ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಇಂದು ಸಭೆ ಸೇರಲಿದ್ದು, ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಬಳಸುವ ಉತ್ಪನ್ನಗಳು ಮತ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಮೇಲೆ ಹೆಚ್ಚುವರಿ ತೆರಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯಲಿದೆ.
ದೆಹಲಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿದೇಶದಿಂದ ರಾಜ್ಯಗಳಿಗೆ ಬರುವ ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲೆ ಆಮದು ಸುಂಕ (IGST) ವಿನಾಯಿತಿ ನೀಡಲಾಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021 ರ ಆಗಸ್ಟ್ 31 ರವರೆಗೆ ಕೋವಿಡ್‌ಗೆ ಸಂಬಂಧಿಸಿದ ಸರಬರಾಜಿನಲ್ಲಿ ಐಜಿಎಸ್‌ಟಿಗೆ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಇಂದು ಕೋವಿಡ್ ಸಂಬಂಧಿತ ವೈದ್ಯಕೀಯ ಸಲಕರಣೆಗಳ ಮೇಲಿನ ಜಿಎಸ್‌ಟಿ ದರ ಕಡಿತದ ವಿಷಯದ ಬಗ್ಗೆ ಚರ್ಚಿಸಲಾಗುವುದು. ಜೊತೆಗೆ ಈ ಕುರಿತು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.
ಕೋವಿಡ್ ಲಸಿಕೆ ಮೇಲಿನ ತೆರಿಗೆ ವಿನಾಯಿತಿ?
ಜೂನ್ 21 ರಿಂದ ರಾಜ್ಯಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಪೂರೈಸಲು ಕೇಂದ್ರವು ಸಮ್ಮತಿಸುತ್ತಿರುವುದರಿಂದ, ಲಸಿಕೆ ಖರೀದಿಯ ಮೇಲಿನ ಶೇಕಡಾ 5ರಷ್ಟು ತೆರಿಗೆ ಹೊರೆಯನ್ನು ರಾಜ್ಯಗಳು ಭರಿಸಬೇಕಾಗಿಲ್ಲ. ಆದಾಗ್ಯೂ, ಖಾಸಗಿ ಆಸ್ಪತ್ರೆಗಳು ಖರೀದಿಸುವ ಲಸಿಕೆಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸುವ ಕುರಿತು ಇಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವೈದ್ಯಕೀಯ ಆಕ್ಸಿಜನ್ ಮೇಲಿನ ಜಿಎಸ್‌ಟಿ ದರ ಇಳಿಕೆ ಸಾಧ್ಯತೆ
ಜಿಎಸ್‌ಟಿ ಕೌನ್ಸಿಲ್ ವೈದ್ಯಕೀಯ ಆಮ್ಲಜನಕ ಮತ್ತು ಸಂಬಂಧಿತ ಗೇರ್, ಪಲ್ಸ್ ಆಕ್ಸಿಮೀಟರ್ ಮತ್ತು ಕೋವಿಡ್ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆ ಪರಿಹಾರದ ಬಗ್ಗೆಯೂ ಚರ್ಚಿಸಲಿದೆ. ಜೊತೆಗೆ ಈ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12ರಿಂದ ರಿಂದ ಶೇಕಡಾ 5ಕ್ಕೆ ಇಳಿಸಲು ಅಥವಾ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆಯು ಚರ್ಚೆ ನಡೆಯಲಿದೆ.
ವೈದ್ಯಕೀಯ ಉಪಕರಣಗಳು
ಆಸ್ಪತ್ರೆಗಳು ಮತ್ತು ಆಂಬುಲೆನ್ಸ್‌ಗಳು ಬಳಸುವ ಸಲಕರಣೆಗಳ ಮೇಲಿನ ತೆರಿಗೆ ಪರಿಹಾರಕ್ಕಾಗಿ ಕೌನ್ಸಿಲ್ ಸಲಹೆಗಳನ್ನು ಸ್ವೀಕರಿಸಿದೆ. ಆದರೆ ಇವುಗಳು ಸಂಸ್ಥೆಗಳು ಬಳಸುವ ತೆರಿಗೆ ದರಗಳಲ್ಲಿ ಏನಾದರೂ ಬದಲಾವಣೆಗಳಾಗುತ್ತದೆಯೇ ಎಂದು ನೋಡಬೇಕಾಗಿದೆ ಮತ್ತು ತೆರಿಗೆ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸುವುದು ಎಂಬುದು ಖಚಿತವಾಗಿಲ್ಲ.
ಸಣ್ಣ ಉದ್ಯಮಗಳಿಗೆ ಪರಿಹಾರ
ಸಣ್ಣ ಉದ್ಯಮಗಳು ತ್ರೈಮಾಸಿಕ ತೆರಿಗೆ ಪಾವತಿಗೆ ಪರಿಹಾರ ಸೌಲಭ್ಯವನ್ನು ನಿರೀಕ್ಷಿಸುತ್ತಿವೆ. ಆದರೆ ಈಗ ಪ್ರತಿ ತಿಂಗಳು ಸಣ್ಣ ಉದ್ಯಮಗಳು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ತ್ರೈಮಾಸಿಕವಾಗಿ ಪಾವತಿಸುವ ಯೋಜನೆಯ ವಿವರಗಳನ್ನು ರೂಪಿಸಲು ಕೇಳಿಕೊಳ್ಳಲಾಗಿತ್ತು. ಈ ಕುರಿತು ಯೋಜನೆಯ ವಿವರಗಳನ್ನು ಚರ್ಚಿಸಿ ಅಂತಿಮ ತೀರ್ಮಾನ ಹೊರಬೀಳಬಹುದು.


Click it and Unblock the Notifications