ರಾಜ್ಯದಲ್ಲಿ ಚಳಿಗಾಲದ ಆಗಮನವಾಗಿದೆ. ಆದರೆ ವರುಣಾರ್ಭಟ ಮಾತ್ರ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ. ಅತ್ತ ಹವಾಮಾನ ಇಲಾಖೆ ಕೂಡಾ ಮಳೆ ಮುನ್ಸೂಚನೆ ನೀಡುತ್ತಲೇ ಇದೆ (Rain Alert). ಕಳೆದೆರಡು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿಲ್ಲ. ಬೆಂಗಳೂರಿನಲ್ಲಿ ಮಳೆರಾಯ ಸ್ವಲ್ಪ ದಿನಗಳಿಂದ ಬಿಡುವು ಕೊಟ್ಟಿದ್ದು, ಸದ್ಯ ಬಿಸಿಲು ಕಾಣಿಸಿಕೊಂಡಿದೆ. ಆದ್ರೆ ಇದೀಗ ಹವಾಮಾನ ಇಲಾಖೆ (IMD) ರಾಜ್ಯದ 12 ಜಿಲ್ಲೆಗಳಿಗೆ ಮಳೆ ಅಲರ್ಟ್ ನೀಡಿದೆ.

ಮಳೆ ಎಚ್ಚರಿಕೆ:
ಭಾರತೀಯ ಹವಾಮಾನ ಇಲಾಖೆ (IMD) ಇದೀಗ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಅದರಲ್ಲೂ ಕರ್ನಾಟಕ ಹನ್ನೆರಡು ಜಿಲ್ಲೆಗಳಿಗೆ ಮಳೆ ಬರುವ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಲ್ಲಿ ಮಳೆಯೋ ಮಳೆ!
ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಗದಗ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಕೊಡಗು, ಹಾವೇರಿ, ಧಾರವಾಡ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮುಂದಿನ ಎರಡರಿಂದ ಮೂರು ದಿನ ಸಾಧಾರಣದಿಂದ ಮಧ್ಯಮದವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇನ್ನು ಕೆಲವು ಜಿಲ್ಲೆಗಳಲ್ಲಿ ಈ ಸಂದರ್ಭದಲ್ಲಿ ತಾಪಮಾನ ಹೆಚ್ಚಾಗಲಿದ್ದು, ಜೊತೆಗೆ ಚಳಿಯ ವಾತಾವರಣ ಆವರಿಸಲಿದೆ ಎಂದು ಹೇಳಲಾಗಿದೆ. ಇನ್ನು ಕರಾವಳಿ ಪ್ರದೇಶಗಳ ಮೀನುಗಾರರು ಇಲಾಖೆಯ ಮಾರ್ಗಸೂಚಿಗಳನ್ನು ನಿರಂತರ ಪಾಲಿಸುತ್ತಿರುವಂತೆ ಸೂಚನೆ ನೀಡಲಾಗಿದೆ.
ಕೇರಳದಲ್ಲೂ ಭಾರೀ ಮಳೆ!
ಇನ್ನು ಶನಿವಾರದಿಂದ ಸೋಮವಾರದವರೆಗೆ ಕೇರಳದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ (ನ.8) ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು. ಇಂದೂ ಕೂಡಾ ಕೇರಳದಲ್ಲಿ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ, ಗಾಳಿ ಮಳೆಯಾಗುವ ಸಾಧ್ಯತೆ ಇದ್ದು, ಇದು ಗಂಟೆಗೆ 40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇರಳದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಸಾರ್ವಜನಿಕರಿಗೆ ಸಲಹೆ:
ಮಳೆ ಹೆಚ್ಚಾಗುವ ಸಂದರ್ಭದಲ್ಲಿ ಜನರು ಮನೆಯಿಂದ ಹೊರಹೋಗದಂತೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದರೆ ಮಾತ್ರ ಹೊರಹೋಗಿ. ಇನ್ನು ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಯಾರಾದರೂ ಟ್ರಾವೆಲ್ ಪ್ಲಾನ್ ಮಾಡುವ ಮುನ್ನ ಆಯಾ ರಾಜ್ಯಗಳ ಹವಾಮಾನ ಪರಿಸ್ಥಿತಿಯನ್ನು ಚೆಕ್ ಮಾಡುವುದು ಒಳ್ಳೆಯದು. ಏಕೆಂದರೆ ಅವಸರದಿಂದ ನಿರ್ಧಾರ ತೆಗೆದುಕೊಂಡರೆ ಅಪಾಯದಲ್ಲಿ ಸಿಲುಕಬಹುದು.


Click it and Unblock the Notifications