ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗ್ತಿಲ್ಲ, ಇದರ ಜೊತೆಗೆ ಫೆಂಗಲ್ ಚಂಡಮಾರುತಸದ ಅಬ್ಬರ ಕೂಡ ಹೆಚ್ಚಾದ ಹಿನ್ನೆಲೆ ಅದರ ಕಾವು ಕರ್ನಾಟಕಕ್ಕೂ ತಗುಲಿದೆ. ಇನ್ನು ರಾಜ್ಯದ ಕೆಲವು ಪ್ರದೇಶಗಳು ಈಗಾಗಲೇ ಮಳೆಯಿಂದ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಜನ ಪರದಾಡುವಂತಾಗಿದೆ. ಜೊತೆಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಕೂಡ ಮಳೆ ಅಡ್ಡಿ ಮಾಡ್ತಿದೆ.
ಹೀಗಾಗಿ ಸರ್ಕಾರ ವಿದ್ಯಾರ್ಥಿಗಳ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲು ನಿರ್ಧರಿಸಿದೆ. ಆದ್ರೆ ಬೆಂಗಳೂರಿನಲ್ಲಿ ಪೋಷಕರು ವಿದ್ಯಾರ್ಥಿಗಳಿಗಾಗಿ ರಜೆ ನೀಡುವಂತೆ ಬೇಡಿಕೆ ಇಟ್ಟರು ಕೂಡ ಜಿಲ್ಲಾಧಿಕಾರಿಗಳು ಡೆಸೆಂಬರ್ 3ರಂದು ಬೆಂಗಳೂರಿನಲ್ಲಿ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.

ಆದ್ರೂ ಕೂಡ ನಿರಂತರ ಮಳೆ ಹಿನ್ನೆಲೆ ಕರ್ನಾಟಕದ ಈ ಐದು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ಹೌದು ಮಂಡ್ಯ, ಮೈಸೂರು, ಕೋಲಾರ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಮಳೆ ಅವಾಂತರ ಹೆಚ್ಚಾದ ಹಿನ್ನೆಲೆ, ಅಲ್ಲಿರುವ ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆ (IMD) ಸಹ ಈ ಭಾಗಗಳಲ್ಲಿ ಹೆಚ್ಚಿನ ಮಳೆ ಆಗಲಿದೆ ಎಂದು ಮುನ್ಸೂಚನೆಯನ್ನ ನೀಡಿದ್ದು, ಹೀಗಾಗಿ ಈ ಪ್ರದೇಶಗಳಲ್ಲಿನ ಜಿಲ್ಲಾ ಅಧಿಕಾರಿಗಳನ್ನು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಮಂಡ್ಯದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಗೆ ಹಿನ್ನೆಲೆ ಜಿಲ್ಲಾಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸಿ ಪಿಯು ಹಂತದ ವರೆಗಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಲ್ಲದೆ ಈವಾರದ ಅಂತ್ಯದೊಳಗೆ ಮಳೆ ಕಡಿಮೆಯಾದ್ರೆ ಶನಿವಾರ ಇಡೀ ದಿನ ತರಗತಿಗಳನ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ಹೇಳಿದ್ದಾರೆ.
ರಾಜ್ಯದ ಈ ಪ್ರಮುಖ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ ಹಿನ್ನೆಲೆ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ಮಳೆ ಅಬ್ಬರಕ್ಕೆ ರಸ್ತೆಗಳೆಲ್ಲಾ ಸಂಪೂರ್ಣ ಹಾನಿಯಾಗಿದ್ದು, ಸಾರಿಗೆ ಅಡಚಣೆ ಉಂಟಾಗಿದೆ. ಜೊತೆಗೆ ಮಳೆಯಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪರದಾಡಬೇಕಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ಈ ನಿರ್ಧಾರವನ್ನ ಪೋಷಕರು ಸ್ವಾಗತ ಮಾಡಿದ್ದಾರೆ.
