಸಿ ಒಟ್ಟು ಸುಮಾರು 5.12 ಕಿಲೋಮೀಟರ್ ವಿಸ್ತೀರ್ಣವಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ಸಂಚಾರ ಹೆಚ್ಚು ಸುಗಮವಾಗುವ ನಿರೀಕ್ಷೆ ಇದೆ.
ಈ ಫ್ಲೈಓವರ್ನ ಒಂದು ಭಾಗವನ್ನು ಈಗಾಗಲೇ 2024ರಲ್ಲಿ ಪ್ರಾಯೋಗಿಕವಾಗಿ ಸಂಚಾರಕ್ಕೆ ತೆರೆಯಲಾಗಿತ್ತು. ಆಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಗಿಗುಡ್ಡದಿಂದ ಎಚ್ಎಸ್ಆರ್ ಲೇಔಟ್, ಹೊಸೂರು ರಸ್ತೆ ಮತ್ತು ಬೊಮ್ಮನಹಳ್ಳಿ ಮಾರ್ಗದ ಫ್ಲೈಓವರ್ ಭಾಗವನ್ನು ಉದ್ಘಾಟಿಸಿದ್ದರು. ಇದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಇರುವ ಟ್ರಾಫಿಕ್ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾದುದು ಗಮನಿಸಲಾಯಿತು.
ಆದರೆ ಫ್ಲೈಓವರ್ನ ಇನ್ನೊಂದು ಭಾಗದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಪೂರ್ಣ ಮಾರ್ಗವನ್ನು ವಾಹನ ಸವಾರರು ಬಳಸಲು ಸಾಧ್ಯವಾಗಿರಲಿಲ್ಲ. ಇದರಿಂದ ಎಚ್ಎಸ್ಆರ್ ಲೇಔಟ್ ಹಾಗೂ ಔಟರ್ ರಿಂಗ್ ರೋಡ್ ಭಾಗದಿಂದ ಬರುವ ವಾಹನಗಳು ಇನ್ನೂ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಬಿಟಿಎಂ ಲೇಔಟ್ ಭಾಗಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದ್ದವು.
ಈಗ ಫ್ಲೈಓವರ್ನ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ. ಇನ್ನೂ ಕೆಲವು ಪೇಂಟಿಂಗ್ ಹಾಗೂ ವಿದ್ಯುತ್ ಸಂಬಂಧಿತ ಕೆಲಸಗಳು ಮಾತ್ರ ಬಾಕಿಯಿದ್ದು, ಅವು ಈ ತಿಂಗಳ ಕೊನೆಯೊಳಗೆ ಮುಗಿಯುವ ನಿರೀಕ್ಷೆಯಿದೆ. ಎಲ್ಲಾ ಕೆಲಸಗಳು ಪೂರ್ಣಗೊಂಡ ಬಳಿಕ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಈ ಮಾರ್ಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ತೆರೆಯುವ ಸಾಧ್ಯತೆ ಇದೆ.
ಈ ಮಾರ್ಗ ಸಂಚಾರಕ್ಕೆ ತೆರೆಯಲಾದ ಬಳಿಕ ಔಟರ್ ರಿಂಗ್ ರೋಡ್ ಮತ್ತು ಎಚ್ಎಸ್ಆರ್ ಲೇಔಟ್ ಭಾಗದಿಂದ ಬರುವ ವಾಹನ ಸವಾರರು ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ನಿಲ್ಲದೆ ನೇರವಾಗಿ ಫ್ಲೈಓವರ್ ಮೂಲಕ ಸಾಗುವ ಅವಕಾಶ ಪಡೆಯಲಿದ್ದಾರೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಿಲ್ಕ್ ಬೋರ್ಡ್ ಭಾಗದ ಜನರು ಮತ್ತು ವಾಹನ ಸವಾರರಿಗೆ ಶೀಘ್ರದಲ್ಲೇ ದೊಡ್ಡ ಮಟ್ಟದ ಪರಿಹಾರ ಸಿಗುವ ಸಾಧ್ಯತೆ ಕಾಣುತ್ತಿದೆ. ಯೋಜನೆಯಂತೆ ಎಲ್ಲವೂ ನಡೆದರೆ ಮುಂದಿನ ಕೆಲವು ವಾರಗಳಲ್ಲಿ ಈ ಡಬಲ್ ಡೆಕ್ಕರ್ ಫ್ಲೈಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿ ನಗರದ ಸಂಚಾರ ವ್ಯವಸ್ಥೆಗೆ ಸಹಾಯವಾಗಲಿದೆ.


Click it and Unblock the Notifications