ಕೋವಿಡ್ ಮಹಾಮಾರಿಯ ಕಾಟಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿದೆ. ಅದರಿಂದಾಗಿ ಅಲ್ಲಿನ ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಮೂರು ವಾರಗಳ ಅವಧಿಯಲ್ಲಿ ಒಟ್ಟು 1.68 ಕೋಟಿ ಉದ್ಯೋಗಗಳು ನಷ್ಟವಾಗಿವೆ.
ದೊಡ್ಡಣ್ಣನ ಆರ್ಥಿಕ ವ್ಯವಸ್ಥೆಯು ಕೊರೊನಾವೈರಸ್ ನಿಂದಾಗಿ ಕಂಗೆಟ್ಟಿ ಹೋಗಿದೆ. ದಿನದಿಂದ ದಿನಕ್ಕೆ ಉದ್ಯೋಗ ಕಳೆದುಕೊಳ್ಳುತ್ತಿರುವ ಪ್ರಮಾಣ ದುಪ್ಪಟ್ಟಾಗುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆಯಲ್ಲೂ ಅಮೆರಿಕಾ ಮುಂದಿದ್ದು, ಉದ್ಯೋಗ ಕಳೆದುಕೊಳ್ಳುವವರ ಪ್ರಮಾಣವೂ ಕೂಡ ಅಮೆರಿಕಾದಲ್ಲಿ ಹೆಚ್ಚುತ್ತಿದೆ.
ಅಮೆರಿಕಾದಲ್ಲಿ ನಿರುದ್ಯೋಗ ಪ್ರಮಾಣ 3000 ಪರ್ಸೆಂಟ್ ಏರಿಕೆ
ಅಮೆರಿಕಾದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವುದರಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ವಿಶ್ವದ ಬಹುದೊಡ್ಡ ಆರ್ಥಿಕತೆಯು ಹಳಿತಪ್ಪುವಂತೆ ಮಾಡಿದೆ. ಇದರ ಜೊತೆಗೆ ನಿರುದ್ಯೋಗದ ಪ್ರಮಾಣವೂ ಹೆಚ್ಚುತ್ತಿದ್ದು, ಇದರ ಪ್ರಮಾಣ 3000 ಪರ್ಸೆಂಟ್ ಹೆಚ್ಚಾಗಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತಿವೆ.
ಕಳೆದ ಒಂದು ವಾರದಲ್ಲಿ 6.6 ಮಿಲಿಯನ್ ನಿರುದ್ಯೋಗ
ಅಮೆರಿಕದ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ ವಾರದಲ್ಲಿಯೇ ಸುಮಾರು 6.6 ಮಿಲಿಯನ್ ಮಂದಿ ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮಾರ್ಚ್ ತಿಂಗಳ ಕೊನೆಯ ಎರಡು ವಾರಗಳಲ್ಲಿ 1 ಕೋಟಿ ಮಂದಿ ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳೇ ಹೆಚ್ಚಾಗಿದ್ದಾರೆ. ಆದರೆ ಅಮೆರಿಕಾದ ಇತರ ಪ್ರಾಂತ್ಯಗಳಲ್ಲಿನ ಸಾಂಖ್ಯಿಕ ಮಾಹಿತಿ ತೆಗೆದುಕೊಂಡರೆ ಹೆಚ್ಚಾಗಬಹುದು. ಏಕೆಂದರೆ ಅಲ್ಲಿ ಈಗಾಗಲೇ ಸಲ್ಲಿಕೆಯಾಗಿರುವ ಕೋರಿಕೆಗಳ ವಿಲೇವಾರಿ ಮಾಡಲಾಗುತ್ತಿದೆ. ಈ ಅಂಶ 1948ರ ಬಳಿಕದ ಅತ್ಯಂತ ದೊಡ್ಡ ಪ್ರಮಾಣದ್ದಾಗಿದೆ.
ಕೊರೊನಾಯಿಂದ 2 ಕೋಟಿ ಉದ್ಯೋಗ ನಷ್ಟ ಸಾಧ್ಯತೆ
ಅಮೆರಿಕದಲ್ಲಿರುವ ಅರ್ಥ ಶಾಸ್ತ್ರಜ್ಞರು ನಿರೀಕ್ಷೆ ಮಾಡಿರುವಂತೆ ಈ ತಿಂಗಳಲ್ಲಿಯೇ 2 ಕೋಟಿ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಚಿವಾಲಯ ಈ ತಿಂಗಳ ಉದ್ಯೋಗ ಮಾಹಿತಿ ಬಿಡುಗಡೆ ಮಾಡಿದಾಗ ನಿರುದ್ಯೋಗ ಪ್ರಮಾಣ ಜಿಗಿತ ಕಾಣಲಿದೆ. ಅದು 15 ಪರ್ಸೆಂಟ್ ಏರಿಕೆಯಾಗಲಿದೆ ಎಂದು ಆತಂಕಪಡಲಾಗಿದೆ.
