ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಮಾರ್ಚ್ 31ಕ್ಕೆ ಕೊನೆಗೊಂಡ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 18.2ರಷ್ಟು ಆದಾಯದ ಬೆಳವಣಿಗೆಯನ್ನು ಸಾಧಿಸಿದ್ದು, 8,186.5 ಕೋಟಿ ರೂ. ಲಾಭ ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಲಾಭವು 6,927.69 ಕೋಟಿ ರೂಪಾಯಿನಷ್ಟಿತ್ತು.
2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ (ಸಾಲದ ವಸೂಲಿ ಬಡ್ಡಿ) ಹಾಗೂ ಖರ್ಚು ಮಾಡಿದ ಬಡ್ಡಿ(ಠೇವಣಿಗೆ ನೀಡಿದ ಬಡ್ಡಿ) ನಡುವಿನ ವ್ಯತ್ಯಾಸ ಶೇಕಡಾ 12.6 ರಷ್ಟು ಏರಿಕೆ ಕಂಡು 17,120.15 ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 15,204.06 ಕೋಟಿ ರೂ.ಗಳಿಗೆ ಹೋಲಿಸಿದರೆ, ಶೇಕಡಾ 14 ರಷ್ಟು ಬೆಳವಣಿಗೆ ಕಂಡಿದೆ.

ದೇಶೀಯ ಚಿಲ್ಲರೆ ಸಾಲಗಳ ಪ್ರಮಾಣ ಶೇ. 6.7ರಷ್ಟು ಹೆಚ್ಚಾಗಿದ್ದರೆ, ಸಗಟು ಸಾಲಗಳ ಪ್ರಮಾಣ ಶೇ. 21.7ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು ಠೇವಣಿಗಳ ಮೊತ್ತವೂ 13,35,060 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿ ಪ್ರಮಾಣವೂ ಶೇ.16.3ರಷ್ಟು ಏರಿಕೆ ಸಾಧಿಸಿದೆ.
ತ್ರೈಮಾಸಿಕದಲ್ಲಿ ವೆಚ್ಚದಿಂದ ಆದಾಯದ ಅನುಪಾತವು ಶೇ. 37.2 ರಷ್ಟಿದ್ದು, ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಇದು ಶೇಕಡಾ 39ರಷ್ಟಿದೆ ಎಂದು ಬ್ಯಾಂಕ್ ಹೇಳಿದೆ. ಪರಿಶೀಲನೆಯ ತ್ರೈಮಾಸಿಕದಲ್ಲಿ ಪೂರ್ವ-ನಿಬಂಧನೆಯ ನಿರ್ವಹಣಾ ಲಾಭವು 15,532.77 ಕೋಟಿ ರೂ.ಗಳಿಗೆ ವಿಸ್ತರಿಸಿದೆ, ಇದು ಶೇ. 19.9 ರಷ್ಟು ಹೆಚ್ಚಾಗಿದೆ.


Click it and Unblock the Notifications