ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಆದಿತ್ಯ ಪುರಿ ಅವರು ಜುಲೈ 21ರಿಂದ 23ರ ಮಧ್ಯೆ 74.2 ಲಕ್ಷ ಷೇರುಗಳನ್ನು 842.87 ಕೋಟಿ ರುಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಿಂದ ತಿಳಿದುಬಂದಿದೆ. ಆದಿತ್ಯ ಪುರಿ ಅಧಿಕಾರಾವಧಿ ಅಕ್ಟೋಬರ್ ಅಂತ್ಯಕ್ಕೆ ಕೊನೆ ಆಗುತ್ತದೆ.
ಜೂನ್ ತ್ರೈಮಾಸಿಕದ ಅಂತ್ಯಕ್ಕೆ ಪುರಿ ಅವರ ಬಳಿ ಎಚ್ ಡಿಎಫ್ ಸಿ ಬ್ಯಾಂಕ್ ನ 0.14% ಷೇರಿನ ಪಾಲಿತ್ತು. ಈಗಿನ ವ್ಯವಹಾರ ಮುಗಿಯುವುದರೊಂದಿಗೆ 3.76 ಲಕ್ಷ ಷೇರುಗಳು ಅಥವಾ 0.01% ಷೇರಿನ ಪಾಲು ಅವರ ಬಳಿ ಉಳಿದುಕೊಂಡಂತಾಗುತ್ತದೆ.
ಎಚ್ ಡಿಎಫ್ ಸಿ ಬ್ಯಾಂಕ್ ವಕ್ತಾರರು ನೀಡಿದ ಮಾಹಿತಿ ಪ್ರಕಾರ, ಈ ಷೇರುಗಳು ಪುರಿ ಅವರಿಗೆ ಬೇರೆ ಬೇರೆ ಬೆಲೆಯಲ್ಲಿ (ಮುಖ ಬೆಲೆಯಲ್ಲಿ ಅಲ್ಲ) ವಿತರಿಸಲಾಗಿತ್ತು. ಆದ್ದರಿಂದ ಅವರು ಈಗ ಮಾರಾಟದಿಂದ ಪಡೆದ ನಿವ್ವಳ ಮೊತ್ತ 840 ಕೋಟಿ ಅಲ್ಲ. ಆ ಷೇರುಗಳ ಖರೀದಿಗೆ ಆದ ವೆಚ್ಚ, ಆ ವ್ಯವಹಾರಕ್ಕೆ ಬಿದ್ದ ತೆರಿಗೆ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನಲಾಗಿದೆ.
ಆದಿತ್ಯ ಪುರಿ ಉತ್ತರಾಧಿಕಾರಿಗಾಗಿ ಶೋಧ
ಆದಿತ್ಯ ಪುರಿ ಅವರ ಉತ್ತರಾಧಿಕಾರಿಯನ್ನು ಹುಡುಕುವ ಸಲುವಾಗಿ ಶೋಧನಾ ಸಮಿತಿಯನ್ನು ಎಚ್ ಡಿಎಫ್ ಸಿ ಆಡಳಿತ ಮಂಡಳಿ ಕಳೆದ ವರ್ಷ ನವೆಂಬರ್ ನಲ್ಲಿ ರಚಿಸಿತ್ತು. ಅದರಲ್ಲಿ ಸದಸ್ಯರಾಗಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಗೋಪಿನಾಥ್, ಸಂಜೀವ್ ಸಾಚಾರ್, ಎಂ.ಡಿ.ರಂಗನಾಥನ್, ಸಂದೀಪ್ ಪಾರೇಖ್, ಶ್ರೀಕಾಂತ್ ನಾದಮುನಿ, ಕೇಕಿ ಮಿಸ್ತ್ರಿ ಇದ್ದಾರೆ. ಪುರಿ ಸಲಹೆಗಾರರಾಗಿದ್ದರು.
1994ರಿಂದ ಬ್ಯಾಂಕ್ ಕಟ್ಟಿ ಬೆಳೆಸಿದ್ದಾರೆ
ಮುಂದಿನ ವರ್ಷಕ್ಕೆ ಆದಿತ್ಯ ಪುರಿಗೆ 70 ವರ್ಷ ಆಗುತ್ತದೆ. 1994ರಲ್ಲಿ ಬ್ಯಾಂಕ್ ಆರಂಭವಾದ ದಿನದಿಂದ ಅದನ್ನು ಭಾರತದ ಅತ್ಯಂತ ಮೌಲ್ಯಯುತ ಬ್ಯಾಂಕ್ ಎಂದು ಕಟ್ಟಿ ಬೆಳೆಸಿದ್ದರಲ್ಲಿ ಆದಿತ್ಯ ಪುರಿ ಪಾಲಿದೆ. ಜುಲೈ 24ನೇ ತಾರೀಕಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಮಾರುಕಟ್ಟೆ ಬಂಡವಾಳ ಮೌಲ್ಯ 6.14 ಲಕ್ಷ ಕೋಟಿ ರುಪಾಯಿ ಇದೆ.
ಮೂವರ ಹೆಸರು ಆರ್ ಬಿಐಗೆ ಶಿಫಾರಸು
ಪುರಿ ಉತ್ತರಾಧಿಕಾರಿಯಾಗಿ ಶಶಿಧರ್ ಜಗದೀಶನ್, ಕೈಜಾದ್ ಭರೂಚ (ಇಬ್ಬರೂ ಸದ್ಯಕ್ಕೆ ಎಚ್ ಡಿಎಫ್ ಸಿ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕರು) ಹಾಗೂ ಸಿಟಿ ಕಮರ್ಷಿಯಲ್ ಬ್ಯಾಂಕ್ ಗ್ಲೋಬಲ್ ಎಕ್ಸ್ ಕ್ಯೂಟಿವ್ ಆಫೀಸರ್ ಆಗಿರುವ ಸುನೀಲ್ ಗರ್ಗ್ ಈ ಮೂವರ ಹೆಸರನ್ನು ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಶಿಫಾರಸು ಮಾಡಲಾಗಿದೆ.


Click it and Unblock the Notifications