ಈ ಬಾರಿ ಮಳೆ ಪ್ರಮಾಣ ನಿರೀಕ್ಷೆಗೂ ಮೀರಿಯೇ ಇದೆ. ಆದ್ರೆ ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇದೀಗ ಮತ್ತೆ ಮಳೆ ಬರುವ ಸಾಧ್ಯತೆ ಇದೆ. ದೇಶದೆಲ್ಲೆಡೆ ಚಳಿಗಾಲ (Winter Season) ಆರಂಭವಾಗಿದೆ. ಇದರ ನಡುವೆಯೂ ವರುಣಾರ್ಭಟ ಶುರುವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವಾರವಿಡೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮೊದಲೇ ವರದಿ ನೀಡಿತ್ತು. ಅದರಂತೆ ಮಂಗಳೂರಿನಲ್ಲಿ ಈಗಾಗಲೇ ಮಳೆ ಬಿದ್ದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ.

ಹವಾಮಾನ ಇಲಾಖೆಯ ಸೂಚನೆ ಪ್ರಕಾರ, ಇಂದೂ (ನ.24) ಕೂಡಾ ಕರ್ನಾಟಕದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಹಾಗಿದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಲ್ಲೆಲ್ಲಾ ಮಳೆ ಫಿಕ್ಸ್!
ನವೆಂಬರ್ 24, ಸೋಮವಾರ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಣ್ಣದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಗಾಳಿಯ ಒತ್ತಡದ ಪರಿಣಾಮ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಸೂಚನೆ ನೀಡಲಾಗಿದೆ. ವರದಿ ಪ್ರಕಾರ, ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಅದೇ ರೀತಿ ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಕೊಡಗು, ವಿಜಯನಗರ, ಚಾಮರಾಜನಗರ, ಕೋಲಾರ, ಮೈಸೂರು, ಶಿವಮೊಗ್ಗ, ಹಾಸನ ತುಮಕೂರು ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.
ಉತ್ತರ ಒಳನಾಡು ಜಿಲ್ಲೆಗಳಲ್ಲೂ ಮಳೆಯಾಗಲಿದ್ದು, ಬೇರೆ ಜಿಲ್ಲೆಗಳಿಗೆ ಹೋಲಿಸಿದ್ರೆ ಮಳೆ ಪ್ರಮಾಣ ಕಡಿಮೆ ಎಂದು ವರದಿಯಾಗಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ, ದಾವಣಗೆರೆ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ, ಹೆಚ್ಚಾಗಿ ಒಣ ಹವೆ ಇರಲಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಹವಾಮಾನ ಪರಿಸ್ಥಿತಿ
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸಂಜೆ ವೇಳೆಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಅದೇ ರೀತಿ ಇಂದೂ ಕೂಡಾ ಮೋಡ ಕವಿದ ವಾತಾವರಣ ಇರಲಿದೆ. ಇನ್ನು ಗರಿಷ್ಠ ತಾಪಮಾನ 27.4 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮಳೆ ಪ್ರಮಾಣ ಈ ಬಾರಿ ಸ್ವಲ್ಪ ಜಾಸ್ತಿಯೇ ಇರುವ ಕಾರಣ ಟ್ರಾವೆಲ್ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಕರ್ನಾಟಕ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ಹೊರಡಿಸಿದೆ.


Click it and Unblock the Notifications