ನವದೆಹಲಿ, ನ. 1: ಕಳೆದ ತಿಂಗಳು ಭಾರತದಲ್ಲಿ ಒಳ್ಳೆಯ ಮೊತ್ತದ ತೆರಿಗೆ ಸಂಗ್ರಹವಾಗಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ 1,51,718 ಕೋಟಿ ರೂ ಕಲೆಹಾಕಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಮಾಹಿತಿ ನೀಡಿದೆ. ಜಿಎಸ್‌ಟಿ ಇತಿಹಾಸದಲ್ಲಿ ಇದು ಎರಡನೇ ಬಾರಿ ಒಂದೂವರೆ ಲಕ್ಷ ಕೋಟಿ ಮಟ್ಟ ಮುಟ್ಟಿದ್ದು. ಅಕ್ಟೋಬರ್‌ನಲ್ಲಿ ಸಿಕ್ಕಿರುವ ಜಿಎಸ್‌ಟಿ ಮೊತ್ತ ಎರಡನೇ ಅತಿಹೆಚ್ಚು ಜಿಎಸ್‌ಟಿ ಸಂಗ್ರಹ ಎನಿಸಿದೆ.
ಅಕ್ಟೋಬರ್‌ನಲ್ಲಿ ಸಂಗ್ರಹವಾದ ಜಿಎಸ್‌ಟಿ ಹಣದಲ್ಲಿ ಕೇಂದ್ರಕ್ಕೆ ಹೋಗುವ ಸಿಜಿಎಸ್‌ಟಿ 26,039 ಕೋಟಿ ಆಗಿದೆ. ರಾಜ್ಯಕ್ಕೆ ಹೋಗುವ ಎಸ್‌ಜಿಎಸ್‌ಟಿ 33,396 ಕೋಟಿ ಇದೆ. ಇದಲ್ಲೇ 81 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಐಜಿಎಸ್‌ಟಿ ಸಂಗ್ರಹವಾಗಿದೆ.
ದೇಶದಲ್ಲಿ ಸತತವಾಗಿ 1.4 ಲಕ್ಷ ಕೋಟಿ ರೂಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಇದೂವರೆಗೆ 9 ತಿಂಗಳು ಜಿಎಸ್‌ಟಿ ಸಂಗ್ರಹ 1.4 ಲಕ್ಷ ಕೋಟಿ ದಾಟಿದೆ. ಅಕ್ಟೋಬರ್ ಸೇರಿ 8 ತಿಂಗಳು ಸತತವಾಗಿ ಈ ಮಟ್ಟ ಮುಟ್ಟಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಟ್ರಾನಿಕ್ ವೇ ಬಿಲ್‌ಗಳು ದಾಖಲೆ ಮಟ್ಟದಲ್ಲಿ ಜನರೇಟ್ ಆಗಿದ್ದವು. ಇದರಿಂದಾಗಿ ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ ಕಲೆಕ್ಷನ್ ಜೋರಾಗಿ ಆಗಿದೆ. ಅಗಸ್ಟ್ ತಿಂಗಳಲ್ಲಿ 7.7 ಕೋಟಿ ಇ-ವೇ ಬಿಲ್ ಜನರೇಟ್ ಆಗಿದ್ದರೆ ಸೆಪ್ಟೆಂಬರ್‌ನಲ್ಲಿ ಇದರ ಸಂಖ್ಯೆ 8.3 ಕೋಟಿ ರೂ ಆಗಿತ್ತು. ಯಾವುದೇ ತಿಂಗಳಲ್ಲಿ ಜನರೇಟ್ ಆಗುವ ಇ-ವೇ ಬಿಲ್‌ನ ಲೆಕ್ಕವು ಮುಂದಿನ ತಿಂಗಳಿನಲ್ಲಿ ಜಿಎಸ್‌ಟಿ ರೂಪದಲ್ಲಿ ಸಿಗುತ್ತದೆ.