ಅಮೆರಿಕದ 50 ಪ್ರಾಂತ್ಯಗಳ ಪೈಕಿ 48ರಲ್ಲಿ ಲಾಕ್‌ಡೌನ್ ಇದೆ. ರೆಸ್ಟೋರೆಂಟ್‌ಗಳು, ಹೊಟೇಲ್‌ಗಳು, ಸಣ್ಣ ಪ್ರಮಾಣದ ಉದ್ದಿಮೆಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳ ಮಾಲೀಕರು ಮತ್ತು ಆಡಳಿತ ವರ್ಗ ಈಗಾಗಲೇ ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾ ಮಾಡಿವೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಮಿಚಿಗನ್, ಫ್ಲೋರಿಡಾ, ಜಾರ್ಜಿಯಾ, ಟೆಕ್ಸಸ್, ನ್ಯೂಜರ್ಸಿಗಳಲ್ಲಿ ಕಳೆದ ವಾರದವರೆಗೆ ನಿರುದ್ಯೋಗಿಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಕೆಲಸ ಕಳೆದುಕೊಳ್ಳಲಿದ್ದಾರೆ ಸಾವಿರಾರು ಭಾರತೀಯರು
ಅಮೆರಿಕಾದಲ್ಲಿ ಏರಿರುವ ಕೊರೊನಾವೈರಸ್ ಅಮೆರಿಕಾ ಪ್ರಜೆಗಳನ್ನಷ್ಟೇ ಅಲ್ಲ ಭಾರತೀಯರ ಮೇಲೂ ಪರಿಣಾಮ ಬೀರಿದೆ. ಏಕೆಂದರೆ ಅಮೆರಿಕಾದ ಕಂಪನಿಗಳು ವಿಶ್ವದಾದ್ಯಂತ ವರ್ಷಕ್ಕೆ ಹತ್ತಾರು ಸಾವಿರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಿವಿಧ ದೇಶಗಳಿಂದ ನೇಮಕ ಮಾಡಿಕೊಳ್ಳುತ್ತವೆ. ಇದರಲ್ಲಿ ಭಾರತದಿಂದ ತೆರಳಿದವರ ಸಂಖ್ಯೆಯು ದೊಡ್ಡ ಪ್ರಮಾಣದಲ್ಲಿದೆ.
ಈಗಾಗಲೇ ಅಮೆರಿಕಾದ ಕಂಪನಿಗಳು H1-B ವೀಸಾ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿದ್ದು, ಕೆಲಸದಿಂದ ವಜಾಗೊಳಿಸುತ್ತಿದೆ. ಹೀಗಾಗಿ ಭಾರತೀಯರು ಕೂಡ ಭಾರೀ ಪ್ರಮಾಣದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
60 ದಿನದೊಳಗೆ ಬೇರೆ ಕೆಲಸ ಹುಡುಕಿಕೊಳ್ಳಬೇಕು, ಇಲ್ಲ ದೇಶ ಬಿಡಬೇಕು
ಕೊರೊನಾವೈರಸ್‌ನಿಂದಾಗಿ ಆಗಿರುವ ನಷ್ಟದ ಪ್ರಮಾಣಕ್ಕೆ ಅಮೆರಿಕಾದಲ್ಲಿನ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಿದೆ. ಇದರಲ್ಲಿ ಭಾರತೀಯರ ಪ್ರಮಾಣವು ಹೆಚ್ಚಾಗಿರಲಿದೆ. ಹೀಗೆ ಕೊರೊನಾಯಿಂದ ಕೆಲಸ ಕಳೆದುಕೊಳ್ಳುವ ಭಾರತೀಯರು H1-B ವೀಸಾ ನಿಯಮದಂತೆ 60 ದಿನಗಳ ಒಳಗೆ ಬೇರೆ ಕೆಲಸ ಹುಡುಕಿಕೊಳ್ಳಬೇಕು, ಇಲ್ಲವೇ ಸಂಸಾರ ಸಮೇತ ಭಾರತಕ್ಕೆ ವಾಪಸ್ ಆಗಬೇಕು.
ಒನ್ ಸೈಡ್ ಟಿಕೆಟ್ ಬುಕ್ ಮಾಡಲು ಕಂಪನಿಗಳ ಯೋಚನೆ
ಕೆಲಸದಿಂದ ಉದ್ಯೋಗಿಗಳನ್ನು ತೆಗೆದು ಹಾಕಲಿರುವ ಕಂಪನಿಗಳು ಈ ರೀತಿಯ ಯೋಚನೆಯನ್ನು ಮಾಡುತ್ತಿವೆ. ಕೆಲಸದಿಂದ ಉದ್ಯೋಗಿಗಳನ್ನು ವಜಾ ಮಾಡಿ, ಅವರಿಗೆ ತಮ್ಮ ಸ್ವಂತ ದೇಶಕ್ಕೆ ಕಳುಹಿಸಲು ಒನ್ ಸೈಡ್ ಟಿಕೆಟ್ ಬುಕ್ ಮಾಡಲು ಯೋಜನೆ ಮಾಡಿಕೊಂಡಿವೆ. ಈ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಅಮೆರಿಕಾಕ್ಕೆ ಉದ್ಯೋಗ ಅರೆಸಿಕೊಂಡು ಹೋದವರು ತಾಯ್ನಾಡಿಗೆ ಮರಳಬೇಕಾದ ಪರಿಸ್ಥಿತಿ ಬಂದೊದಗಲಿದೆ.
ವಿಮಾನ ಹಾರಾಟ ಬಂದ್ ಮಾಡಿರುವ ಭಾರತ!
ಈಗಾಗಲೇ ಲಾಕ್‌ಡೌನ್ ಜೊತೆಗೆ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ಬಂದ್ ಮಾಡಿರುವ ಭಾರತವು ಯಾವುದೇ ದೇಶದಿಂದಲೂ ಜನರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ಕೆಲಸ ಕಳೆದುಕೊಂಡ ಭಾರತೀಯರು 60 ದಿನದೊಳಗೆ ಮತ್ತೊಂದು ಕೆಲಸ ಸಿಗದಿದ್ದರೆ H1-B ವೀಸಾ ಅಡಿಯಲ್ಲಿ ವಾಪಸ್ ಭಾರತಕ್ಕೆ ಬರಬೇಕಾಗುತ್ತದೆ. ಆದರೆ ಕೊರೊನಾ ಭೀತಿಯಲ್ಲಿ ಭಾರತವು ಇನ್ನೂ ಎಷ್ಟು ದಿನಗಳ ಕಾಲ ಗಡಿಯನ್ನು , ಅಂತರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡಲಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
H1-B ವೀಸಾ ವಿಸ್ತರಣೆ ಮಾಡುವಂತೆ ಅಮೆರಿಕಾಕ್ಕೆ ಮನವಿ
ಭಾರತದಿಂದ H1-B ವೀಸಾ ಅಡಿಯಲ್ಲಿ ತೆರಳಿರುವವರ ವೀಸಾ ಅವಧಿಯನ್ನು ವಿಸ್ತರಣೆ ಮಾಡುವಂತೆ ಭಾರತದ ವಿದೇಶಾಂಗ ಸಚಿವಾಲಯ, ಅಮೆರಿಕಾಕ್ಕೆ ಮನವಿ ಮಾಡುತ್ತಿದೆ. H1-B ವೀಸಾ ನಿಯಮದಡಿಯಲ್ಲಿ ಕೆಲಸ ಕಳೆದುಕೊಂಡಿರುವವರು, ಕೆಲಸ ಕಳೆದುಕೊಳ್ಳುವವರು 60 ದಿನದೊಳಗೆ ಬೇರೆ ಕೆಲಸ ಸಿಗದಿದ್ದರೆ ದೇಶ ಬಿಡಬೇಕು. ಹೀಗಾಗಿ ಈ ಅವಧಿಯನ್ನು 60 ದಿನದಿಂದ 180 ದಿನಗಳಿಗೆ ವಿಸ್ತರಿಸಬೇಕು ಎಂದು ಅಮೆರಿಕಾವನ್ನು ಕೇಳಿಕೊಂಡಿದೆ.
ಭಾರತದ ಮನವಿಯನ್ನು ಒಪ್ಪಿಕೊಳ್ಳುತ್ತಾ ಅಮೆರಿಕಾ ?
ಈಗಾಗಲೇ ಅಮೆರಿಕಾದಲ್ಲಿ ನಿರುದ್ಯೋಗಿಗಳ ಸಂಖ್ಯೆಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಈಗಾಗಲೇ ಒಂದು ಕೋಟಿ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಅಥವಾ ಕೆಲಸ ಕಳೆದುಕೊಳ್ಳುವ ಭಾರತೀಯರನ್ನು ಮುಂದಿನ 6 ತಿಂಗಳು ತನ್ನಲ್ಲೇ ಉಳಿಸಿಕೊಳ್ಳಲು ವಿಶ್ವದ ದೊಡ್ಡಣ್ಣ ಒಪ್ಪಿಕೊಳ್ಳುವುದು ಬಹುತೇಕ ಅನುಮಾನ ಮೂಡಿಸಿದೆ. ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು 5 ಲಕ್ಷ ಗಡಿದಾಟಿದ್ದು, ಸೋಂಕು ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದೆ.
ಆದರೆ, ಇತ್ತೀಚೆಗಷ್ಟೇ ತನ್ನ ರಫ್ತು ನಿಯಮವನ್ನು ಸಡಿಲಗೊಳಿಸಿ ಭಾರತವು, ಅಮೆರಿಕಾಕ್ಕೆ ಔಷಧಿಯನ್ನು ಪೂರೈಸಿದೆ. ಈ ಉಪಕಾರವನ್ನು ಮನದಲ್ಲಿಟ್ಟುಕೊಂಡು H1-B ವೀಸಾ ಅವಧಿಯನ್ನು ಅಮೆರಿಕಾ ವಿಸ್ತರಿಸಬಹುದು ಎಂಬುದು ಅಮೆರಿಕಾದಲ್ಲಿರುವ ಭಾರತೀಯರ ಆಕಾಂಕ್ಷೆಯಾಗಿದೆ.


Click it and Unblock the Notifications