ಬೆಂಗಳೂರು, ಜೂನ್ 17: ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಡಿ ಕೃಷಿ ಭೂಮಿ ಖರೀದಿಸುವ ಕೈಗಾರಿಕೋದ್ಯಮಿಗಳಿಗೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಹೊಸ ಕಾಯ್ದೆಯ ಅನುಸಾರ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಸಲು ಕೈಗಾರಿಕೋದ್ಯಮಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಈ ಪ್ರಕಾರ ಆಸಕ್ತರು ಕರ್ನಾಟಕ ಉದ್ಯೋಗ ಮಿತ್ರ ಪೋರ್ಟ್‌ಲ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಕೈಗಾರಿಕೋದ್ಯಮಿಗಳು ಖರೀದಿಸಬೇಕಿರುವ ಜಮೀನಿನ ಸೂಕ್ತ ದಾಖಲೆಗಳೊಂದಿದೆ ಕರ್ನಾಟಕ ಉದ್ಯೋಗ ಮಿತ್ರ ಪೋರ್ಟ್‌ಲ್‌ನಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಅರ್ಜಿದಾರರು ಜಮೀನಿನ ವಾಸ್ತಾವಾಂಶದ ವರದಿ ಹಾಗೂ ಭೂ ಪರಿವರ್ತನಾ ಶುಲ್ಕ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು 15 ದಿನಗಳ ಒಳಗೆ ವರದಿ ತಯಾರು ಮಾಡಬೇಕು.
ಲ್ಯಾಂಡ್ ಅಡಿಟ್ ಕಮಿಟಿ
ಜಿಲ್ಲಾಧಿಕಾರಿಯಿಂದ ವರದಿ ಬಂದ ನಂತರ ಅಥವಾ ನಿಗದಿತ ಅವಧಿಯೊಳಗೆ ವರದಿ ಬರದಿದ್ದಲ್ಲಿ ಅರ್ಜಿದಾರರು ಉದ್ಯೋಗ ಮಿತ್ರ ಪೋರ್ಟ್‌ಲ್‌ನಲ್ಲಿರುವ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಲ್ಯಾಂಡ್ ಅಡಿಟ್ ಕಮಿಟಿ ಮುಂದೆ ಸಲ್ಲಿಸಬೇಕು.
ಉಪ ನೋಂದಣಾಧಿಕಾರಿ ನೋಂದಣಿ ಮಾಡತಕ್ಕದ್ದು
ಲ್ಯಾಂಡ್ ಅಡಿಟ್ ಕಮಿಟಿ ಅನುಮೋದಿಸಿದ ಪ್ರಸ್ತಾವನೆಯನ್ನು ಕರ್ನಾಟಕ ಉದ್ಯೋಗ ಮಿತ್ರವು ಸಿಂಗಲ್ ವಿಂಡೋ ಒಪ್ಪಿಗೆ ಸಮಿತಿ ಮತ್ತು ರಾಜ್ಯ ಮಟ್ಟದ ಒಪ್ಪಿಗೆ ಸಮಿತಿ ಮುಂದೆ ಮಂಡಿಸಬೇಕು. ಈ ಎರಡು ಸಮಿತಿಗಳು ಅನುಮೋದಿಸಿದ ನಂತರವೇ ಉಪ ನೋಂದಣಾಧಿಕಾರಿ ನೋಂದಣಿ ಮಾಡತಕ್ಕದ್ದು. ಇದಕ್ಕೆ ಕಾವೇರಿ ಪೋರ್ಟಲ್ ಉಪಯೋಗ ಪಡೆದುಕೊಳ್ಳಬೇಕು.
ಆನ್‌ಲೈನ್ ಮೂಲಕ ಹಕ್ಕು ಬದಲಾವಣೆ ಮಾಡಬೇಕು
ಅನುಮೋದನೆಗೊಂಡ ನಂತರ ಜಮೀನುಗಳನ್ನು ಕೈಗಾರಿಕೋದ್ಯಮಿಗಳು ಭೂಮಿ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಹಕ್ಕು ಬದಲಾವಣೆ ಮಾಡಬೇಕು. ಆನ್‌ಲೈನ್‌ನಲ್ಲಿ ಭೂ ಪರಿವರ್ತನಾ ಶುಲ್ಕ ಕಟ್ಟಿದ ನಂತರ ಭೂ ಪರಿವರ್ತನೆ ಆದೇಶವನ್ನು ಭೂಮಿ ವೆಬ್‌ಸೈಟ್ ಮುಖಾಂತರ ಹೊರಡಿಸಬೇಕು.
ಕಾಯ್ದೆಗೆ ವಿರೋಧ
ಕರ್ನಾಟಕ ಸರ್ಕಾರ ಹೆಚ್ಚು ಆದಾಯ ಇರುವವರಿಗೂ ಹಾಗು ಕೈಗಾರಿಕೋದ್ಯಮಗಳಿಗೆ ಕೃಷಿ ಜಮೀನು ಖರೀದಿ ಮಾಡಲು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ ರೈತರ ಜಮೀನಿಗೆ ಹೆಚ್ಚು ಮೌಲ್ಯ ಬರುತ್ತದೆ ಎಂದು ಸರ್ಕಾರದ ವಾದವಾದರೆ, ಕೃಷಿಕರಿಗೆ ಈ ಕಾಯ್ದೆ ಮಾರಕವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.


Click it and Unblock the Notifications