ಜಾಗತಿಕವಾಗಿ ಈಗ ಉದ್ಯೋಗ ಕಡಿತದ್ದೆ ಸುದ್ದಿಯಾಗಿದೆ. ಹಣದುಬ್ಬರ, ಆರ್ಥಿಕ ಹಿಂಜರಿತ ಆತಂಕದ ನಡುವೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಶುಕ್ರವಾರ ಟೆಕ್ ದೈತ್ಯ ಗೂಗಲ್ ಕೂಡಾ ಉದ್ಯೋಗ ಕಡಿತ ಘೋಷಿಸಿದೆ. ಗೂಗಲ್‌ನ ಪೋಷಕ ಸಂಸ್ಥೆ ಆಲ್ಫಾಬೇಟ್ ಇಂಕ್ ಜಾಗತಿಕವಾಗಿ 12 ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲು ಮುಂದಾಗಿದೆ.
ಹೌದು ಈ ಬಗ್ಗೆ ಶುಕ್ರವಾರ ಗೂಗಲ್ ಸಿಇಒ ಸುಂದರ್ ಪಿಚೈ ಸ್ಟಾಫ್ ಮೆಮೋ ಮೂಲಕ ಮಾಹಿತಿ ನೀಡಿದ್ದಾರೆ. ಮೈಕ್ರೋಸಾಫ್ಟ್ ಸುಮಾರು 10 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ, ಒಂದು ದಿನದ ಬಳಿಕ ಗೂಗಲ್ ಬರೋಬ್ಬರಿ 12 ಸಾವಿರ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಕೆಲಸದಿಂದ ವಜಾಗೊಳುವವರಿಗೆ ಕೆಲವು ಪರಿಹಾರಗಳನ್ನು ಕೂಡಾ ಸಂಸ್ಥೆಯು ನೀಡುತ್ತದೆ.
"ನಾನು ನಿಮಗೆ ಕಷ್ಟಕರವಾಗುವಂತಹ ಸುದ್ದಿಯನ್ನು ತಿಳಿಸಬೇಕಾಗಿದೆ. ನಾವು ಸುಮಾರು 12 ಸಾವಿರದಷ್ಟು ಉದ್ಯೋಗ ಕಡಿತ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಯುಎಸ್‌ನಲ್ಲಿ ಯಾರೆಲ್ಲ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಅವರಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದೇವೆ. ಆದರೆ ಬೇರೆ ದೇಶಗಳಲ್ಲಿ ಕಾನೂನು ಪಾಲನೆ ಹಾಗೂ ಕೆಲವೊಂದು ಕಾರ್ಯಗಳನ್ನು ನಡೆಸಲಿರುವ ಕಾರಣ ಈ ಉದ್ಯೋಗ ಕಡಿತ ಪ್ರಕ್ರಿಯೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ," ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಮಾಹಿತಿ ನೀಡಿದ್ದಾರೆ.

ಇನ್ನು ಈ ನಿರ್ಧಾರದ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ವಹಿಸಿಕೊಂಡು ಹೇಳಿಕೆಯನ್ನು ನೀಡಿರುವ ಸುಂದರ್ ಪಿಚೈ, "ಈ ನಿರ್ಧಾರವು ಗೂಗ್ಲಲ್‌ಗಳ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಲಿದೆ. ನಾವು ಈಗ ತೆಗೆದುಕೊಂಡಿರುವ ನಿರ್ಧಾರಕ್ಕೆ ಸಂಪೂರ್ಣವಾಗಿ ನಾನು ಜವಾಬ್ದಾರಿ ಹೊರುತ್ತೇನೆ," ಎಂದು ತಿಳಿಸಿದ್ದಾರೆ. ಆಲ್ಫಾಬೇಟ್, ಬೇರೆ ಬೇರೆ ಘಟಕಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ ಎಂದು ಕೂಡಾ ಹೇಳಿದ್ದಾರೆ.
ವಜಾಗೊಂಡವರಿಗೆ ಸಂಸ್ಥೆಯಿಂದ ನೀಡಲಾಗುವ ಪರಿಹಾರವೇನು?
"ನಮ್ಮ ಮುಂದಿರುವ ದೊಡ್ಡ ಅವಕಾಶವಿದೆ, ಅದಕ್ಕೆ ನಾನು ಧನ್ಯವಾದಗಳು. ಅದರ ಸದುಪಯೋಗ ಮಾಡಬೇಕಾದರೆ ನಾವು ಕೆಲವೊಂದು ನಿರ್ಧಾರಗಳನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದಾಗಿ ನಾವು ಎಲ್ಲ ಘಟಕಗಳಲ್ಲಿ ಪರಿಶೀಲನೆ ಮಾಡಿದ್ದೇವೆ. ಪರಿಶೀಲನೆ ಮಾಡಿ, ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಸಂಸ್ಥೆಯು ವಜಾಗೊಂಡವರಿಗೆ 16 ವಾರಗಳ ವೇತನವನ್ನು ಸಂಸ್ಥೆಯು ನೀಡುತ್ತದೆ. ಹಾಗೆಯೇ ಎರಡು ವಾರಗಳ ಪ್ಯಾಕೇಜ್ ಅನ್ನು ಕೂಡಾ ನೀಡುತ್ತದೆ. 2022 ಬೋನಸ್ ಮತ್ತು ಉಳಿದ ರಜೆಯ ವೇತನವನ್ನು ಪಾವತಿ ಮಾಡಲಿದೆ. ಹಾಗೆಯೇ 6 ತಿಂಗಳ ಆರೋಗ್ಯ ಸೇವೆ, ಇತರೆ ಸೇವೆಗಳನ್ನು ಕೂಡಾ ಸಂಸ್ಥೆಯು ನೀಡಲಿದೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.


Click it and Unblock the Notifications