ಕಳೆದ ಕೆಲವು ದಿನಗಳಿಂದ ಬಿಸಿ ಬಿಸಿ ಇದ್ದ ಕರ್ನಾಟಕ (Karnataka), ಸದ್ಯ ಚಳಿಯಿಂದ ಗಢ ಗಢ ನಡುಗುತ್ತಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿಯಲ್ಲೇ ಜನ ಜೀವನ ನಡೆಸುತ್ತಿದ್ದಾರೆ. ಕೆಲವರಂತೂ ಯಪ್ಪಾ, ಯಾವಾಗ ಕಡಿಮೆಯಾಗುತ್ತೆ ಈ ಚಳಿ (Cold) ಎಂಬಂತಹ ದಿನಂಪ್ರತಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಇದಕ್ಕೆಲ್ಲಾ ಕಾರಣ ವಿಪರೀತ ಚಳಿ. ದಿನನಿತ್ಯ ಮಳೆ ಅಲರ್ಟ್ ನೀಡುತ್ತಿದ್ದ ಹವಾಮಾನ ಇಲಾಖೆ (IMD) ಕೂಡಾ ಬದಲಾಗಿದೆ. ಇದೀಗ ಚಳಿ ಅಲರ್ಟ್ ನೀಡುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ಸೂಚನೆ ಹೊರಡಿಸಿದೆ.

ಕರ್ನಾಟಕದಲ್ಲಿ ಕುಸಿತ ಕಂಡ ತಾಪಮಾನ!
ಹೌದು, ಇದೀಗ ಹವಾಮಾನ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ ಇತ್ತೀಚೆಗೆ ತಾಪಮಾನ ಗಣನೀಯವಾಗಿ ಕುಸಿದಿದೆ. ಇತ್ತೀಚೆಗೆ ರಾಜ್ಯದಲ್ಲಿ ಉಂಟಾದ ಶೀತ ಅಲೆಯ ಪರಿಣಾಮ ಈ ಬದಲಾವಣೆಗೆ ಕಾರಣವಾಗಿದೆ. ಅಲ್ಲದೇ, ಮುಂದಿನ ಕೆಲವು ದಿನಗಳಲ್ಲಿ ಚಳಿ, ಮಂಜು, ಶೀತ ಅಲೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದೀಗ ಇಂದೂ ಕೂಡಾ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಹೊರಡಿಸಿದೆ.
ಎಲ್ಲೆಲ್ಲಿ ತಾಪಮಾನ ಇಳಿಕೆ?
ರಾಜ್ಯದ ಕಲ್ಯಾಣ ಕರ್ನಾಟಕದ ಕೆಲವು ಕಡೆಗಳಲ್ಲಿ 7 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇಳಿಕೆಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಇನ್ನೆರಡು ದಿನವೂ ಇದೇ ರೀತಿಯ ಚಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ವಿಶೇಷವಾಗಿ ಬೀದರ್ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ. ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲೂ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ.
ಈ ಜಿಲ್ಲೆಗಳಿಗೆ ಅಲರ್ಟ್!
ಕಳೆದ ಭಾನುವಾರ (ಡಿ.21) ವಿಜಯಪುರದಲ್ಲಿ ಬರೀ 6.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ ಇದು ಕಳೆದ 20 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಉಷ್ಣಾಂಶವಾಗಿದೆ. ಇನ್ನು ತಾಪಮಾನ ಕುಸಿತದ ಬಗ್ಗೆ ಡಿಸೆಂಬರ್ 22 ರಂದು 5 ಕಡೆ ಯೆಲ್ಲೋ ಅಲರ್ಟ್ ನೀಡಲಾಗಿತ್ತು. ಆದ್ರೆ ಇಂದು ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರಿನ ಪರಿಸ್ಥಿತಿ ಹೇಗಿದೆ?
ಇನ್ನು ಬೆಂಗಳೂರಂತೂ ಬೆಳಿಗ್ಗೆ ಕಾಣೋದೆ ಇಲ್ಲಂಬಂತಾಗಿದೆ. ಅಕ್ಷರಶಃ ಮಂಜಿನಿಂದ ಆವೃತವಾಗಿರುತ್ತೆ. ಕೆಲವು ದಿನಗಳಿಂದ ಬೆಂಗಳೂರಿನ ಹವಾಮಾನದಲ್ಲೂ ಏರುಪೇರಾಗುತ್ತಿದೆ. ಚಳಿ ಹೆಚ್ಚಾಗುತ್ತಿದ್ದು, ತಾಪಮಾನದಲ್ಲೂ ಇಳಿಕೆ ಕಂಡುಬರುತ್ತಿದೆ. ಇದೀಗ ಇಂದೂ ಕೂಡಾ ಬೆಂಗಳೂರಿನ ಬಹುತೇಕ ನಗರಗಳು ಮಂಜಿನಿಂದ ಆವೃತವಾಗಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನರು ಬೆಚ್ಚನೆಯ ಉಡುಪು, ಉತ್ತಮ ಆಹಾರ ಸೇವನೆಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ. ಇನ್ನು ಬೆಂಗಳೂರಿನ ತಾಪಮಾನ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಕೆಲವು ಜಿಲ್ಲೆಗಳಲ್ಲಿ ಶೀತಗಾಳಿಯ ಅಬ್ಬರ ಹೆಚ್ಚಾಗಲಿದ್ದು, ಈ ಪ್ರಭಾವದಿಂದ ಚಳಿಯೂ ಹೆಚ್ಚಾಗಲಿದೆ. ಆದ್ದರಿಂದ ಜನರೂ ಕೂಡಾ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.


Click it and Unblock the Notifications