ಮಾರ್ಚ್-ಏಪ್ರಿಲ್ ಬಂದರೆ ಸಾಕು, ಸಾಲು ಸಾಲು ರಜಾದಿನಗಳ ಪಟ್ಟಿಯೇ ಕ್ಯಾಲೆಂಡರ್‌ನಲ್ಲಿ ಕಾಣಿಸುತ್ತವೆ. ಅಲ್ಲದೇ ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬೇಸಿಗೆ ರಜೆಯನ್ನೂ (Summer Holidays) ನೀಡಲಾಗುತ್ತದೆ. ಎಷ್ಟೋ ಮಂದಿ ಈ ಬೇಸಿಗೆ ರಜೆಯಲ್ಲಿ ಕಾದು ಕುಳಿತು ಊರಿಗೆ ಹೋಗುತ್ತಾರೆ. ಇನ್ನೂ ಕೆಲವರು ಟ್ರಿಪ್, ಪಾರ್ಟಿ ಅಂತಾ ಸುತ್ತಾಡೋಕೆ ಪ್ಲಾನ್ ಮಾಡುತ್ತಾರೆ. ಆದರೆ ಅಂತಹ ಪೀಕ್ ಸಮಯದಲ್ಲಿ ರೈಲು, ಬಸ್ ನಿಲ್ದಾಣಗಳಲ್ಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದೀಗ, ಭಾರತೀಯ ರೈಲ್ವೇ ಇಲಾಖೆ (Indian Railways) ವಿಶೇಷ ಕ್ರಮ ಕೈಗೊಂಡಿದೆ.

ಬೇಸಿಗೆ ರಜೆಯ ದಟ್ಟಣೆಯನ್ನು ನಿಭಾಯಿಸುವ ಉದ್ದೇಶದಿಂದ ಭಾರತೀಯ ರೈಲ್ವೇ ವಿಶೇಷ ಕ್ರಮ ಕೈಗೊಂಡಿದೆ. ಮುಂಬೈ ಮತ್ತು ಮಹಾರಾಷ್ಟ್ರದಾದ್ಯಂತ 1,484 ವಿಶೇಷ ರೈಲುಗಳನ್ನು ಘೋಷಿಸಿದೆ. ಇವುಗಳಲ್ಲಿ 749 ರಿಸರ್ವ್ಡ್ ಮತ್ತು 735 ಅನ್‌ರಿಸರ್ವ್‌ಡ್ ರೈಲು ಸೇವೆಗಳಾಗಿದೆ. ಮುಂಬರುವ ಬೇಸಿಗೆ ರಜೆಯಲ್ಲಿ ಊರಿಗೆ ಹೋಗಲು, ಟ್ರಿಪ್ ಪ್ಲಾನ್ ಮಾಡಿರುವ ಲಕ್ಷಾಂತರ ಪ್ರಯಾಣಿಕರಿಗೆ ಈ ವಿಶೇಷ ರೈಲುಗಳು ಪ್ರಯೋಜನಕ್ಕೆ ಬರಲಿದೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್!
ಬೇಸಿಗೆ ರಜೆ ಹಿನ್ನೆಲೆ ಬಹಳಷ್ಟು ಜನರು ಎಲ್ಲಾದರೂ ಹೋಗುವ ಪ್ಲಾನ್ ಮಾಡಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್‌ನಲ್ಲಿ ದಟ್ಟಣೆಯನ್ನು ಕಮ್ಮಿ ಮಾಡುವ ಉದ್ದೇಶದಿಂದ, ರಜಾ ದಿನಗಳಲ್ಲಿ ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸುವುದು ಈ ವಿಶೇಷ ರೈಲು ಸೇವೆಗಳನ್ನು ಜಾರಿಗೆ ತರುವ ಹಿಂದಿನ ಮುಖ್ಯ ಉದ್ದೇಶವಾಗಿದೆ. ಕೇಂದ್ರ ರೈಲ್ವೆಯ ಮಾಹಿತಿಯ ಪ್ರಕಾರ, ಒಟ್ಟು 1,484 ಬೇಸಿಗೆ ವಿಶೇಷ ರೈಲುಗಳು ಮುಂದಿನ ತಿಂಗಳಿಂದ ಕಾರ್ಯಚರಣೆ ಪ್ರಾರಂಭಿಸುತ್ತದೆ. ಇವು ಮಹಾರಾಷ್ಟ್ರದ ಒಳಗಡೆ ಹಾಗೂ ಇತರ ರಾಜ್ಯಗಳ ವಿವಿಧ ಸ್ಥಳಗಳಿಗೆ ಹೋಗುವವರಿಗೆ ಅನುಕೂಲವಾಗಲಿದೆ.
