ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಲ್ಲಿರುವ ವಿಷಯ ಅಂದ್ರೆ ಅದು "ಮುಂದಿನ ಸಿಎಂ ಯಾರು?". ಸದ್ಯ ರಾಜ್ಯ ಮಾತ್ರವಲ್ಲದೇ ದೇಶದೆಲ್ಲೆಡೆ ಬಿಸಿ ಬಿಸಿ ಚರ್ಚೆಯಲ್ಲಿರುವ ವಿಷಯ ಸಿಎಂ ಸೀಟು. ಈ ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮಹತ್ವದ ಬೆಳವಣಿಗೆಗಳೂ ನಡೆಯುತ್ತಿದೆ. ಕಳೆದ ಶನಿವಾರವಷ್ಟೇ (ನ.29) ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (Siddaramaiah-Dk Shivakumar) ಬ್ರೇಕ್‌ಫಾಸ್ಟ್ ಮೀಟಿಂಗ್ (Breakfast Meeting) ನಡೆಸಿದ್ದರು. ಇದೀಗ ಇಂದು ಮತ್ತೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಭರ್ಜರಿಯಾಗಿ ಆತಿಥ್ಯ ಏರ್ಪಡಿಸಲಾಗಿತ್ತು.

ಕಾಂಗ್ರೆಸ್ ಪಕ್ಷದ ಬಲಿಷ್ಠ ಕೈಗಳು ಇದೀಗ ಅಧಿಕಾರದ ಆಸೆಗಾಗಿ ಎದುರೆದುರಾಗಿವೆ. ಕೊಟ್ಟ ಮಾತು ಮುಂದುವರೆಯುತ್ತಾ ಎಂಬ ಪ್ರಶ್ನೆ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಮಧ್ಯೆ ಹೈಕಮಾಂಡ್ ಆದೇಶಕ್ಕಾಗಿ ಇಡೀ ರಾಜ್ಯವೇ ಕಾದು ಕುಳಿತಿದೆ. ಇದೀಗ ಉಭಯ ನಾಯಕರು ಮತ್ತೆ ಚರ್ಚೆ ನಡೆಸಿದ್ದಾರೆ.
ಡಿಕೆಶಿ ಟ್ವೀಟ್:
ಇನ್ನು ಚರ್ಚೆ ನಡೆಯುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ವೀಟ್ ಮಾಡಿದ್ದು, "ಉತ್ತಮ ಆಡಳಿತ ಮತ್ತು ಕಾಂಗ್ರೆಸ್ ದೃಷ್ಟಿಕೋನದಡಿಯಲ್ಲಿ ರಾಜ್ಯದ ನಿರಂತರ ಅಭಿವೃದ್ಧಿಗಾಗಿ ನಮ್ಮ ಬದ್ಧತೆಯ ಬಗ್ಗೆ ಚರ್ಚಿಸುತ್ತಾ, ಇಂದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಉಪಹಾರ ಕೂಟ ಆಯೋಜಿಸಲಾಗಿತ್ತು" ಎಂದು ಪೋಸ್ಟ್ ಮಾಡಿದ್ದಾರೆ.
ಉಭಯ ನಾಯಕರ ನಡುವೆ ಭಾರೀ ಚರ್ಚೆ!
ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ನಡುವೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ, ಪಕ್ಷದ ಅಭಿವೃದ್ಧಿ, ಚಳಿಗಾಲದ ಅಧಿವೇಶನ, 2028ರ ಚುನಾವಣೆ, ಲೋಕಸಭಾ ಚುನಾವಣೆ, ಸಂಪುಟ ಪುನರ್‌ರಚನೆ ಬಗ್ಗೆ ಚರ್ಚೆಗಳು ನಡೆಸಲಾಗಿದೆ ಎನ್ನಲಾಗಿದೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ; ಸಿಎಂ ಸಿದ್ದರಾಮಯ್ಯ
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು. ಅಲ್ಲದೇ ಅಧಿಕಾರ ಬದಲಾವಣೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುವುದನ್ನು ಪುನರುಚ್ಛರಿಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಜೋಡೆತ್ತುಗಳೆಂದು ಕರೆಯುತ್ತಿದ್ದ ಬಗ್ಗೆ ಕೇಳಿದಾಗ, ಹೌದು ನಾವಿಬ್ಬರು ಸಹೋದರರೇ ಎಂದು ಹೇಳಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದರ ಬಗ್ಗೆ ಹೇಳಿದ ಸಿಎಂ, ಸಮಯ ಸಿಕ್ಕರೆ ಭೇಟಿಯಾಗುವುದಾಗಿ ಹೇಳಿದ್ದಾರೆ.
ಅಧಿವೇಶನದ ಬಗ್ಗೆ ಚರ್ಚೆ!
ಪಾರ್ಟಿ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ ಡಿಸೆಂಬ 8 ರಿಂದ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಎರಡು ವಾರ ನಡೆಯುತ್ತದೆ. ಅಲ್ಲಿ ನಮ್ಮ ಪಕ್ಷದ ತಂತ್ರಗಳು ಹೇಗಿರಬೇಕು, ಏನೆಲ್ಲಾ ಚರ್ಚೆ ನಡೆಯಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ಬಿಜೆಪಿ-ಜೆಡಿಎಸ್ ಏನೇ ಚರ್ಚೆ ಮಾಡಿದರೂ ಅದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಒಗ್ಗಟ್ಟಿನ ಮಂತ್ರ ಸಾರಿದ ಸಿಎಂ
ನಾವು ಒಂದೇ ಪಕ್ಷದಲ್ಲಿ ಇದ್ದೇವೆ, ನಮ್ಮದು ಒಂದೇ ಸಿದ್ದಾಂತ, ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ಮುಂದೆ ಇಬ್ಬರು ಒಟ್ಟಾಗಿ ಕೆಲಸ ಮಾಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಒಗ್ಗಟ್ಟು ಇವತ್ತು ಅಲ್ಲ, ನಾವು ಹಿಂದಿನಿಂದಲೂ ಒಗ್ಗಟ್ಟಿನಿಂದಲೇ ಇದ್ದೇವೆ ಎಂದು ಹೇಳಿದರು.


Click it and Unblock the Notifications