ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಆಗಿರುವ ಆರ್ಥಿಕ ನಷ್ಟವನ್ನು ತಗ್ಗಿಸಲು ಕೇಂದ್ರ ಸರ್ಕಾರ, ತೈಲದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, ಪೆಟ್ರೋಲ್ ಲೀಟರ್‌ಗೆ 10 ರುಪಾಯಿ ಮತ್ತು ಡೀಸೆಲ್ ಲೀಟರ್‌ಗೆ 13 ರುಪಾಯಿ ಏರಿಕೆ ಮಾಡಲಾಗಿದೆ.
ವಿಶೇಷ ಅಬಕಾರಿ ಸುಂಕ ಹೇರಿಕೆ
ಒಂದು ಲೀಟರ್ ಪೆಟ್ರೋಲ್ ಮೇಲೆ 8 ರು. ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರು. ವಿಶೇಷ ಅಬಕಾರಿ ಸುಂಕ ಹೇರಿದೆ. ಪ್ರತಿ ಲೀಟರ್ ಡೀಸೆಲ್ ಮೇಲೆ 8 ರು. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೇರಿದರೆ, 5 ರು. ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ 30 ರುಪಾಯಿ ಇದ್ದರೂ 70 ರುಪಾಯಿ ಪಾವತಿ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಇಳಿಕೆ ಕಂಡಿದ್ದು ಬ್ಯಾರೆಲ್‌ಗೆ 30ಡಾಲರ್‌ನಷ್ಟಿದೆ. ಹೀಗಿದ್ದರೂ ಭಾರತೀಯರು ಪ್ರತಿ ಲೀಟರ್ ಪೆಟ್ರೋಲ್‌ಗೆ 70 ರುಪಾಯಿ ಪಾವತಿ ಮಾಡುತ್ತಿದ್ದಾರೆ. ಅಂದರೆ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಮುಂಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುವುದಿಲ್ಲ.
ತೈಲದ ಮೇಲಿನ ಸುಂಕ ಹೆಚ್ಚಾದರೂ ಜನರ ಮೇಲೆ ಪರಿಣಾಮ ಬೀರುವುದಿಲ್ಲ
ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಹೆಚ್ಚಿಸಿರುವುದು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕರ್ನಾಟಕದಲ್ಲಿ ತೈಲ ದರ ಯಥಾಪ್ರಕಾರ ಇರಲಿದೆ. ಇದಕ್ಕೆ ಕಾರಣ ಲಾಕ್‌ಡೌನ್ ವೇಳೆ ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ ತೈಲ ಸಂಗ್ರಹವಿದೆ.
ಇನ್ನು ಕೇಂದ್ರ ಸರ್ಕಾರ ಸುಂಕ ಏರಿಕೆ ಮಾಡಿರುವುದು ತೈಲ ಕಂಪನಿಗಳಿಗೆ ಅನ್ವಯವಾಗುವುದು. ಗ್ರಾಹಕರಿಗೆ ಯಾವುದೇ ಪರಿಣಾಮ ಬೀರದು. ಒಂದು ವೇಳೆ ರಾಜ್ಯ ಸರ್ಕಾರ ಸುಂಕ ಹೆಚ್ಚಿಸಿದರೆ ಮಾತ್ರ ಗ್ರಾಹಕರ ಮೇಲೆ ಹೊರೆ ಬೀಳಲಿದೆ.
ದೆಹಲಿ ಜನತೆಗೆ ಡಬಲ್ ಶಾಕ್
ಕೇಂದ್ರ ಸರ್ಕಾರ ಈ ಅಬಕಾರಿ ಸುಂಕ ಏರಿಕೆಗೂ ಮುನ್ನ ಮಂಗಳವಾರ(ಮೇ 05)ರಂದು ದೆಹಲಿ ಸರ್ಕಾರವು ಪೆಟ್ರೋಲ್ ಮೇಲೆ 27 ಪರ್ಸೆಂಟ್ ಮತ್ತು ಡೀಸೆಲ್ ಮೇಲೆ 16.75 ಪರ್ಸೆಂಟ್ ವ್ಯಾಟ್ ನಿಗದಿ ಮಾಡಿತ್ತು. ಆದರೆ ಈಗ ಪಟ್ರೋಲ್ ಮೇಲೆ 30 ಪರ್ಸೆಂಟ್, ಡೀಸೆಲ್ ಮೇಲೆ 30 ಪರ್ಸೆಂಟ್‌ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ.
ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರು. ಡೀಸೆಲ್ ಬೆಲೆ 7.10 ರು. ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.26 ರು.(ಹಿಂದಿನ ದರ 69.59) ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 69.39 ರೂ. ಏರಿಕೆಯಾಗಿದೆ.


Click it and Unblock the Notifications