ಇನ್ನು ಭಾರತೀಯ ರೈಲ್ವೇ ಇಲಾಖೆ ತಂದಿರುವ ಈ ವಿಶೇಷ ರೈಲುಗಳಿಂದಾಗಿ, ಸಾಮಾನ್ಯ ಸೇವೆ ಸಲ್ಲಿಸುವ ರೈಲುಗಳ ಮೇಲಿನ ಒತ್ತಡ ಕಮ್ಮಿಯಾಗಲಿದೆ. ಪ್ರತೀ ಬೇಸಿಗೆ ಬರುವಾಗಲೂ ರೈಲ್ವೇ ಸ್ಟೇಷನ್‌ಗಳಲ್ಲಿ ದಟ್ಟಣೆ, ಪ್ರಯಾಣಿಕರು ದೀರ್ಘಸಮಯ ಕಾಯುವುದು ಹೀಗೆ ಸಾಮಾನ್ಯವಾಗಿಬಿಟ್ಟಿದೆ. ಆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೀಗ ರೈಲ್ವೇ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ಪ್ರಕಾರ, ಮಹಾರಾಷ್ಟ್ರದೊಳಗಡೆ, ಮುಂಬೈ/ದೌಂಡ್-ಸೋಲಾಪುರ್, ಪುಣೆ-ಕೊಲ್ಲಾಪುರ, ನಾಸಿಕ್ ರಸ್ತೆ-ಬದ್ನೆರಾ ಮತ್ತು ಹಡಪ್ಸರ್-ಹಾರಂಗಲ್ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ಈ ವಿಶೇಷ ರೈಲುಗಳು ಸಂಚಾರ ಮಾಡಲಿದೆ ಎಂದು ಹೇಳಲಾಗಿದೆ.
ಕರ್ನಾಟಕಕ್ಕೂ ಬರಲಿದೆ ಈ ವಿಶೇಷ ರೈಲು
ಇತರ ರಾಜ್ಯಗಳಿಗೆ ಪ್ರಯಾಣಿಸುವವರಿಗೂ ಇದು ಪ್ರಯೋಜನವಾಗಲಿದೆ. ವಿಶೇಷವಾಗಿ ಮುಂಬೈ-ಬಲ್ಲಿಯಾ, ಮುಂಬೈ-ಗೋರಖ್‌ಪುರ್, ದೌಂಡ್-ಕಲಬುರಗಿ, ಸೋಲಾಪುರ್-ಕಲಬುರಗಿ ಪ್ರಮುಖ ಮಾರ್ಗಗಳ ಮೂಲಕ ಈ ರೈಲುಗಳು ಸಂಚಾರ ಮಾಡಲಿದೆ. ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಿ, ಪ್ರಯಾಣಿಕರಿಗೆ ತಮ್ಮ ಪ್ರಯಾಣವನ್ನು ಆರಾಮದಾಯಕವಾಗಿಸುವುದೇ ಈ ರೈಲು ಸೇವೆಯ ಮುಖ್ಯ ಉದ್ದೇಶ. ಇನ್ನೂ ಈ ವಿಶೇಷ ರೈಲಿನ ದರ, ವೇಳಾ ಪಟ್ಟಿ ಬಿಡುಗಡೆಯಾಗಿಲ್ಲ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.


Click it and Unblock the Notifications