ಬೆಂಗಳೂರಿಗರೇ ಇಲ್ಲಿ ಗಮನಿಸಿ. ಮೊದಲೇ ಟ್ರಾಫಿಕ್ ಸಮಸ್ಯೆಯಿಂದಾಗಿ (Traffic Problems) ಬೆಂಗಳೂರಿಗರು ಸುಸ್ತಾಗಿ ಹೋಗಿದ್ದಾರೆ. ಇದೀಗ ಇಂದು (ನ.19) ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ ಸುವರ್ಣ ಮಹೋತ್ಸವವನ್ನು ಅರಮನೆ ಮೈದಾನದ ಕೃಷ್ಣ ವಿಹಾರ ಗೇಟ್ ನಂರ್ 1 ರಲ್ಲಿ ಆಚರಿಸುತ್ತಿರುವ ಹಿನ್ನೆಲೆ ಈ ನಿರ್ಬಂಧಕ್ಕೆ ಮುಂದಾಗಿದೆ. ಈ ಪರಿಣಾಮ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಕೋರಲಾಗಿದೆ.

ಸುವರ್ಣ ಮಹೋತ್ಸವದ ಆಚರಣೆ ಈಗಾಗಲೇ ಆರಂಭವಾಗಿದ್ದು, ಸಂಜೆ 4:00 ರವರೆಗೆ ನಡೆಯಲಿದೆ. ಈ ಸುವರ್ಣ ಮಹೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಗಣ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸುಗಮ ಸಂಚಾರಕ್ಕೆ ಹೊಸ ಪರಿಹಾರ!
ಬೆಂಗಳೂರು ಸಂಚಾರ ಪೊಲೀಸರ ಪ್ರಕಾರ, ಸುಮಾರು 2,300 ಕ್ಕೂ ಅಧಿಕ ವಾಹನಗಳು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಇದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದು ಸಾಮಾನ್ಯ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
ನವೆಂಬರ್ 19 ರಂದು ಸಂಚಾರ ದಟ್ಟಣೆಯನ್ನು ಎದುರಿಸುವ ಮಾರ್ಗಗಳ ವಿವರ:
ಕೃಷ್ಣ ವಿಹಾರ ಗೇಟ್ (ಅರಮನೆ ಮೈದಾನ), ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ, ಮತ್ತು ಜಯಮಹಲ್ ರಸ್ತೆ.
ನವೆಂಬರ್ 19 ರಂದು ಪರ್ಯಾಯ ಮಾರ್ಗಗಳ ವಿವರ:
1. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಬಳ್ಳಾರಿ ರಸ್ತೆಯಲ್ಲಿ ಹೋಗದೆ, ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ, ನಾಗವಾರ ಮಾರ್ಗವಾಗಿ ಏರ್‌ಪೋರ್ಟ್‌ಗೆ ಹೋಗಬಹುದು
2. ವಿಮಾನ ನಿಲ್ದಾಣದಿಂದ ನಗರ ಕೇಂದ್ರಕ್ಕೆ ಬರುವವರು ಎರಡು ಮಾರ್ಗಗಳನ್ನು ಬಳಸಬಹುದು. ಮೊದಲ ಮಾರ್ಗ: ಹೆಬ್ಬಾಳದಲ್ಲಿ ಎಡ ತಿರುವು, ನಾಗವಾರ ಜಂಕ್ಷನ್‌ನಲ್ಲಿ ಬಲ ತಿರುವು, ಬ್ಯಾಂಬೂ ಬಜಾರ್, ಕ್ವೀನ್ಸ್ ರಸ್ತೆ.
ಎರಡನೇ ಮಾರ್ಗ: ಹೆಬ್ಬಾಳ ರಿಂಗ್ ರೋಡ್, ಕುವೆಂಪು ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್- ಎಡ ತಿರುವು, ಡಾ. ರಾಜ್‌ಕುಮಾರ್ ರಸ್ತೆ.
3. ಯಶವಂತಪುರದಿಂದ ಏರ್‌ಪೋರ್ಟ್‌ಗೆ ಹೋಗುವವರು, ಮತ್ತಿಕೆರೆ ರಸ್ತೆ, ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಿ, ರಿಂಗ್ ರಸ್ತೆ ಮೂಲಕ ವಿಮಾನ ನಿಲ್ದಾಣ ಪ್ರಯಾಣ ಮಾಡಬಹುದು.
4. ಯಶವಂತಪುರದಿಂದ ಬೆಂಗಳೂರು ನಗರಕ್ಕೆ ಹೋಗುವವರು, ಡಾ. ರಾಜ್‌ಕುಮಾರ್ ರಸ್ತೆ ಮೂಲಕ ಬೆಂಗಳೂರು ನಗರಕ್ಕೆ ಹೋಗಬಹುದು.
ಭಾರಿ ವಾಹನಗಳಿಗೆ ನೋ ಎಂಟ್ರಿ!
1. ಹೆಬ್ಬಾಳ ಜಂಕ್ಷನ್: ಹೆಬ್ಬಾಳ ಜಂಕ್ಷನ್‌ನಿಂದ ಬಳ್ಳಾರಿ ರಸ್ತೆಯ ಕಡೆಗೆ ಹೋಗುವ ಭಾರೀ ವಾಹನಗಳಿಗೆ ಅವಕಾಶವಿರುವುದಿಲ್ಲ. ಅವುಗಳು ಔಟರ್ ರಿಂಗ್ ರೋಡ್ ರಸ್ತೆಗಳನ್ನು ಪರ್ಯಾಯವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ.
2. ಓಲ್ಡ್ ಹೈ ಗ್ರೌಂಡ್ಸ್ ಪೊಲೀಸ್ ಠಾಣಾ ಜಂಕ್ಷನ್: ಹೈ ಗ್ರೌಂಡ್ಸ್‌ನಿಂದ ಬರುವ ಭಾರೀ ಗಾತ್ರದ ವಾಹನಗಳನ್ನು ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಟ್ಯಾನರಿ ರಸ್ತೆ, ನಾಗವಾರದ ಕಡೆಗೆ ತಿರುಗಿಸಲಾಗುತ್ತದೆ.
3. ಯಶವಂತಪುರ: ಸಿ.ವಿ. ರಾಮನ್ ರಸ್ತೆಯ ಕಡೆಗೆ ಹೋಗುವ ಭಾರೀ ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ನವೆಂಬರ್ 19 ರಂದು ಇಲ್ಲೆಲ್ಲಾ ನೋ ಪಾರ್ಕಿಂಗ್:
ಅರಮನೆ ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ. ರಾಮನ್ ರಸ್ತೆ, ಜಯಮಹಲ್ ರಸ್ತೆ ಮತ್ತು ಗುಟ್ಟಹಳ್ಳಿ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.


Click it and Unblock the Notifications