ಸರ್ಚಿಂಗ್ ದೈತ್ಯ ಗೂಗಲ್, ಬ್ರಿಟಿಷ್ ಟೆಲಿಕಾಂ ಗ್ರೂಪ್ ವೊಡಾಫೋನ್ ಐಡಿಯಾ ವ್ಯವಹಾರದಲ್ಲಿ ಅಲ್ಪ ಪಾಲನ್ನು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಫೇಸ್ಬುಕ್, ರಿಲಯನ್ಸ್ ಜಿಯೋ ಕಂಪನಿಯ ಶೇ.9.99 ಷೇರನ್ನು 5.7 ಬಿಲಿಯನ್ ಡಾಲರ್ (43,574 ಕೋಟಿ ರೂ.) ನೀಡಿ ಖರೀದಿ ಮಾಡಿತ್ತು. ಇದೀಗ ಸರ್ಚಿಂಗ್ ದೈತ್ಯ ಗೂಗಲ್ ಕೂಡ ಅದೇ ನಿಟ್ಟಿನಲ್ಲಿ ಸಾಗುವ ಬಗ್ಗೆ ಯೋಚನೆ ಮಾಡುತ್ತಿದೆ.
ಜಾಗತಿಕ ತಂತ್ರಜ್ಞಾನದ ದೈತ್ಯನೆನಿಸಿಕೊಂಡಿರುವ ಗೂಗಲ್ ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಯ 5 ಪರ್ಸೆಂಟ್‌ರಷ್ಟು ಷೇರನ್ನು ಖರೀದಿ ಮಾಡಲು ನಿರ್ಧರಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ವೊಡಾಫೋನ್ ಐಡಿಯಾದ ಮಾರುಕಟ್ಟೆ ಮೌಲ್ಯ ಇಂದು (ಗುರುವಾರ) 16,724 ಕೋಟಿ ರುಪಾಯಿ ದಾಖಲಾಗಿದೆ. ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ಗೆ ಪ್ರತಿಸ್ಫರ್ಧಿಯಾಗಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಲಗ್ಗೆ ಇಟ್ಟಿತ್ತು. ಕಡಿಮೆ ಬೆಲೆಯಲ್ಲಿ ಡೇಟಾ ಸೌಲಭ್ಯ ನೀಡಿ ಸಂಚಲನ ಮೂಡಿಸಿತ್ತು. ಈಗ ಜಿಯೋದಲ್ಲಿ ಫೇಸ್ಬುಕ್ ಹೂಡಿಕೆ ಮಾಡಿದ ಬೆನ್ನಲ್ಲೇ, ಗೂಗಲ್ ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಗೂಗಲ್ ವಲಯದಲ್ಲಿಯೇ ಕೆಲಸ ಮಾಡುವವರೇ ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಯುಕೆಯ ಟೆಲಿಕಾಂ ಕಂಪನಿ ಮತ್ತು ಭಾರತದ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಪಾಲುದಾರಿಕೆಯಲ್ಲಿ ಇರುವ ವೊಡಾಫೋನ್ ಐಡಿಯಾ ಸದ್ಯ ತೀವ್ರವಾದ ಆರ್ಥಿಕ ಕುಸಿತ ಅನುಭವಿಸುತ್ತಿದೆ. ಇದೇ ಬೆನ್ನಲ್ಲೇ ಗೂಗಲ್ 5 ಪರ್ಸೆಂಟ್ ಷೇರು ಖರೀದಿಗೆ ಮುಂದಾಗಿದೆ. ಇದರ ಪ್ರಕ್ರಿಯೆಗಳು ಇನ್ನೂ ಪ್ರಾರಂಭಿಕ ಹಂತದಲ್ಲಿ ಇವೆ. ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಪ್ರಕಟಗೊಳ್ಳಬಹುದು ಎಂದು ಹೇಳಲಾಗಿದೆ.
ಈ ಕುರಿತು ಎರಡೂ ಕಂಪನಿಗಳು ಪ್ರತಿಕ್ರಿಯಿಸಲು ನಿರಾಕರಿಸಿದವು ಎನ್ನಲಾಗಿದೆ.


Click it and Unblock the Notifications