ಅಕ್ಟೋಬರ್‌ನಲ್ಲಿ ಜಿಎಸ್‌ಟಿ:
ಸಿಜಿಎಸ್‌ಟಿ: 26,039 ಕೋಟಿ ರೂ
ಎಸ್‌ಜಿಎಸ್‌ಟಿ: 33,396 ಕೋಟಿ ರೂ
ಐಜಿಎಸ್‌ಟಿ: 81,778 ಕೋಟಿ ರೂ
ಸೆಸ್: 10,505 ಕೋಟಿ ರೂ
ಐಜಿಎಸ್‌ಟಿಯ ಸಂಗ್ರಹದಲ್ಲಿ ಆಮದು ವಸ್ತುಗಳ ಮೇಲೆ ಸಂಗ್ರಹಿಸಿದ 37,297 ಕೋಟಿ ರೂ ಸೇರಿದೆ. ಇನ್ನು 10,505 ಕೋಟಿ ರೂ ಮೊತ್ತದ ಸೆಸ್‌ನಲ್ಲಿ ಆಮದು ವಸ್ತುಗಳ ಮೇಲಿನ ಸೆಸ್ ಒಳಗೊಂಡಿದೆ.
ಏನಿದು ಐಜಿಎಸ್‌ಟಿ?
ಐಜಿಎಸ್‌ಟಿಯು ಜಿಎಸ್‌ಟಿಯ ಮೂರು ಭಾಗಗಳಲ್ಲಿ ಒಂದು. ಇಂಟಿಗ್ರೇಟೆಡ್ ಜಿಎಸ್‌ಟಿ ಇದು. ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಯು ಒಂದು ರಾಜ್ಯದೊಳಗೆ ನಡೆಯುವ ವಹಿವಾಟಿನಲ್ಲಿ ಸಂಗ್ರಹಿಸುವ ತೆರಿಗೆಯಾಗಿದೆ. ಐಜಿಎಸ್‌ಟಿ ಎಂಬುದು ಅಂತಾರಾಜ್ಯ ವಹಿವಾಟುಗಳ ಮೇಲೆ ವಿಧಿಸುವ ತೆರಿಗೆಯಾಗಿದೆ.

ಉದಾಹರಣೆಗೆ, ಒಂದು ಸರಕಿಗೆ ಶೇ. 8 ಜಿಎಸ್‌ಟಿ ಇದೆ ಎಂದಿಟ್ಟುಕೊಳ್ಳಿ. ಈ ಸರಕನ್ನು ಬೆಂಗಳೂರಿನಲ್ಲಿ ಕೊಂಡು ಮಂಡ್ಯಕ್ಕೆ ಸಾಗಿಸಿದರೆ ಅದಕ್ಕೆ ಶೇ. 4 ಸಿಜಿಎಸ್‌ಟಿ ಮತ್ತು ಶೇ. 4 ಎಸ್‌ಜಿಎಸ್‌ಟಿಯನ್ನು ಪಾವತಿಸಬೇಕು.
ಅದೇ ಸರಕನ್ನು ಹೊರರಾಜ್ಯದವರೊಬ್ಬರ ಖರೀದಿಸಿದಾಗ ಶೇ. 8ರಷ್ಟು ಐಜಿಎಸ್‌ಟಿ ಅನ್ವಯವಾಗುತ್ತದೆ. ಇಲ್ಲಿ ಖರೀದಿಸಿದವರು ಜಿಎಸ್‌ಟಿಯನ್ನು ಮಾರಾಟಗಾರನಿಗೆ ಕೊಡಬೇಕು. ಇಲ್ಲಿ ಐಜಿಎಸ್‌ಟಿ ನೇರವಾಗಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಈ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮವಾಗಿ ಹಂಚಿಕೊಳ್ಳಬೇಕು ಎಂಬುದು ಜಿಎಸ್‌ಟಿ ನಿಯಮ ಹೇಳುತ್ತದೆ.


Click it and Unblock the Notifications