ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ ಮತ್ತೆ ಏರಿಕೆಯಾಗಿದೆ. ಜನವರಿ ಜಿಎಸ್‌ಟಿ ಸಂಗ್ರಹವು 1.55 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಎರಡನೇ ಅತೀ ಅಧಿಕ ಜಿಎಸ್‌ಟಿ ಸಂಗ್ರಹ ಇದಾಗಿದೆ ಎಂದು ಮಂಗಳವಾರ ಹಣಕಾಸು ಸಚಿವಾಲಯವು ಮಾಹಿತಿ ನೀಡಿದೆ.
"ಜನವರಿ 2023ರ ತಿಂಗಳಿನ ಅಂತ್ಯದ ದಿನವಾದ 31ರಂದು ಸಂಜೆ 5 ಗಂಟೆಯವರೆಗೆ ಒಟ್ಟು 1,55,922 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಈ ಪೈಕಿ 28,963 ಕೋಟಿ ಸಿಜಿಎಸ್‌ಟಿ ಆಗಿದ್ದರೆ, 36,730 ಕೋಟಿ ಎಸ್‌ಜಿಎಸ್‌ಟಿ ಆಗಿದೆ. 79,599 ಕೋಟಿ ಐಜಿಎಸ್‌ಟಿ ಹಾಗೂ 10,630 ಕೋಟಿ ಸೆಸ್ ಆಗಿದೆ," ಎಂದು ಸಚಿವಾಲಯ ವಿವರಣೆ ನೀಡಿದೆ.
ಕಳೆದ ವರ್ಷ ಜನವರಿಯಲ್ಲಿ ಜಿಎಸ್‌ಟಿ ಮೂಲಕ ಸಂಗ್ರಹವಾದ ಆದಾಯಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಜನವರಿ ತಿಂಗಳಿನ ಜಿಎಸ್‌ಟಿ ಸಂಗ್ರಹವು ಶೇಕಡ 24ರಷ್ಟು ಏರಿಕೆಯಾಗಿದೆ. ಈ ಹಣಕಾಸು ವರ್ಷದಲ್ಲಿ ಇದು ಮೂರನೇ ಬಾರಿ 1.50 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ.

ಎರಡನೇ ಅತೀ ಅಧಿಕ ಜಿಎಸ್‌ಟಿ ಸಂಗ್ರಹ
ಜನವರಿ, 2023ರಲ್ಲಿ ಸಂಗ್ರಹವಾದ ಜಿಎಸ್‌ಟಿಯು ಎರಡನೇ ಅತೀ ಅಧಿಕ ಸಂಗ್ರಹವಾಗಿದೆ. ಈ ಹಿಂದೆ ಏಪ್ರಿಲ್ 2022ರಲ್ಲಿ ಸಂಗ್ರಹವಾದ ಜಿಎಸ್‌ಟಿಯು ಈವರೆಗಿನ ಅತೀ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ. 2022ರ ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ಮಾಡಲಾಗಿದೆ. ಇದು ಜಿಎಸ್‌ಟಿ ಇತಿಹಾಸದಲ್ಲೇ ಅತೀ ಅಧಿಕವಾಗಿ ಸಂಗ್ರಹವಾದ ಜಿಎಸ್‌ಟಿ ಪ್ರಮಾಣವಾಗಿದೆ. ಅದರ ನಂತರದ ಸ್ಥಾನದಲ್ಲಿ 2023ರ ಜನವರಿಯಲ್ಲಿ ಸಂಗ್ರಹವಾದ ಜಿಎಸ್‌ಟಿ ಇದೆ.
"ಕಳೆದ ಹಲವಾರು ವರ್ಷಗಳಿಂದ ತೆರಿಗೆಯ ಸಂಗ್ರಹವನ್ನು ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ. ಜಿಎಸ್‌ಟಿ ರಿಟರ್ನ್ ಫೈಲಿಂಗ್ ಪ್ರಮಾಣ (GSTR-3B) ಮತ್ತು ಇನ್‌ವಾಯ್ಸ್ ಸ್ಟೇಟ್‌ಮೆಂಟ್ (GSTR-1) ವರ್ಷಗಳಿಂದ ಹೆಚ್ಚಾಗುತ್ತಿದೆ," ಎಂದು ಕೂಡಾ ಸಚಿವಾಲಯವು ಮಾಹಿತಿ ನೀಡಿದೆ.
2022ರ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.49 ಟ್ರಿಲಿಯನ್ ರೂಪಾಯಿ ಜಿಎಸ್‌ಟಿ ಸಂಗ್ರಹ ಆಗಿದೆ. ನವೆಂಬರ್‌ನಲ್ಲಿ ಆದ ಜಿಎಸ್‌ಟಿ ಸಂಗ್ರಹಕ್ಕಿಂತ ಸುಮಾರು ಶೇಕಡ 2.5ರಷ್ಟು ಜಿಎಸ್‌ಟಿ ಸಂಗ್ರಹವಾಗಿದೆ.


Click it and Unblock the Notifications