ಬೆಂಗಳೂರು, ಜುಲೈ 16: ಕರ್ನಾಟಕದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್ ನೀಡಿದ್ದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಏಳನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಮಹತ್ವದ ನಿರ್ಧಾರಕ್ಕೆ ಕೊನೆಗೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಬಹು ನಿರೀಕ್ಷಿತ 7ನೇ ವೇತನ ಆಯೋಗದ ವರದಿಯ ಶಿಫಾರಸ್ಸು 2024 ಆಗಸ್ಟ್ 1 ರಿಂದ 7 ನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ.

ವೇತನ ಆಯೋಗ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಝದ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಈ ಮಧ್ಯೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ವಿಷಯ ನೇಪಥ್ಯಕ್ಕೆ ಸರಿದಿತ್ತು. ಚುನಾವಣೆ ಬಳಿಕ ಸರ್ಕಾರಿ ನೌಕರರು ಮತ್ತೆ ಒತ್ತಡ ಹಾಕಲು ಆರಂಭಿಸಿದ್ದರು ಅಲ್ಲದೇ 7ನೇ ವೇತನ ಆಯೋಗ ಜಾರಿಗೊಳಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಇನ್ನೊಂದೆಡೆ ಗ್ಯಾರಂಟಿಗಳಿಗೆ ವಾರ್ಷಿಕ ಹೆಚ್ಚುವರಿ 52,000 ಕೋಟಿಯಿಂದ 58,000 ಕೋಟಿ ರೂ. ಹೊರೆ ಕಾರಣಕ್ಕೆ ಸದ್ಯ ಆದಾಯ, ವೆಚ್ಚ ಸರಿದೂಗಿಸುವುದು ಕಷ್ಟವಾಗಿದೆ. ಹೀಗಾಗಿ ಇನ್ನಷ್ಟು ಹೊರೆಗೆ ಕಾರಣವಾಗುವ 7ನೇ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲಎಂದು ಹಣಕಾಸು ಇಲಾಖೆ ತಕರಾರು ತೆಗೆದಿತ್ತು.
ಆದರೆ ಸರ್ಕಾರಿ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿಗೆ ಸಾಕಷ್ಟು ಒತ್ತಡ ಸರ್ಕಾರದ ಮೇಲಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಮಾರ್ಚ್ 16 ರಂದು ಶೇ. 27.5 ರಷ್ಟು ವೇತನ ಪರಿಷ್ಕರಣೆ ಮಾಡುವ ಶಿಫಾರಸು ಒಳಗೊಂಡ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಬಳಿಕ ಸಿಎಂ, ಇದನ್ನು ಜಾರಿಗೆ ತರುವ ಬಗ್ಗೆ ಹಣಕಾಸು ಇಲಾಖೆಗೆ ಮಾಹಿತಿ ಕೇಳಿದ್ದರು. ಇದೀಗ ಹಣಕಾಸು ಇಲಾಖೆ ವರದಿ ಬಳಿಕ ಸಿದ್ದರಾಮಯ್ಯ ಅವರು ಆಗಸ್ಟ್ 1 ರಿಂದ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ.


Click it and Unblock the Notifications