ಕಲ್ಯಾಣ ಕರ್ನಾಟಕದ ಜನರಿಗೆ ಅತಿದೊಡ್ಡ ಗುಡ್‌ನ್ಯೂಸ್ ಸಿಕ್ಕಿದೆ. ಈಗ ಸರ್ಕಾರ ಚಿಂತನೆ ನಡೆಸುತ್ತಿರುವ ಈ ಯೋಜನೆ ಯಶಸ್ವಿಯಾದರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತದೆ. ಅದು ಯಾವ ಯೋಜನೆ ಗೊತ್ತಾ? ವಿಮಾನ ನಿಲ್ದಾಣ ಯೋಜನೆ. ಕಲ್ಯಾಣ ಕರ್ನಾಟಕದ ಈ ಒಂದು ಭಾಗದಲ್ಲಿ ಏರ್ಪೋರ್ಟ್ ಶುರುವಾದ್ರೆ, ಉದ್ಯೋಗ, ರಿಯಲ್ ಎಸ್ಟೇಟ್, ವ್ಯವಹಾರ ಎಲ್ಲದಕ್ಕೂ ಅನುಕೂಲ. ಹಾಗಾದ್ರೆ ಎಲ್ಲಿ ಈ ವಿಮಾಣ ನಿಲ್ದಾಣ ಅಂತೀರ? ಪೂರ್ತಿ ಓದಿ ತಿಳಿಯಿರಿ.

ಹೌದು, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ, ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚಿಂತನೆ ನಡೆಸುತ್ತಿದೆ. ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ವೈ.ಎಂ. ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯದ ಮೂಲಸೌಕರ್ಯ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ವಿಷಯವನ್ನು ವಿವರಿಸಿದರು. ಈ ಕುರಿತು ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಮುಖ್ಯಮಂತ್ರಿ ಅವರ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಯಾವ ಪ್ರದೇಶದಲ್ಲಿ ವಿಮಾನ ನಿಲ್ದಾಣ:
ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಈ ಮೂರು ಜಿಲ್ಲೆಗಳ ಮಧ್ಯಭಾಗದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ವಿಮಾನ ನಿಲ್ದಾಣ ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಮೊದಲು 2010ರಲ್ಲಿ ಆರಂಭವಾಗಿತ್ತು. ಆ ಸಮಯದಲ್ಲಿ ಸುಮಾರು 900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಖಾಸಗಿ ಸಂಸ್ಥೆಗೆ ನಿರ್ಮಾಣ ಕಾರ್ಯ ವಹಿಸಲಾಗಿತ್ತು. ಆದರೆ ನಿಯಮದಂತೆ ಎರಡು ವರ್ಷಗಳೊಳಗೆ ಕೆಲಸ ಆರಂಭವಾಗದೆ ಇದ್ದುದರಿಂದ ಆ ಸಂಸ್ಥೆಯೊಂದಿಗಿನ ಒಪ್ಪಂದವನ್ನು ಸರ್ಕಾರ ರದ್ದುಪಡಿಸಿತು. ನಂತರ ಯೋಜನೆಗಾಗಿ ಡಿಪಿಆರ್ ತಯಾರಿಸಲು ಸಲಹೆಗಾರರನ್ನು ನೇಮಿಸಲು ಕಳೆದ ಅಕ್ಟೋಬರ್ನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ವಿಜಯನಗರ ಮತ್ತು ಕೊಪ್ಪಳ ಭಾಗದ ಜನರೂ ತಮ್ಮ ಜಿಲ್ಲೆಗಳಿಗೆ ವಿಮಾನ ನಿಲ್ದಾಣ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಪ್ರತಿ ಜಿಲ್ಲೆಗೆ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸುವುದು ಸಾಧ್ಯವಿಲ್ಲ ಎಂಬ ಕಾರಣದಿಂದ ಮೂರೂ ಜಿಲ್ಲೆಗಳಿಗೆ ಅನುಕೂಲವಾಗುವ ಒಂದು ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ. ಆದರೆ ಈಗಾಗಲೇ ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಹಿಂದಿರುಗಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ದೇಶೀಯ ವಿಮಾನಯಾನ ಸೇವೆಗಳನ್ನು ಉತ್ತೇಜಿಸಲು ಪ್ರಯತ್ನಿಸಲಾಗಿದೆ. ಆರಂಭದಲ್ಲಿ ಕೆಲವು ವರ್ಷಗಳು ರಾಜ್ಯದ ಕೆಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಗಳು ಚೆನ್ನಾಗಿ ನಡೆದರೂ ನಂತರ ಪ್ರಯಾಣಿಕರ ಕೊರತೆಯಿಂದ ಬೀದರ್ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಂದ ಸೇವೆಗಳು ಸ್ಥಗಿತಗೊಂಡವು. ಇಂತಹ ಪರಿಸ್ಥಿತಿ ಬಳ್ಳಾರಿ ಭಾಗದಲ್ಲಿ ನಿರ್ಮಾಣವಾಗುವ ವಿಮಾನ ನಿಲ್ದಾಣಕ್ಕೂ ಬಾರದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಇದಕ್ಕಾಗಿ ಉಡಾನ್ ಯೋಜನೆಯನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೂರೂ ಜಿಲ್ಲೆಗಳಿಗೆ ಹೊಂದುವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಯೋಜನೆ ಆರ್ಥಿಕವಾಗಿ ಯಶಸ್ವಿಯಾಗಲಿದೆ ಎಂಬ ನಿರೀಕ್ಷೆ ಸರ್ಕಾರಕ್ಕಿದೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳನ್ನು ಆಕರ್ಷಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಕೆಲವು ಕಂಪನಿಗಳೊಂದಿಗೆ ಹೂಡಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ. ರಿಲಯನ್ಸ್ ಸಮೂಹದ ಕ್ಯಾಂಪಾಕೋಲಾ, ಪವನ ವಿದ್ಯುತ್ ಕ್ಷೇತ್ರದ ಸುಜ್ಲಾನ್ ಮತ್ತು ತೊಗರಿ ಬೇಳೆ ಸಂಸ್ಕರಣೆ ಮಾಡುವ ವಿಟೇರಾ ಕಂಪನಿಗಳು ಹೂಡಿಕೆ ಮಾಡಲು ಸಿದ್ಧವಾಗಿವೆ. ಕ್ಯಾಂಪಾಕೋಲಾ ಕಂಪನಿ ಮುಂದಿನ ವಾರದಲ್ಲೇ ತನ್ನ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಯೋಜಿಸಿದೆ. ಉಳಿದ ಕೆಲವು ಕಂಪನಿಗಳ ಜೊತೆ ಮಾತುಕತೆ ಮುಂದುವರಿದಿದೆ ಎಂದು ಅವರು ಹೇಳಿದರು.


Click it and Unblock the Notifications