ನವದೆಹಲಿ, ಜೂನ್ 29: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಹರಾಜು ಹಾಕಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಕೊಳ್ಳುವವರು ಯಾರೂ ಮುಂದೆ ಬಾರದಿದ್ದರಿಂದ ಅನೇಕ ಸಲ ಹರಾಜು ಪ್ರಕ್ರಿಯೆಯನ್ನು ಮುಂದೆ ಹಾಕಲಾಗಿತ್ತು.
ಕಳೆದ ಒಂದು ತಿಂಗಳಿನಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿಯೂ ಹರಾಜು ಪ್ರಕ್ರಿಯೆ ಸಂಪೂರ್ಣ ಸ್ಥಗೀತಗೊಂಡಿತ್ತು. ಇದೀಗ ಮತ್ತೆ ಕೇಂದ್ರ ಸರ್ಕಾರ ಹರಾಜು ಪ್ರಕ್ರಿಯೆ ಅವಧಿಯನ್ನು ವಿಸ್ತರಿಸಿದೆ. ಆಗಸ್ಟ್ 31 ರವರೆಗೆ ಬಿಡ್ ಮಾಡುವ ಪ್ರಕ್ರಿಯೆಯನ್ನು ವಿಸ್ತರಿಸಿ ಆದೇಶಿಸಲಾಗಿದೆ.
ಹರಾಜು ಪ್ರಕ್ರಿಯೆಗೆ ಗಡುವು ವಿಸ್ತರಿಸುವುದು ಇದು ಮೂರನೇ ಬಾರಿಯಾಗಿದೆ. ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯ ಖರೀದಿ ಪ್ರಕ್ರಿಯೆಗೆ ಮೇ 30ರ ವರೆಗೂ ಯಾವುದೇ ಬಿಡ್ ಬಂದಿರಲಿಲ್ಲ. ಈಗ ಕೋವಿಡ್ ಕಾರಣದಿಂದ ಮತ್ತೆ ಮುಂದೆ ಹೋದಂತಾಗಿದೆ.
ಜನವರಿ 27 ರಂದು ಪ್ರಾರಂಭ
ಈ ಮೊದಲು ಹರಾಜು ಪ್ರಕ್ರಿಯೆಯನ್ನು ಜನವರಿ 27 ರಂದು ಪ್ರಾರಂಭಿಸಲಾಯಿತು. ಕೋವಿಡ್ -19 ನಿಂದ ಉದ್ಭವಿಸುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಸಕ್ತಿ ಬಿಡ್‌ದಾರರಿಂದ ವಿನಂತಿಯ ಮೇರೆಗೆ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮಾರ್ಚ್ 17 ಕೊನೆ ದಿನಾಂಕವಾಗಿತ್ತು
ಜನವರಿಯಲ್ಲಿ ಬಿಡ್ ಕೊನೆ ದಿನಾಂಕವನ್ನು ಮಾರ್ಚ್ 17 ಎಂದು ಹೇಳಲಾಗಿತ್ತು. ನಂತರ ಇದನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲಾಯಿತು. ಮತ್ತೆ ಜೂನ್ 30 ರವರೆಗೆ ವಿಸ್ತರಿಸಲಾಯಿತು. ಈಗ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
ಬಿಡ್ ಸಲ್ಲಿಸಲು ಆಸಕ್ತಿ ತೋರಿಸಿಲ್ಲ
ಏರ್ ಇಂಡಿಯಾದಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದ್ದು, ಸಂಸ್ಥೆ ಸಾಲದಲ್ಲಿದೆ. ಸರ್ಕಾರವು ಇದರ ಮೇಲಿನ ಶೇ 76 ರಷ್ಟು ಬಂಡವಾಳವನ್ನು ಹಿಂದಕ್ಕೆ ಪಡೆದುಕೊಳ್ಳಲು ಉದ್ದೇಶಿಸಿದೆ. ಸರ್ಕಾರವು ಷರತ್ತುಗಳನ್ನು ಬಹಿರಂಗಪಡಿಸಿದ ಬಳಿಕ ಯಾವ ಕಂಪೆನಿಯೂ ಬಿಡ್ ಸಲ್ಲಿಸಲು ಆಸಕ್ತಿ ತೋರಿಸಿಲ್ಲ. ಜೆಟ್ ಏರ್‌ವೇಸ್ ಮತ್ತು ಇಂಡಿಗೋ ಸಂಸ್ಥೆಗಳು ಈಗಾಗಲೇ ಕಣದಿಂದ ಹಿಂದಕ್ಕೆ ಸರಿದಿವೆ.
ಮಾರಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲವಿದೆ
ಬಿಡ್ಡಿಂಗ್ ಮೊತ್ತದ ಆಧಾರದ ಮೇಲೆ ಸಂಸ್ಥೆಯನ್ನು ಮಾರಾಟ ಮಾಡುವುದೋ ಅಥವಾ ಬಿಡುವುದೋ ಎಂಬುದನ್ನು ನಿರ್ಧರಿಸಲಾಗುವುದು ಎರಡು ಹಂತಗಳಲ್ಲಿ ಬಿಡ್ಡಿಂಗ್ ನಡೆಯಲಿದೆ. ಮೊದಲು ಬಿಡ್ಡಿಂಗ್‌ಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಬೇಕು. ಅದರಲ್ಲಿ ಯಶಸ್ವಿಯಾದವರಿಗೆ ಆರ್ಥಿಕ ಬಿಡ್ ಸಲ್ಲಿಸಲು ಹೇಳಲಾಗುತ್ತದೆ. ಮಾರಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲವಿದೆ. ಆದರೆ, ನಮಗೆ ಅಗತ್ಯವಿರುವಷ್ಟು ಹಣ ಬಾರದಿದ್ದರೆ, ಮಾರಾಟವನ್ನು ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ಬಳಿಕ ನಿರ್ಧರಿಸುತ್ತೇವೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.


Click it and Unblock the Notifications