ಸಿಗರೇಟ್ ಸೇದುವವರು ಹೆಚ್ಚಾಗಿ ಅತೀ ಕಡಿಮೆ ಬೆಲೆಯ 10 ರೂಪಾಯಿಯ ಸಿಗರೇಟ್ ಲೈಟರ್‌ಗಳನ್ನು ಬಳಸುವುದನ್ನು ನಾವು ನೋಡಿರಬಹುದು. ಹಾಗೆಯೇ ಈ ಸಿಗರೇಟ್ ಲೈಟರ್ ಬರೀ ಸಿಗರೇಟ್ ಸೇದುವವರು ಮಾತ್ರವಲ್ಲ, ಪ್ರಯಾಣ ಮಾಡುವಾಗ ತಂಗುವಲ್ಲಿ ಬೆಂಕಿಯ ಅವಶ್ಯಕತೆ ಇದ್ದಾಗ ಬಳಕೆ ಮಾಡಲು ತಮ್ಮ ಬಳಿ ಇಟ್ಟುಕೊಳ್ಳುವವರು ಕೂಡಾ ಇದ್ದಾರೆ. ಆದರೆ ಈ 10 ರೂಪಾಯಿಯ ಅಥವಾ 20 ರೂಪಾಯಿಗಿಂತ ಕಡಿಮೆ ಬೆಲೆಯ ಸಿಗರೇಟ್ ಲೈಟರ್‌ಗಳು ಇನ್ನು ನಿಮಗೆ ಸಿಗೋದು ಕಷ್ಟ!
ಹೌದು, ಕೇಂದ್ರ ಸರ್ಕಾರವು ಪ್ರತಿ ಯೂನಿಟ್‌ನ ಬೆಲೆ 20 ರೂಪಾಯಿಗಿಂತ ಕಡಿಮೆಯಾಗಿರುವ ಸಿಗರೇಟ್ ಲೈಟರ್‌ಗಳ ಆಮದನ್ನು ಗುರುವಾರ ನಿಷೇಧ ಮಾಡಿದೆ. ಈ ಬಗ್ಗೆ ಸುತ್ತೋಲೆಯ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸರ್ಕಾರವು, "ಸಿಗರೇಟ್ ಲೈಟರ್‌ಗಳ ಆಮದಿನ ಮೇಲೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ಹಿಂದೆ ಉಚಿತವಾಗಿ ಆಮದು ಮಾಡಲು ಅವಕಾಶವಿದ್ದ ಸಿಗರೇಟ್ ಲೈಟರ್‌ಗಳನ್ನು ಈಗ ನಿಷೇಧ ಮಾಡಲಾಗಿದೆ," ಎಂದು ತಿಳಿಸಲಾಗಿದೆ.

"ಸಿಐಎಫ್ ಮೌಲ್ಯವು 20 ರೂಪಾಯಿಗಿಂತ ಅಧಿಕವಾಗಿದ್ದರೆ, ಅಂದರೆ ಪ್ರತಿ ಸಿಗರೇಟ್ ದರವು 20 ರೂಪಾಯಿಗಿಂತ ಅಧಿಕವಾಗಿದ್ದರೆ, ಉಚಿತವಾಗಿ ಆಮದು ಮಾಡಬಹುದಾಗಿದೆ," ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ ಕೇಂದ್ರ ಸರ್ಕಾರವು ಈ ನಿಷೇಧವನ್ನು ಮಾಡಿರುವುದು ಯಾಕೆ, ಕಾರಣವೇನು, ಜನರ ಮೇಲೆ ಏನು ಪ್ರಭಾವ ಉಂಟಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಸಿಐಎಫ್ ಮೌಲ್ಯ ಎಂದರೇನು?
ವೆಚ್ಚ, ವಿಮೆ ಮತ್ತು ಸರಕು (ಸಿಐಎಫ್) ಬೆಲೆಯು ಆಮದು ಮಾಡಿಕೊಳ್ಳುವ ದೇಶದ ಗಡಿಯಲ್ಲಿ ಸರಬರಾಜು ಮಾಡಲಾದ ಸರಕುಗಳ ಬೆಲೆಯಾಗಿದೆ. ಅಥವಾ ದೇಶದೊಳಗಿನ ಆಮದು ಅಥವಾ ವ್ಯಾಪಾರದ ವೇಳೆ ಸಾರಿಗೆ ವೆಚ್ಚ, ಆಮದು ಸುಂಕ, ಇತರೆ ತೆರಿಗೆಗಳನ್ನು ಪಾವತಿ ಮಾಡುವ ಮೊದಲೇ ಜನರಿಗೆ ನೀಡಲಾಗುವ ಸರಕಿನ ಬೆಲೆಯಾಗಿದೆ.
ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಒಂದು ವಹಿವಾಟು ಪ್ರಕ್ರಿಯೆಯು ಅತೀ ದೀರ್ಘ ಅಥವಾ ಕ್ಲಿಷ್ಟ ಆಗಿರುವ ಕಾರಣದಿಂದಾಗಿ ಈ ಪದವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಈ ಸಿಐಎಫ್ ಸರಕುಗಳ ಮೌಲ್ಯವನ್ನು ತಿಳಿಸುವುದರ ಜೊತೆಗೆ ನಿರ್ದಿಷ್ಟ ನಿಯಮಗಳು ಮತ್ತು ನಿಬಂಧನೆಗಳನ್ನು ಕೂಡಾ ಹೊಂದಿರುತ್ತದೆ. ಇಂಟರ್‌ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ಪ್ರಕಾರ ಒಂದು ಸರಕು ಅಥವಾ ಉತ್ಪನ್ನವು ಬಂದರಿನಿಂದ ತಲುಪಬೇಕಾದ ಸ್ಥಳ ಅಥವಾ ಖರೀದಿದಾರರಿಗೆ ತಲುಪುವವರೆಗೂ ಅದರ ಜವಾಬ್ದಾರಿ ಮಾರಾಟಗಾರರದ್ದು ಆಗಿರುತ್ತದೆ.
