ಎಲ್ಲೋ ಮಾರ್ಗದಲ್ಲಿರುವ ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ ಬಯೋಫಾರ್ಮಾಸ್ಯುಟಿಕಲ್ ಕಂಪನಿ ಬಯೋಕಾನ್ ಹೆಸರಿಡಲಾಗಿದೆ. ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಈ ಹೆಸರು ಬದಲಾವಣೆ ಮಾಡುವುದನ್ನು ಹೆಬ್ಬಗೋಡಿ ನಿವಾಸಿಗಳು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಿಎಂಆರ್‌ಸಿಎಲ್ ಸ್ಪಷ್ಟಣೆ ನೀಡಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮುಂದಿನ ಮೂರು ನಾಲ್ಕು ತಿಂಗಳಿನಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಆರಂಭ ಮಾಡಲಿದೆ. ಈ ನಡುವೆ ಬಯೋಕಾನ್ ಕಂಪನಿಯ ಹೆಸರನ್ನು ಈ ಮೆಟ್ರೋ ನಿಲ್ದಾಣಕ್ಕೆ ಇಡಲಾಗಿದೆ.

ಬಯೋಕಾನ್ ಕಂಪನಿಯು ಹೆಬ್ಬಗೋಡಿ ಮೆಟ್ರೋ ನಿಲ್ದಾಣಕ್ಕೆ 65 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಈ ಒಪ್ಪಂದದ ಆಧಾರದಲ್ಲಿ 'ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್' ಎಂದು ನಾಮಕರಣ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸ್ಪಷ್ಟಪಡಿಸಿದ್ದಾರೆ.
"ಒಪ್ಪಂದದ ಪ್ರಕಾರವಾಗಿ ಈ ಹೆಸರನ್ನು ಇಡಲಾಗುತ್ತಿದೆ. ಈಗ ಯೋಕಾನ್ ಮಾತ್ರವಲ್ಲಇನ್ಫೋಸಿಸ್, ಎಂಬೆಸಿ ಸೇರಿದಂತೆ ಹಲವು ಕಂಪನಿಗಳು ನಿಲ್ದಾಣಕ್ಕೆ ತಮ್ಮ ಕಂಪನಿಯ ಹೆಸರನ್ನು ಇಡಲು ದೇಣಿಗೆಯನ್ನು ನೀಡಿದೆ. ಈ ಮೆಟ್ರೋ ಯೋಜನೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಯುತ್ತಿದೆ. ದೇಣಿಗೆ ಸಂಗ್ರಹವು ಸರ್ಕಾರದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ," ಎಂದು ತಿಳಿಸಿದರು.
ಜನರಿಂದ ತೀವ್ರ ಆಕ್ರೋಶ ವ್ಯಕ್ತ
ಈಗಾಗಲೇ ಹೆಬ್ಬಗೋಡಿ ನಿಲ್ದಾಣಕ್ಕೆ 'ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್' ಎಂಬ ನಾಮಫಲಕ ಇಡಲಾಗಿದೆ. ಈ ನಾಮಫಲಕ್ಕೆ ನೋಡಿದ ಬಳಿಕ ಜನರ ಆಕ್ರೋಶ ತೀವ್ರವಾಗಿದೆ. ಸ್ಥಳೀಯರು ಪ್ರತಿಭಟನೆ ಕೂಡಾ ಮಾಡಿದ್ದಾರೆ. ಮೆಟ್ರೊ ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಟ್ಟು ಹೆಬ್ಬಗೋಡಿ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳಿದ್ದರು. 'ನಮ್ಮ ಹೆಬ್ಬಗೋಡಿ ನಮ್ಮ ಅಸ್ಮಿತೆ' ಹೆಸರಿನಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಹೆಬ್ಬಗೋಡಿ ಪಾಲಿಕೆ ವ್ಯಾಪ್ತಿಯ ಸಂಪಿಗೆ, ಕಮ್ಮಸಂದ್ರ, ವೀರಸಂದ್ರ ವಾರ್ಡ್‌ಗಳ ಮೂಲಸೌಕರ್ಯ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ ಗಮನಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಕೈ ವಾಕ್ ಮಾಡಿ ತಮ್ಮ ಪ್ರಯಾಣವನ್ನು ಸುಲಭಗೊಳಿಸುವಂತೆ ಆಗ್ರಹಿಸಿದ್ದಾರೆ.
2020 ರಲ್ಲಿ, ಬಯೋಲಾಜಿಕ್ಸ್ ಇಂಡಿಯಾ ಲಿಮಿಟೆಡ್ ಮತ್ತು ಸಿಂಜೆನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಹೊಸೂರು ರಸ್ತೆಯ ಹೆಬ್ಬಗೋಡಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ 65 ಕೋಟಿ ರೂಪಾಯಿಗಳನ್ನು ನೀಡಲು ಬಿಎಂಆರ್‌ಸಿಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.


Click it and Unblock the Notifications