ಕೊರೊನಾವೈರಸ್ ಭೀತಿ ಹಾಗೂ ಕಚ್ಛಾ ತೈಲ ದರದ ಸಂಘರ್ಷದ ನಡುವೆ ಜಾಗತಿಕವಾಗಿ ಪೆಟ್ರೋಲ್-ಡೀಸೆಲ್ ದರ ದಿನೇ ದಿನೇ ಕುಸಿಯತೊಡಗಿದೆ. ಇದನ್ನೇ ಸಂಪನ್ಮೂಲ ಕ್ರೂಢೀಕರಣಕ್ಕೆ ಬಂಡವಾ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಸದ್ಯದಲ್ಲೇ ಪೆಟ್ರೋಲ್-ಡೀಸೆಲ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೀಘ್ರವಾಗಿ ಕುಸಿಯುತ್ತಿರುವ ಮಧ್ಯೆ ಸರ್ಕಾರ ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಿದೆ. ತೈಲಗಳ ಮೇಲಿನ ಅಬಕಾರಿ ಸುಂಕವನ್ನು ವಿಶೇಷ ಪರಿಸ್ಥಿತಿ ಆಧಾರದ ಮೇಲೆ ಹೆಚ್ಚಳಕ್ಕೆ ಮುಂದಾಗಿದೆ.
ಪೆಟ್ರೋಲ್ -ಡೀಸೆಲ್ ದರ ಎಷ್ಟು ಹೆಚ್ಚಾಗಬಹುದು
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇದರ ನಂತರ, ಸರ್ಕಾರವು ಮುಂದಿನ ದಿನಗಳಲ್ಲಿ ಯಾವುದೇ ಸಮಯದಲ್ಲಿ ಎಂಟು ರೂಪಾಯಿ ವ್ಯಾಪ್ತಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಬಹುದು.
2020ರ ಹಣಕಾಸು ಮಸೂದೆಗೆ ತಿದ್ದುಪಡಿ
ಇಂಧನಗಳ ಮೇಲಿನ ವಿಶೇಷ ಅಬಕಾರಿ ಸುಂಕದ ದರವನ್ನು ಭವಿಷ್ಯದಲ್ಲಿ ಹೆಚ್ಚಿಸುವ ಪ್ರಸ್ತಾಪವನ್ನು ಒಳಗೊಂಡಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ 2020 ರ ಹಣಕಾಸು ಮಸೂದೆಗೆ ತಿದ್ದುಪಡಿ ತಂದರು. ಸದನವು ಚರ್ಚೆಯಿಲ್ಲದೆ ಮಸೂದೆಯನ್ನು ಅಂಗೀಕರಿಸಿತು. ಈ ತಿದ್ದುಪಡಿಯ ನಂತರ ಸರ್ಕಾರವು ಪೆಟ್ರೋಲ್‌ಗೆ ಹೆಚ್ಚುವರಿ ವಿಶೇಷ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರುಪಾಯಿಗಳಿಂದ 18 ರುಪಾಯಿಗೆ ಮತ್ತು ಡೀಸೆಲ್ ಮೇಲಿನ ದರ ಲೀಟರ್‌ಗೆ 4 ರಿಂದ 12 ರುಪಾಯಿಗೆ ಹೆಚ್ಚಿಸಬಹುದು.
ಮಾರ್ಚ್‌ನಲ್ಲಿ ಈಗಾಗಲೇ 3 ರುಪಾಯಿ ಹೆಚ್ಚಿಸಿತ್ತು
ಇದೇ ತಿಂಗಳಿನಲ್ಲಿ ಅಬಕಾರಿ ಸುಂಕವನ್ನು ಮೂರು ರುಪಾಯಿ ಹೆಚ್ಚಿಸಲಾಗಿತ್ತು. ಮಾರ್ಚ್ 14ರಂದು ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳದಿಂದಾಗಿ ಸರ್ಕಾರವು ವಾರ್ಷಿಕವಾಗಿ 39,000 ಕೋಟಿ ಹೆಚ್ಚು ಪಡೆಯಲಿದೆ. ವಿಶೇಷ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರುಪಾಯಿ ಮತ್ತು ರಸ್ತೆ ಹಾಗೂ ಸೌಕರ್ಯ ಸೆಸ್‌ನಲ್ಲಿ ಸರ್ಕಾರವು ಪ್ರತಿ ಲೀಟರ್‌ಗೆ ಒಂದು ರುಪಾಯಿ ಹೆಚ್ಚಿಸಿದೆ. ಈ ಮೂಲಕ ಒಟ್ಟಾರೆ ಮೂರು ರುಪಾಯಿ ಹೆಚ್ಚಿಸಲಾಗಿತ್ತು.
ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 71.97 ರುಪಾಯಿ
ಸದ್ಯ ಪೆಟ್ರೋಲ್ -ಡೀಸೆಲ್ ದರವು ಅಷ್ಟು ದೊಡ್ಡ ಪ್ರಮಾಣದ ಹೊರೆಯಾಗಿಲ್ಲ. ಮಾರ್ಚ್ 24ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 71,97 ರುಪಾಯಿಯಷ್ಟಿದೆ. ಡೀಸೆಲ್ ದರವು ಲೀಟರ್‌ಗೆ 64.41 ರುಪಾಯಿಯಷ್ಟಿದೆ. ಒಂದು ವೇಳೆ ಪೆಟ್ರೋಲ್ ದರವು 8 ರುಪಾಯಿ ಹೆಚ್ಚಾದರೆ ಲೀಟರ್‌ಗೆ 79 ರುಪಾಯಿವರೆಗೆ, ಡೀಸೆಲ್ ಲೀಟರ್‌ಗೆ 73 ರುಪಾಯಿಗೂ ತಲುಪುತ್ತದೆ.


Click it and Unblock the Notifications