ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ (Monsoon) ಹಿಂದೆ ಸರಿಯುತ್ತಿರುವ ಹಿನ್ನೆಲೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಕಳೆದೆರಡು ದಿನಗಳಿಂದ ಹವಾಮಾನ ಇಲಾಖೆ ಕೂಡಾ ಮಳೆ ಅಲರ್ಟ್ ಘೋಷಿಸುತ್ತಲೇ ಇದೆ. ಇದೀಗ ಇಂದೂ (ಅ.18) ಕೂಡಾ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಈ ಜಿಲ್ಲೆಗಳಿಗೆ ಮಳೆ ಅಲರ್ಟ್
ಇನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ನಿರೀಕ್ಷೆಗೂ ಮೀರಿದ ಗುಡುಗು ಸಹಿತ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಇನ್ನು ಮಂಗಳೂರಿಗೆ ಹೋಲಿಸಿದ್ರೆ ಕುಂದಾಪುರ ಮತ್ತು ಕಾರ್ಕಳದಲ್ಲಿ ವರುಣಾರ್ಭಟ ಜೋರಾಗಿರಲಿದೆ. ಈ ದಿನಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಖಡಕ್ ಸೂಚನೆಯನ್ನೂ ನೀಡಲಾಗಿದೆ.
ಅದೇ ರೀತಿ ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದ್ದು, ಮಂಡ್ಯ, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲೂ ಭಾರೀ ಮಳೆ ನಿರೀಕ್ಷೆಯಿದ್ದು, ಬೆಳಗಾವಿ, ಬೀದರ್, ಬಾಗಲಕೋಟೆ, ಹಾವೇರಿ, ಗದಗ, ವಿಜಯಪುರ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ.
ಅಕ್ಟೋಬರ್ 19ರ ಮಳೆ ಅಲರ್ಟ್:
ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 19 ರಂದು ಸಾಧಾರಣದಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಧ್ಯಮದಿಂದ ಭಾರೀ ಮಳೆಯಾಗಬಹುದು ಎನ್ನಲಾಗಿದೆ.
ಪ್ರಯಾಣಿಕರಿಗೆ ಸಲಹೆ: ಬೆಂಗಳೂರಿನಂತಹ ನಗರಗಳಲ್ಲಿ ಮಳೆ ಇದ್ದರೂ, ಇರದಿದ್ದರು ಟ್ರಾಫಿಕ್ ಸಮಸ್ಯೆ ಅನ್ನೋದು ಸಾಮಾನ್ಯ. ಆದ್ರೆ ಮಳೆ ಬಂದ್ರೆ ಸಾಕು ಟ್ರಾಫಿಕ್ ಸಮಸ್ಯೆ ಮತ್ತೆ ಹೆಚ್ಚಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮಳೆ ಅಲರ್ಟ್ ಇರುವ ದಿನಗಳಲ್ಲಿ ಆದಷ್ಟು ಬೇಗ ಹೊರಡಿದರೆ ಉತ್ತಮ ಎಂದು ಸಲಹೆ ನೀಡಿದೆ. ಅಲ್ಲದೇ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುವುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಎಂದು ಹೇಳಿದೆ. ಎಲ್ಲಾದರೂ ಟ್ರಿಪ್ ಅಥವಾ ಊರಿಗೆ ಹೋಗೋ ಪ್ಲಾನ್ ಮಾಡಿದ್ದರೆ ಹವಾಮಾನ ಮುನ್ಸೂಚನೆ ನೋಡಿಕೊಂಡು ಪ್ಲಾನ್ ಮಾಡಿ. ಇಲ್ಲದಿದ್ರೆ ಆಪತ್ತಿಗೆ ಸಿಲುಕಿಕೊಳ್ಳಬಹುದು.


Click it and Unblock the Notifications