ನವೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ಡೇಟಾವನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.46 ಲಕ್ಷ ಕೋಟಿ ರೂಪಾಯಿ ಆಗಿದೆ. ವರ್ಷದಿಂದ ವರ್ಷಕ್ಕೆ ಶೇಕಡ 11ರಷ್ಟು ಹೆಚ್ಚಳವಾಗಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಸರಕು ಮತ್ತು ಸೇವೆ ತೆರಿಗೆ (ಜಿಎಸ್‌ಟಿ) ಸಂಗ್ರಹ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಅದಾದ ಬಳಿಕ ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು ಇದು ಎರಡನೇ ಅತೀ ದೊಡ್ಡ ಜಿಎಸ್‌ಟಿ ಸಂಗ್ರಹವಾಗಿದೆ.
ನವೆಂಬರ್ 2022ರಲ್ಲಿ 1,45,867 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಸಿಜಿಎಸ್‌ಟಿ 25,681 ಕೋಟಿ ರೂಪಾಯಿ ಆಗಿದ್ದು ಎಸ್‌ಜಿಎಸ್‌ಟಿ 32,651 ಕೋಟಿ ರೂಪಾಯಿ ಆಗಿದೆ.
ಐಜಿಎಸ್‌ಟಿ 77,103 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಸರಕು ಆಮದು ಮಾಡಿದುದ್ದರಿಂದ ಸಂಗ್ರಹ ಮಾಡಿದ 38,635 ಕೋಟಿ ರೂಪಾಯಿಯು ಸೇರಿದೆ. ಸೆಸ್ 10,433 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಸರಕು ಆಮದು ಮಾಡಿದುದ್ದರಿಂದ ಸಂಗ್ರಹ ಮಾಡಿದ 817 ಕೋಟಿ ರೂಪಾಯಿ ಕೂಡಾ ಸೇರಿದೆ," ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಇನ್ನು ಮಾಸಿಕ ಆದಾಯವು 1.4 ಲಕ್ಷ ಕೋಟಿ ರೂಪಾಯಿ ಆಗಿದೆ. ಸತತ ಒಂಬತ್ತನೇ ತಿಂಗಳು 1.4 ಲಕ್ಷ ಕೋಟಿಯಷ್ಟು ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಗುರುವಾರ ಕೇಂದ್ರ ವಿತ್ತ ಸಚಿವಾಲಯ ಹೇಳಿದೆ.

ಸರ್ಕಾರವು 33,997 ಕೋಟಿ ರೂಪಾಯಿ ಸಿಜಿಎಸ್‌ಟಿ, 28,538 ಕೋಟಿ ರೂಪಾಯಿ ಎಸ್‌ಜಿಎಸ್‌ಟಿ ಚುಕ್ತ ಮಾಡಿದೆ. ಸಾಮಾನ್ಯ ಲೆಕ್ಕಾಚಾರದ ಬಳಿಕ ನವೆಂಬರ್ 2022ರಲ್ಲಿ ಕೇಂದ್ರ ಹಾಗೂ ರಾಜ್ಯಕ್ಕೆ ಸಿಜಿಎಸ್‌ಟಿಯಿಂದ 59,678 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 61,189 ಕೋಟಿ ರೂಪಾಯಿ ಆಗಿದೆ. ಇನ್ನು ಅಧಿಕವಾಗಿ ಕೇಂದ್ರವು 17,000 ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರವನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದೆ.
ಜಿಎಸ್‌ಟಿ ಸಂಗ್ರಹ ಶೇಕಡ 11ರಷ್ಟು ಏರಿಕೆ
ಇನ್ನು ನವೆಂಬರ್ 2022ರಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ ಜಿಎಸ್‌ಟಿ ಸಂಗ್ರಹ ಶೇಕಡ 11ರಷ್ಟು ಹೆಚ್ಚಳವಾಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ 1,31,526 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ ಈ ವರ್ಷ ನವೆಂಬರ್ ತಿಂಗಳಿನಲ್ಲಿ 1,45,867 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ.
ಸರಕು ಆಮದಿನಿಂದ ಸಂಗ್ರಹ ಮಾಡಲಾದ ಆದಾಯವು ಕಳೆದ ವರ್ಷ ಇದೇ ಸಂದರ್ಭಕ್ಕೆ ಹೋಲಿಕೆ ಮಾಡಿದಾಗ ಈ ತಿಂಗಳು ಶೇಕಡ 20ರಷ್ಟು ಹೆಚ್ಚಾಗಿದೆ. ಸ್ಥಳೀಯ ವರ್ಗಾವಣೆಯಿಂದ ಶೇಕಡ 8ರಷ್ಟು ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ.


Click it and Unblock the Notifications