ಕಳೆದ ವರ್ಷದಲ್ಲಿ ಆರಂಭವಾದ ಉದ್ಯೋಗ ಕಡಿತವು ಇನ್ನೂ ಕೂಡಾ ಕೊನೆಯಾದಂತೆ ಕಾಣುತ್ತಿಲ್ಲ. ಈ ವರ್ಷವೂ ಕೂಡಾ ಉದ್ಯೋಗ ಕಡಿತವು ಮುಂದುವರಿದಿದೆ. ಹಲವಾರು ಪ್ರಮುಖ ಸಂಸ್ಥೆಗಳು ಬೇರೆ ಬೇರೆ ಹಂತಗಳಲ್ಲಿ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿದೆ. ಈಗ ಗೂಗಲ್ ಮತ್ತೆ ಲೇ ಆಫ್ ಅನ್ನು ಘೋಷಣೆ ಮಾಡಿದೆ.
ಗೂಗಲ್ ತನ್ನ ಸುದ್ದಿ ವಿಭಾಗದಲ್ಲಿ ಕನಿಷ್ಠ 40-45 ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ ವಕ್ತಾರರು ಈ ಉದ್ಯೋಗ ಕಡಿತದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಉದ್ಯೋಗ ಕಡಿತವನ್ನು ದೃಢಪಡಿಸಿದ ಗೂಗಲ್ ವಕ್ತಾರರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ನೂರಾರು ಜನರು' ಇನ್ನೂ ಗೂಗಲ್‌ನ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

"ನಾವು ವಿಸ್ತಾರವಾದ ಮಾಹಿತಿ ಪರಿಸರ ವ್ಯವಸ್ಥೆಗೆ ಬದ್ಧರಾಗಿದ್ದೇವೆ. ಸುದ್ದಿಯು ದೀರ್ಘಾವಧಿಯ ಹೂಡಿಕೆಯ ಒಂದು ಭಾಗವಾಗಿದೆ. ನಮ್ಮ ಸಂಸ್ಥೆಯನ್ನು ಸುವ್ಯವಸ್ಥಿತಗೊಳಿಸಲು ನಾವು ಕೆಲವು ಆಂತರಿಕ ಬದಲಾವಣೆಗಳನ್ನು ಮಾಡಿದ್ದೇವೆ. ಇದು ಕಡಿಮೆ ಸಂಖ್ಯೆಯ ಉದ್ಯೋಗಿಗಳ ಮೇಲೆ ಪ್ರಭಾವ ಉಂಟಾಗಿದೆ," ಎಂದು ವಕ್ತಾರರು ತಿಳಿಸಿದರು.
ಗೂಗಲ್ ನ್ಯೂಸ್ ಓದುಗರ ಆಸಕ್ತಿಗಳು ಮತ್ತು ಪ್ರದೇಶಗಳ ಆಧಾರದ ಮೇಲೆ ಉತ್ತಮ ಶ್ರೇಣಿಯ ಸುದ್ದಿ ಲೇಖನಗಳ ಸಂಗ್ರಹವಾಗಿದೆ. ನಾವು ಸರ್ಚ್ ಕೀವರ್ಡ್ ಅನ್ನು ಹಾಕಿ ಸರ್ಚ್ ಮಾಡಿ, ಅದಾದ ಬಳಿಕ ಸುದ್ದಿ' ಟ್ಯಾಬ್ ಅನ್ನು ಆಯ್ಕೆ ಮಾಡುವ ಮೂಲಕ ನಾವು ಈ ಗೂಗಲ್ ನ್ಯೂಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ನಮ್ಮ ಕೀವರ್ಡ್‌ಗೆ ಅನುಗುಣವಾಗಿ (ನಾವು ಏನು ಹಾಕಿ ಸರ್ಚ್ ಮಾಡಿರುತ್ತೇವೆ ಅದುವೇ ಕೀವರ್ಡ್) ಗೂಗಲ್ ನ್ಯೂಸ್‌ನಲ್ಲಿ ಇತ್ತೀಚಿನ ಸುದ್ದಿಗಳ ಪಟ್ಟಿ ಲಭ್ಯವಾಗುತ್ತದೆ.
ಈ ವರ್ಷದ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತವನ್ನು ಅನೇಕ ಟೆಕ್ ಕಂಪನಿಗಳು ಮಾಡಿದೆ. ಈಗ ಸದ್ಯಕ್ಕೆ ಉದ್ಯೋಗ ಕಡಿತ ಪ್ರಮಾಣ ಕಡಿಮೆಯಾಗಿದೆಯಾದರೂ ಕೂಡಾ ಸಂಪೂರ್ಣವಾಗಿ ಈ ಪ್ರಕ್ರಿಯೆಯು ನಿಂತಿಲ್ಲ. ಇತ್ತೀಚೆಗೆ ಲಿಂಕ್ಡಿನ್, ಕ್ವಾಲ್ಕಾಮ್, ಬ್ಯಾಂಡ್‌ಕ್ಯಾಂಪ್ ಮತ್ತು ಸ್ಟಾಕ್ ಓವರ್‌ಫ್ಲೋ ಉದ್ಯೋಗ ಕಡಿತವನ್ನು ಮಾಡಿದೆ.
ಇತ್ತೀಚೆಗೆ 668 ಉದ್ಯೋಗಿಗಳನ್ನು ಲಿಂಕ್ಡಿನ್ ವಜಾಗೊಳಿಸಿದೆ. ಈ ಸಂಸ್ಥೆಯು 2023 ರಲ್ಲಿ ಒಟ್ಟಾಗಿ 1,400 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅತಿದೊಡ್ಡ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ತಯಾರಕ ಸಂಸ್ಥೆಯು ಅಕ್ಟೋಬರ್ ತಿಂಗಳಿನಲ್ಲಿ 1,258 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆದರೆ ಕ್ಯಾಲಿಫೋರ್ನಿಯಾದ ಎರಡು ಕಚೇರಿಗಳಲ್ಲಿ ಮಾತ್ರ ಈ ವಜಾ ಪ್ರಕ್ರಿಯೆ ನಡೆದಿದೆ.
ಈ ವರ್ಷದ ಆರಂಭದಲ್ಲಿ, ಜನವರಿ 21 ರಂದು, ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ತಮ್ಮ ಜಾಗತಿಕ ಉದ್ಯೋಗಿಗಳನ್ನು ಶೇಕಡ 6 ರಷ್ಟು ಕಡಿತಗೊಳಿಸಲಾಗುತ್ತದೆ ಎಂದು ಘೋಷಿಸಿದೆ. 12,000 ಗೂಗಲ್ ಉದ್ಯೋಗಿಗಳು, ಆಲ್ಫಾಬೇಟ್‌ನ ಇತರೆ ವಿಭಾಗದ ಉದ್ಯೋಗಿಗಳು ಇದರಿಂದ ಕೆಲಸ ಕಳೆದುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಬಳಕೆ ಅಧಿಕವಾದಾಗ ಈ ಉದ್ಯೋಗಿಗಳನ್ನು ನೇಮಿಸಲಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications