ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಹೆಜ್ಜೆ ಮುಂದಿಟ್ಟಿದೆ. ಅದೇನೆಂದರೆ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆಗೆ ಮುಂದಾಗಿದೆ. ಈ ಯೋಜನೆಗೆ ಮುನ್ನುಡಿ ರೂಪವಾಗಿ ಹೆಬ್ಬಾಳದ ವಿಸ್ತೀರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಹೌದು, ನಿನ್ನೆ ( ಮೇ 5)ರಂದು ವಿಧಾನಸೌಧದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಜೊತೆಯಲ್ಲಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಮೆಟ್ರೋ ವಿಸ್ತರಣೆ ಮತ್ತು ಸುರಂಗ ರಸ್ತೆ ಕಾಮಗಾರಿ ಎರಡನ್ನೂ ಸಮಾನಾಂತರವಾಗಿ ಮುಂದುವರಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದರು. ಹೆಬ್ಬಾಳವು ಬೆಂಗಳೂರಿನ ಸಂಚಾರ ಜಾಲದಲ್ಲಿ ಪ್ರಮುಖ ತಾಣವಾಗಿದ್ದು, ಈ ಪ್ರದೇಶದ ಅಭಿವೃದ್ಧಿ ಯೋಜನೆಗಳು ಸಂಚಾರದ ಸ್ಮೂತ್ ಫ್ಲೋಗೆ ನೆರವಾಗಲಿವೆ ಎಂದು ಅವರು ಹೇಳಿದರು.
ಸುರಂಗ ರಸ್ತೆ ಯೋಜನೆಯ ಅಡಿಯಲ್ಲಿ, ನಾಗರಿಕ ಹಾಗೂ ರಕ್ಷಣಾ ಇಲಾಖೆಯ ಮಾಲಿಕತ್ವದ ಭೂಮಿಗಳನ್ನು ಅಭಿವೃದ್ಧಿ ಹಕ್ಕುಗಳು (TDR) ಮತ್ತು ನೆಲದ ವಿಸ್ತೀರ್ಣ ಅನುಪಾತ (FAR) ಯೋಜನೆಗಳ ಅಡಿಯಲ್ಲಿ ವರ್ಗಾಯಿಸಲು ಸರ್ಕಾರ ತಯಾರಿ ನಡೆಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಟೆಂಡರ್‌ಗಳಿಗೆ ಆಹ್ವಾನ ನೀಡುವ ಪ್ರಕ್ರಿಯೆ ಆರಂಭವಾಗಿರುವುದಾಗಿ ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಈ ಸುರಂಗ ರಸ್ತೆ ಯೋಜನೆದಲ್ಲಿ ಎರಡು ಪ್ರಮುಖ ಕಾರಿಡಾರ್‌ಗಳಿದ್ದ, ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಉತ್ತರ-ದಕ್ಷಿಣ ಸಂಪರ್ಕ, ಮತ್ತು ಕೆಆರ್ ಪುರಂನಿಂದ ಮೈಸೂರು ರಸ್ತೆಯವರೆಗೆ ಪೂರ್ವ-ಪಶ್ಚಿಮ ಸಂಪರ್ಕವನ್ನು ಹೊಂದಿದೆ. ಸಂಪೂರ್ಣ ಯೋಜನೆಗೆ ₹42,000 ಕೋಟಿ ವೆಚ್ಚ ಬರಲಿದೆ ಎಂದು ಅಂದಾಜಿಸಲಾಗಿದೆ. ಇದರ ಮೊದಲ ಹಂತದಲ್ಲಿ, ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ 18 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಲಿದ್ದು, ಇದಕ್ಕೆ ₹17,000 ಕೋಟಿ ವೆಚ್ಚ ಅಂದಾಜಿಸಲಾಗಿದೆ.
ಶಿವಕುಮಾರ್ ಅವರು, ಈ ಯೋಜನೆಗೆ ಅಗತ್ಯವಿರುವ ₹19,000 ಕೋಟಿ ಸಾಲವನ್ನು ಸರ್ಕಾರ ಪಡೆಯಲು ಮುಂದಾಗಿದ್ದು, ಈ ಸಾಲಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ನೀಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಈ ಸುರಂಗ ರಸ್ತೆಯು ರಾಷ್ಟ್ರೀಯ ಹೆದ್ದಾರಿ (NH-7 ಮತ್ತು NH-14)ಗಳೊಂದಿಗೆ ಸಂಪರ್ಕ ಸಾಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗವೂ ಪಡೆಯಲಾಗುತ್ತಿದೆ.
ವಿರೋಧ ಪಕ್ಷಗಳಿಂದ ಪ್ರಶ್ನೆ:
ಸರ್ಕಾರದ ಈ ನಿರ್ಧಾರಕ್ಕೆ ರಾಜಕೀಯ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬೆಂಗಳೂರು ದಕ್ಷಿಣ ಸಂಸದ ಪಿ.ಸಿ. ಮೋಹನ್ ಅವರು, ಹೆಬ್ಬಾಳದ 45 ಎಕರೆ ಭೂಮಿಯನ್ನು ಸುರಂಗ ಮಾರ್ಗ ನಿರ್ಮಾಣಕ್ಕಿಂತಲೂ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಪ್ರದೇಶದಲ್ಲಿ ಈಗಾಗಲೇ ಮೂರು ಮೆಟ್ರೋ ಮಾರ್ಗಗಳು ಮತ್ತು ಉಪನಗರ ರೈಲು ನಿಲ್ದಾಣದ ಯೋಜನೆಗಳಿರುವುದರಿಂದ, ಭೂಮಿಯ ಸಮರ್ಪಕ ಬಳಕೆ ಮುಖ್ಯ ಎಂದು ಅವರು ಹೇಳಿದ್ದಾರೆ.
ಇದರ ಜತೆಗೆ, ಹಲವರು ಈ ಭೂಮಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಭವಿಷ್ಯಕ್ಕಾಗಿ ಅತ್ಯಂತ ಕೀ ಲೆವೆಲ್ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುರಂಗ ರಸ್ತೆ ಯೋಜನೆಯು ಮಹತ್ವಾಕಾಂಕ್ಷೆಯಾದರೂ, ಅದರ ಪರಿಣಾಮಗಳು ಹೇಗಿರಬಹುದು ಎಂಬ ಬಗ್ಗೆ ನಿಖರ ಅಧ್ಯಯನ ನಡೆಸುವ ಅಗತ್ಯವಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಬೆಂಗಳೂರಿನ ಸಂಚಾರ ಸಮಸ್ಯೆಗೆ ಬಹುಪಾಲು ಪರಿಹಾರ ನೀಡಬಲ್ಲ ಯೋಜನೆ ಇದಾದರೂ, ಭೂಸ್ವಾಧೀನದ ತಕರಾರುಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ಪರಿಣಾಮಗಳನ್ನು ಸರಿಯಾಗಿ ನಿರ್ವಹಿಸದೆ ಮುಂದುವರಿಸಿದರೆ, ಸರ್ಕಾರ ಇನ್ನಷ್ಟು ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಈ ಯೋಜನೆಯ ಪ್ರಗತಿ ಹಾಗೂ ಸಾರ್ವಜನಿಕ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications