ದೇಶದ ಬಹುದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿಯ ನಾಲ್ಕನೇ ತ್ರೈಮಾಸಿಕ ನಿವ್ವಳ ಲಾಭವು 17.72 ಪರ್ಸೆಂಟ್ ಜಿಗಿತ ಕಂಡಿದ್ದು, 6,927.69 ಕೋಟಿ ಲಾಭಗಳಿಸಿದೆ.
2020 ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಹೆಚ್‌ಡಿಎಫ್‌ಸಿ 6,928 ಕೋಟಿ ರುಪಾಯಿ ನಿವ್ವಳ ಲಾಭ ವರದಿ ಮಾಡಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ 5,885 ಕೋಟಿಗಳಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೋಢೀಕರಿಸಿದ ನಿವ್ವಳ ಲಾಭದಲ್ಲಿ, 7,280.22 ಕೋಟಿ ಏರಿಕೆ ಕಂಡಿದ್ದು 15.4 ಪರ್ಸೆಂಟ್ ಜಿಗಿತ ಕಂಡಿದೆ. ಇದು ಒಂದು ವರ್ಷದ ಹಿಂದೆ 6,300.81 ಕೋಟಿಗಿಂತ ಹೆಚ್ಚಾಗಿದೆ. ಇನ್ನು ಒಟ್ಟು ಆದಾಯವು 38,287 ಕೋಟಿ ರುಪಾಯಿ ಏರಿಕೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 33,260.48 ಕೋಟಿಯಷ್ಟಿತ್ತು.
ಆರ್‌ಬಿಐ ನಿರ್ದೇಶನಗಳ ಪ್ರಕಾರ 2019-20ರ ಲಾಭದಿಂದ ಯಾವುದೇ ಡಿವಿಡೆಂಟ್(ಲಾಭಾಂಶ ಪಾವತಿ) ನೀಡುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಕೋರೊನಾವೈರಸ್ ಬಿಕ್ಕಟ್ಟಿನಿಂದ ಉಂಟಾದ ಅನಿಶ್ಚಿತತೆಯ ವಾತಾವರಣದಲ್ಲಿ ಬಂಡವಾಳವನ್ನು ಸಂರಕ್ಷಿಸಲು ಯಾವುದೇ ಬ್ಯಾಂಕುಗಳು ಡಿವಿಡೆಂಟ್ ನೀಡಬೇಡಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ನಿರ್ಬಂಧಿಸಿದೆ.


Click it and Unblock the Notifications