ಭಾರತದಲ್ಲಿ ಲೈಟರ್‌ಗಳ ಆಮದು ನಿಷೇಧ
ಭಾರತದಲ್ಲಿ ನಿಷೇಧವನ್ನು ಪ್ರಮುಖವಾಗಿ ಪಾಕೆಟ್ ಲೈಟರ್‌ಗಳು, ಗ್ಯಾಸ್ ಫ್ಯೂಲ್ ಲೈಟರ್‌ಗಳು, ನಾನ್ ರಿಫಿಲೇಬಲ್ ಲೈಟರ್‌ಗಳು, ರಿಫೀಲೇಬಲ್ ಲೈಟರ್‌ಗಳ ಮೇಲೆ ವಿಧಿಸಲಾಗಿದೆ. ಹಣಕಾಸು ವರ್ಷ 2022-23ರಲ್ಲಿ 0.66 ಮಿಲಿಯನ್ ಡಾಲರ್ ಪ್ರಮಾಣದ ನಾನ್ ರಿಫಿಲೇಬಲ್ ಗ್ಯಾಸ್ ಫ್ಯೂಲ್ ಪಾಕೆಟ್ ಲೈಟರ್‌ಗಳನ್ನು ಆಮದು ಮಾಡಲಾಗಿದೆ. ಆದರೆ ಈ ಆರ್ಥಿಕ ವರ್ಷದ ಏಪ್ರಿಲ್‌ನಲ್ಲಿಯೇ 0.13 ಮಿಲಿಯನ್ ಡಾಲರ್‌ನ ಪಾಕೆಟ್ ಲೈಟರ್‌ಗಳನ್ನು ಆಮದು ಮಾಡಲಾಗಿದೆ.
ಅದರಂತೆಯೇ ಪಾಕೆಟ್ ಲೈಟರ್, ಗ್ಯಾಸ್ ಫ್ಯೂಲ್ ಲೈಟರ್, ರಿಫಿಲೇಬಲ್ ಲೈಟರ್‌ಗಳ ಸಾಗಣೆಯು ಹಣಕಾಸು ವರ್ಷ 2022-23ರಲ್ಲಿ 8.87 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಆದರೆ 2021-22ರಲ್ಲಿ 7 ಮಿಲಿಯನ್ ಡಾಲರ್ ಆಗಿತ್ತು. ಈ ಹಣಕಾಸು ವರ್ಷದ ಏಪ್ರಿಲ್‌ನಲ್ಲಿ 0.96 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಈ ಲೈಟರ್‌ಗಳನ್ನು ಪ್ರಮುಖವಾಗಿ ಸ್ಪೇನ್, ಟರ್ಕಿ, ಯುಎಇಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ನಿಷೇಧ ಮಾಡಿರುವುದು ಯಾಕೆ?
ಪ್ರಮುಖವಾಗಿ ಈ ಲೈಟರ್‌ಗಳ ಲಭ್ಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿಷೇಧವನ್ನು ಮಾಡಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೇಶೀಯ ಮ್ಯಾಚ್‌ಬಾಕ್ಸ್ ಉದ್ಯಮಕ್ಕೆ ಸಹಾಯ ಮಾಡಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಿಗರೇಟ್ ಲೈಟರ್‌ಗಳನ್ನು ನಿಷೇಧಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.
ಚೀನಾದಂತಹ ದೇಶಗಳಿಂದ ಕಾನೂನುಬದ್ಧವಾಗಿ ಮತ್ತು ಕಾನೂನುಬಾಹಿರವಾಗಿ ಆಮದು ಮಾಡಿಕೊಳ್ಳುವ ಈ ಪ್ಲಾಸ್ಟಿಕ್ ಸಿಗರೇಟ್ ಲೈಟರ್‌ಗಳು ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಲಭ್ಯವಾಗುತ್ತದೆ. ಇದರ ಬದಲಾಗಿ ನಾವು 20 ಮ್ಯಾಚ್‌ಬಾಕ್ಸ್‌ಗಳನ್ನು ಬಳಕೆ ಮಾಡಬಹುದು ಎಂದು ಸ್ಟಾಲಿನ್ ಹೇಳಿದ್ದರು.
ಇದಲ್ಲದೆ, ಈ ನಾನ್-ರೀಫಿಲ್ ಮಾಡಲಾಗದ ಲೈಟರ್‌ಗಳು ಅಪಾರ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಾರಣವಾಗುತ್ತವೆ, ಪರಿಸರವನ್ನು ಹಾನಿಗೊಳಿಸುತ್ತವೆ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು ಕೂಡಾ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಿಳಿಸಿದ್ದರು. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಬೆಂಕಿಕಡ್ಡಿ ತಯಾರಿಕಾ ಉದ್ಯಮವು ಉದ್ಯೋಗದ ಪ್ರಮುಖ ಮೂಲವಾಗಿದೆ.


Click it and Unblock the Notifications