ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದ್ದು, ಪ್ರಸ್ತುತ ಪ್ರಕ್ರಿಯೆ ಎಂದು ಕೊನೆಯಾಗಲಿದೆ ಎಂಬ ಬಗ್ಗೆ ಸುದ್ದಿಯಾಗುತ್ತಿದೆ. ಪ್ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳು ಆದ ಬಳಿಕ ಸಂಸ್ಥೆಗಳು ಪ್ರಕ್ರಿಯೆ ಪೂರ್ಣವಾಗಲು 8-10 ತಿಂಗಳು ಬೇಕಾಗುತ್ತದೆ ಎಂದು ನವೆಂಬರ್ ಅಂತ್ಯದಲ್ಲಿ ಹೇಳಿಕೊಂಡಿದೆ. ಈಗ ಲಭ್ಯವಾದ ಮಾಹಿತಿ ಪ್ರಕಾರ ಜುಲೈ ವೇಳೆಗೆ ಪ್ರಕ್ರಿಯೆ ಕೊನೆಯಾಗಲಿದೆ.
ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿ ಶ್ರೀನಿವಾಸನ್ ವೈದ್ಯನಾಥನ್ ಪ್ರಕಾರ, ಎಚ್‌ಡಿಎಫ್‌ಸಿ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಯು 2023ರ ಜುಲೈ ವೇಳೆಗೆ ಕೊನೆಯಾಗಲಿದೆ. ಸಾಮಾನ್ಯವಾಗಿ ಯಾವುದೇ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಗೆ ಹಲವಾರು ಉನ್ನತ ಸಂಸ್ಥೆಗಳ ಅನುಮೋದನೆ ಮುಖ್ಯವಾಗಿದೆ. ಅದರಂತೆ ಉನ್ನತ ಸಂಸ್ಥೆಗಳ ಅನುಮೋದನೆಯನ್ನು ಪಡೆಯುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಅನುಮೋದನೆಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಈಗಾಗಲೇ ಮನವಿಯನ್ನು ಸಲ್ಲಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ನಾಲ್ಕನೇ ತ್ರೈಮಾಸಿಕದ (ಜನವರಿ-ಮಾರ್ಚ್ 2023) ವರದಿಯನ್ನು ಪ್ರಕಟ ಮಾಡಿದ ಬಳಿಕ ಈ ವಿಲೀನಕ್ಕೆ ಸಂಬಂಧಿಸಿ ಕೆಲವೊಂದು ಬದಲಾವಣೆಗಳು ಆದ ಕಾರಣದಿಂದಾಗಿ ಈಗ ಐಆರ್‌ಡಿಎಐ ಅನುಮೋದನೆಗೆ ಮನವಿ ಮಾಡಲಾಗಿದೆ ಎಂದು ವೈದ್ಯನಾಥನ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಅನುಮೋದನೆ ನೀಡಿರುವ ಹಣಕಾಸು ಸಂಸ್ಥೆಗಳು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಪೆನ್ಶನ್ ಫಂಡ್ ರೆಗ್ಯೂಲಟರಿ ಆಂಡ್ ಡೆವಲಪ್‌ಮೆಂಡ್ ಅಥಾರಿಟಿ (ಪಿಎಫ್‌ಆರ್‌ಡಿಎ) , ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಸ್ಪರ್ಧಾತ್ಪಕ ಆಯೋಗ, ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ), ಭಾರತೀಯ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್), ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಈಗಾಗಲೇ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನಕ್ಕೆ ಅನುಮೋದನೆಯನ್ನು ನೀಡಿದೆ.
"ಪ್ರೋಮೋಟರ್‌ಗಳ ಬದಲಾವಣೆಗಾಗಿ ಮತ್ತು ಮ್ಯೂಚುವಲ್ ಫಂಡ್‌ಗಳಿಗೆ ಆದೇಶಗಳನ್ನು ಸೂಚಿಸಲು ಅನುಮತಿ ಪಡೆಯುವ ನಿಟ್ಟಿನಲ್ಲಿ ನಾವು ಈಗಾಗಲೇ ಸೆಬಿಗೆ ಅರ್ಜಿ ಸಲ್ಲಿಸಿದ್ದೇವೆ. ಇನ್ನು ವಿಮಾ ಭಾಗದಲ್ಲಿ ಪ್ರೋಮೋಟರ್‌ಗಳ ಬದಲಾವಣೆಯಿಂದಾಗಿ ನಾವೀಗ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು (ಐಆರ್‌ಡಿಎಐ) ಸಂಪರ್ಕಿಸಿದ್ದೇವೆ. ಪ್ರಸ್ತುತ ಐಆರ್‌ಡಿಎಐ ಅನುಮೋದನೆಗಾಗಿ ಕಾಯುತ್ತಿದ್ದೇವೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಹಣಕಾಸು ಅಧಿಕಾರಿ ಶ್ರೀನಿವಾಸನ್ ವೈದ್ಯನಾಥನ್ ಹೇಳಿದ್ದಾರೆ.
ವಿಲೀನದ ಬಗ್ಗೆ ಅಧಿಕ ಮಾಹಿತಿ
ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದಿಂದಾಗಿ ಅತೀ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ಈ ವಿಲೀನದ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗೂ ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.
40 ಬಿಲಿಯನ್ ಡಾಲರ್ ಮೌಲ್ಯದ ವಿಲೀನ ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆ ಏಪ್ರಿಲ್ 4, 2022ರಂದು ಆರಂಭವಾಗಿದೆ. ಆ ಸಂದರ್ಭದಲ್ಲಿ ಉಭಯ ಸಂಸ್ಥೆಗಳು ಈ ಪ್ರಕ್ರಿಯೆ ಪೂರ್ಣವಾಗಲು ಸುಮಾರು 12ರಿಂದ 18 ತಿಂಗಳುಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿತ್ತು. ಆದರೆ ರಕ್ರಿಯೆ ಆರಂಭವಾಗಿ ಸುಮಾರು 7-8 ತಿಂಗಳುಗಳ ಬಳಿಕ ಇನ್ನೂ 8-10 ತಿಂಗಳು ಬೇಕಾಗುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಬ್ಯಾಂಕ್‌ನ ಅಧಿಕಾರಿಗಳ ಮಾಹಿತಿ ಪ್ರಕಾರ ಜುಲೈನಲ್ಲಿ ಪ್ರಕ್ರಿಯೆ ಕೊನೆಯಾಗಲಿದೆ.


Click it and Unblock the Notifications