ಪ್ರಮುಖ ಟೆಕ್ ಸಂಸ್ಥೆಗಳು ಸಾಲಾಗಿ ಉದ್ಯೋಗ ಕಡಿತವನ್ನು ಮಾಡುತ್ತಾ ಬರುತ್ತಿದೆ. ಟ್ವಿಟ್ಟರ್‌ನಿಂದ ಆರಂಭವಾಗಿ ಈಗ ಗೂಗಲ್‌ವರೆಗೂ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಹೌದು, ಗೂಗಲ್ ಕೂಡಾ ಟ್ವಿಟ್ಟರ್ ಹಾಗೂ ಮೆಟಾ ಹಾದಿಯಲ್ಲಿ ಸಾಗಲು ಮುಂದಾಗಿದೆ. ಸುಮಾರು 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ಗೂಗಲ್ ಸಜ್ಜಾಗಿದೆ.
ಅಮೆಜಾನ್, ಟ್ವಿಟ್ಟರ್, ಮೆಟಾ ಹಾಗೂ ಹಲವಾರು ಪ್ರಮುಖ ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ, ಹಾಗೆಯೇ ಇನ್ನು ಕೆಲವು ಸಂಸ್ಥೆಗಳು ಮುಂದಿನ ವರ್ಷವೂ ತಮ್ಮ ಸಂಸ್ಥೆಯಲ್ಲಿನ ಉದ್ಯೋಗಿಗಳನ್ನು ವಜಾ ಮಾಡಲು ಈಗಲೇ ತಯಾರಿ ನಡೆಸುತ್ತಿದೆ. ಈ ನಡುವೆ ಗೂಗಲ್‌ನ ಪೋಷಕ ಸಂಸ್ಥೆ ಆಲ್ಫಾಬೆಟ್ ಸಂಸ್ಥೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡದ 10 ಸಾವಿರ ಮಂದಿಯನ್ನು ಗೊತ್ತು ಮಾಡಿ, ಕೆಲಸದಿಂದ ವಜಾ ಮಾಡಲು ಮುಂದಾಗಿದೆ.
ಮಾಹಿತಿ ಪ್ರಕಾರ ಸಂಸ್ಥೆಯು ತಮ್ಮ ಸಂಸ್ಥೆಯ ಬೆಳವಣಿಗೆ ಹಾಗೂ ಉತ್ತಮ ಗುಣಮಟ್ಟದ ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಅಧಿಕ ಗುಣಮಟ್ಟದ ಸೇವೆಯನ್ನು ನೀಡದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ. ಇದಕ್ಕಾಗಿ ಯಾರು ಸರಿಯಾಗಿ ಕಾರ್ಯನಿರ್ವಹಣೆ ಮಾಡುವುದಿಲ್ಲವೋ ಅಂತಹ ಶೇಕಡ 6ರಷ್ಟು ಉದ್ಯೋಗಿಗಳ ಅಂದರೆ 10 ಸಾವಿರ ಮಂದಿಯ ಪಟ್ಟಿಯನ್ನು ಮಾಡಲು ಕೂಡಾ ಸಂಸ್ಥೆ ಸಂಬಂಧಪಟ್ಟ ವಿಭಾಗಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

ಹೊಸ ವ್ಯವಸ್ಥೆ ಏನು ಮಾಡಲಿದೆ?
"ಈ ಹೊಸ ನಿರ್ವಹಣಾ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡದ ಉದ್ಯೋಗಿಗಳನ್ನು ಮುಂದಿನ ವರ್ಷದ ಒಳಗಾಗಿ ಉದ್ಯೋಗದಿಂದ ವಜಾ ಮಾಡಲು ಅವಕಾಶ ನೀಡುತ್ತದೆ. ಮಾನೇಜರ್‌ಗಳು ಅಂತಹ ಉದ್ಯೋಗಿಗಳನ್ನು ರೇಟಿಂಗ್ ಆಧಾರದಲ್ಲಿ ವಿಂಗಡನೆ ಮಾಡಿ, ಬೋನಸ್ ಹಾಗೂ ಇತರೆ ಪ್ರಯೋಜನಗಳನ್ನು ನೀಡದಿರಬಹುದು," ಎಂದು ವರದಿಯು ವಿವರಿಸಿದೆ.
ಇನ್ನು ಒಟ್ಟು ಅಗತ್ಯವಿರುವ ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಕಡಿತ ಮಾಡಲು ಕೂಡಾ ಸಂಸ್ಥೆಯು ಮುಂದಾಗಿದೆ. ಆದರೆ ಈ ಬಗ್ಗೆ ಆಲ್ಫಾಬೆಟ್ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಗೂಗಲ್‌ನಲ್ಲಿ ಪ್ರಸ್ತುತ ಸುಮಾರು 187,000 ಮಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಾರ್ಕ್ ಜುಕರ್‌ಬರ್ಗ್, ಸಂಸ್ಥೆಯಲ್ಲಿನ ನಷ್ಟ, ಆದಾಯ ಕಡಿತದ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಸುಮಾರು 11 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು ಎಂದು ತಿಳಿಸಿದ್ದರು. ಈ ನಡುವೆ ಟ್ವಿಟ್ಟರ್ ಅನ್ನು ತನ್ನ ಒಡೆತನಕ್ಕೆ ಪಡೆದ ಬಳಿಕ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಂದೆನಿಸಿಕೊಂಡಿರುವ ಎಲಾನ್ ಮಸ್ಕ್ ಶೇಕಡ 50ರಷ್ಟು ಟ್ವಿಟ್ಟರ್ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ.


Click it and Unblock the Notifications