ಪ್ರತಿ ತಿಂಗಳ ಜಿಎಸ್‌ಟಿ ಸಂಗ್ರಹದ ಡೇಟಾವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡುತ್ತದೆ. ಈ ಡೇಟಾದ ಪ್ರಕಾರ ಏಪ್ರಿಲ್, 2023ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈವರೆಗೆ ಪ್ರತಿ ತಿಂಗಳ ಜಿಎಸ್‌ಟಿ ಸಂಗ್ರಹಕ್ಕೂ ಅತೀ ಅಧಿಕ ಜಿಎಸ್‌ಟಿ ಸಂಗ್ರಹ ಏಪ್ರಿಲ್ ತಿಂಗಳಿನಲ್ಲಾಗಿದೆ ಎಂದು ಸರ್ಕಾರದ ಡೇಟಾವು ಉಲ್ಲೇಖಿಸಿದೆ.
ಏಪ್ರಿಲ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,87,035 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 38,440 ಕೋಟಿ ರೂಪಾಯಿ ಆಗಿದೆ. ಎಸ್‌ಜಿಎಸ್‌ಟಿ 47,412 ಕೋಟಿ ರೂಪಾಯಿ, ಐಜಿಎಸ್‌ಟಿ 89,158 ಕೋಟಿ ರೂಪಾಯಿ (ಸರಕುಗಳ ಆಮದಿನಿಂದ ಸಂಗ್ರಹಿಸಲಾದ 34,972 ಕೋಟಿ ರೂಪಾಯಿ ಸೇರಿದಂತೆ) ಮತ್ತು ಸೆಸ್ 12,025 ಕೋಟಿ ರೂಪಾಯಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 901 ಕೋಟಿ ರೂಪಾಯಿ ಸೇರಿದಂತೆ) ಆಗಿದೆ.

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 45,864 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಗೆ 37,959 ಕೋಟಿ ರೂಪಾಯಿ ಇತ್ಯರ್ಥ ಮಾಡಿಕೊಂಡಿದೆ. ಈ ನಂತರ ಏಪ್ರಿಲ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಯಾಗಿ 84,304 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಯಾಗಿ 85,371 ಕೋಟಿ ರೂಪಾಯಿ ಆಗಿದೆ.
ಏಪ್ರಿಲ್ ಜಿಎಸ್‌ಟಿ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆ
ಏಪ್ರಿಲ್ 2023ರ ಜಿಎಸ್‌ಟಿ ಆದಾಯವು ಕಳೆದ ವರ್ಷದ ಅದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇಕಡ 12ರಷ್ಟು ಏರಿಕೆಯಾಗಿದೆ. ತಿಂಗಳ ಅವಧಿಯಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡ 16ರಷ್ಟು ಏರಿಕೆ ಕಂಡಿದೆ.
ಮೊದಲ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹ 1.75 ಲಕ್ಷ ಕೋಟಿ ರೂಪಾಯಿ ದಾಟಿದೆ. ಮಾರ್ಚ್ 2023 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 9.0 ಕೋಟಿಯಾಗಿದೆ. ಇದು ಫೆಬ್ರವರಿ 2023 ರಲ್ಲಿ ಉತ್ಪತ್ತಿಯಾದ 8.1 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇಕಡ 11ರಷ್ಟು ಏರಿಕೆಯಾಗಿದೆ.
ಒಂದೇ ದಿನದಲ್ಲಿ ಅತೀ ಹೆಚ್ಚು ಜಿಎಸ್‌ಟಿ ಸಂಗ್ರಹ
2023 ರ ಏಪ್ರಿಲ್ ತಿಂಗಳಿನಲ್ಲಿ 20 ಏಪ್ರಿಲ್ 2023 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 20 ಏಪ್ರಿಲ್ 2023 ರಂದು 9.8 ಲಕ್ಷ ವಹಿವಾಟುಗಳ ಮೂಲಕ 68,228 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿ ಮಾಡಲಾಗಿದೆ. ಕಳೆದ ವರ್ಷ (ಇದೇ ದಿನಾಂಕದಂದು) 9.6 ಲಕ್ಷ ವಹಿವಾಟಿನ ಮೂಲಕ 57,846 ಕೋಟಿ ರೂಪಾಯಿಯಷ್ಟು ಏಕದನ ಪಾವತಿ ನಡೆದಿತ್ತು.
ಎರಡನೇ ಅತೀ ಅಧಿಕ ಜಿಎಸ್‌ಟಿ ಸಂಗ್ರಹ
ಜನವರಿ, 2023ರಲ್ಲಿ ಸಂಗ್ರಹವಾದ ಜಿಎಸ್‌ಟಿಯು ಎರಡನೇ ಅತೀ ಅಧಿಕ ಸಂಗ್ರಹವಾಗಿದೆ. ಈ ಹಿಂದೆ ಏಪ್ರಿಲ್ 2022ರಲ್ಲಿ ಸಂಗ್ರಹವಾದ ಜಿಎಸ್‌ಟಿಯು ಈವರೆಗಿನ ಅತೀ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ. 2022ರ ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ಮಾಡಲಾಗಿದೆ. ಇದು ಜಿಎಸ್‌ಟಿ ಇತಿಹಾಸದಲ್ಲೇ ಅತೀ ಅಧಿಕವಾಗಿ ಸಂಗ್ರಹವಾದ ಜಿಎಸ್‌ಟಿ ಪ್ರಮಾಣವಾಗಿದೆ. ಅದರ ನಂತರದ ಸ್ಥಾನದಲ್ಲಿ 2023ರ ಜನವರಿಯಲ್ಲಿ ಸಂಗ್ರಹವಾದ ಜಿಎಸ್‌ಟಿ ಇದೆ.
"ಕಳೆದ ಹಲವಾರು ವರ್ಷಗಳಿಂದ ತೆರಿಗೆಯ ಸಂಗ್ರಹವನ್ನು ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ. ಜಿಎಸ್‌ಟಿ ರಿಟರ್ನ್ ಫೈಲಿಂಗ್ ಪ್ರಮಾಣ (GSTR-3B) ಮತ್ತು ಇನ್‌ವಾಯ್ಸ್ ಸ್ಟೇಟ್‌ಮೆಂಟ್ (GSTR-1) ವರ್ಷಗಳಿಂದ ಹೆಚ್ಚಾಗುತ್ತಿದೆ," ಎಂದು ಕೂಡಾ ಸಚಿವಾಲಯವು ಮಾಹಿತಿ ನೀಡಿದೆ.
2022ರ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಟ್ರಿಲಿಯನ್ ರೂಪಾಯಿ ಜಿಎಸ್‌ಟಿ ಸಂಗ್ರಹ ಆಗಿದೆ. ನವೆಂಬರ್‌ನಲ್ಲಿ ಆದ ಜಿಎಸ್‌ಟಿ ಸಂಗ್ರಹಕ್ಕಿಂತ ಸುಮಾರು ಶೇಕಡ 2.5ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ.


Click it and Unblock the Notifications