ಆದರೆ ಇತ್ತ ಉದ್ಯಾನನಗರಿ ಬೆಂಗಳೂರಿನಲ್ಲೂ ಮಳೆ ಅವಾಂತರ ಹೆಚ್ಚಾಗಿದ್ದು, ಇದೇ ರೀತಿಯ ಯಾವುದೇ ರಜೆ ಘೋಷಣೆ ಇಲ್ಲದಿದ್ದರೂ ಕೂಡ ಪೋಷಕರು ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿದಂತೆ ಬೆಂಗಳೂರಿನಲ್ಲಿರುವ ಅಧಿಕಾರಿಗಳು ಶಾಲಾ- ಕಾಲೇಜಿಗಳಿಗೆ ರಜೆ ಘೋಷಣೆ ಮಾಡುವ ಯಾವುದೇ ಚರ್ಚೆಗಳು ನಡೆದಿಲ್ಲ ಎನ್ನುವುದು ತಿಳಿದುಬಂದಿದೆ. ಹಾಗೆ ನಗರದಲ್ಲಿ ಹವಾಮಾನ ಪರಿಸ್ಥಿತಿ ತಿಳಿಯಾಗಿರುವ ವರೆಗೂ ನಗರದ ಶಾಲೆಗಳು ನಡೆಲಿವೆ ಎಂದು ಶಿಕ್ಷಣ ಸಚಿವರು ಒತ್ತಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿಗಳು, ಈ ಹವಮಾನ ಪರಿಸ್ಥಿತಿಯನ್ನ ನಾವು ಸೂಕ್ಷ್ಮವಾಗಿ ಗಮನಹರಿಸಿದ್ದೇವೆ. ಇದೇನಾದ್ರೂ ಬದಲಾದರೆ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ನಾವು ಹೆಚ್ಚಿನ ಕ್ರಮ ವಹಿಸುತ್ತೇವೆ ಎಂದು ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಾಗಲೇ ಮಳೆ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆ ಬಸ್, ಆಟೋ, ಬೈಕ್‌ಗಳ ಮೇಲೆ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಆತಂಕ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ರಜೆ ನೀಡುವಂತೆ ಒತ್ತಾಯಿಸಿದ್ದಾರೆ.ಅಲ್ಲದೆ ರಜೆಯನ್ನು ಘೋಷಿಸುವಲ್ಲಿನ ವಿಳಂಬವು ಕೂಡ ಮಕ್ಕಳನ್ನು ಅನಗತ್ಯ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕೆಲವರು ವಾದಿಸಿದ್ದಾರೆ, ಅಲ್ಲದೆ ನಿರಂತರ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದ ನಂತರ ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಬೇಡಿಕೆಗಳು ಹೆಚ್ಚುತ್ತಿದ್ದು, ಈ ಹೊರತಾಗಿಯೂ ಕೂಡ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆಗಾಗ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಬಿದ್ದರೆ ಹವಾಮಾನದ ಆಧಾರದ ಮೇಲೆ ರಜೆ ಘೋಷಣೆ ಮಾಡುವಂತಹ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸದ್ಯ ಸರ್ಕಾರ ಈಗ ಭಾರಿ ಮಳೆಯಾಗುತ್ತಿರುವ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನ ಶಾಲೆ ಕಾಲೇಜುಗಳ ಬಗ್ಗೆ ಸಧ್ಯಕ್ಕೆ ಯಾವುದೆ ಚರ್ಚೆಯಾಗಿಲ್ಲ ಎನ್ನುವುದು ತಿಳಿದುಬಂದಿದೆ. ಆದ್ರೆ ಮುಂದಿನ ದಿನಗಳಲ್ಲಿ ಮಳೆ ಅಬ್ಬರ ಹೆಚ್ಚಾದ್ರೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಂಗಲ್ ಚಂಡಮಾರುತದ ಅಬ್ಬರ ಕರ್ನಾಟಕಕ್ಕೂ ತಾಗಿದ್ದು, ಮಳೆಯ ಅಬ್ಬರ ಇನ್ನು ಕೆಲವು ದಿನಗಳ ವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ ಮಳೆಯಲ್ಲಿ ವಿದ್ಯಾರ್ಥಿಗಳನ್ನ ಶಾಲೆಗೆ ಹೇಗೆ ಕಳಿಸುವುದು ಎಂದು ಬೆಂಗಳೂರಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications