ಭಾರತೀಯ ರೈಲ್ವೇ (Indian Railways), ತನ್ನ ಪ್ರಯಾಣಿಕರಿಗಾಗಿ ಸದಾ ಏನಾದರೊಂದು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಅದರಲ್ಲೂ ದೂರದ ಪ್ರಯಾಣವನ್ನು ವೇಗ ಮತ್ತು ಅತ್ಯುತ್ತಮಗೊಳಿಸುವುದೇ ರೈಲ್ವೇ ಇಲಾಖೆಯ ಮುಖ್ಯ ಉದ್ದೇಶ. ಇದೀಗ ಬೆಂಗಳೂರು ಮತ್ತು ಹೈದರಾಬಾದ್ (Bengaluru-Hyderabad) ನಡುವಿನ ಪ್ರಯಾಣ ಸಮಯವನ್ನು ಕೇವಲ 2 ಗಂಟೆಗೆ ಇಳಿಸುವ ಭರ್ಜರಿ ಪ್ಲಾನ್ ನಡೆಯುತ್ತಿದೆ. ಹಾಗಿದ್ರೆ ಇದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು-ಹೈದರಾಬಾದ್ ಹೈ-ಸ್ಪೀಡ್ ರೈಲು (ಬುಲೆಟ್ ಟ್ರೈನ್) ಯೋಜನೆಯನ್ನು ಆರಂಭಿಸಲು ಸರ್ಕಾರ ಅಧಿಕೃತವಾಗಿ ಸಜ್ಜಾಗಿದೆ. ಇತ್ತೀಚೆಗೆ ಕೇಂದ್ರ ರೈಲ್ವೇ ಅಧಿಕಾರಿಗಳು ಸಹ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಬೆಂಗಳೂರು-ಹೈದರಾಬಾದ್ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಹೌದು, ಪ್ರಸ್ತುತ ಬೆಂಗಳೂರಿನಿಂದ ಹೈದರಾಬಾದ್ ಸಂಚಾರ ಮಾಡಬೇಕೆಂದರೆ ಸುಮಾರು 8-9 ಗಂಟೆಗಳಷ್ಟು ಸಮಯ ಬೇಕು. ಆದ್ರೆ ಈ ಹೈಸ್ಪೀಡ್ ರೈಲು ಕಾರ್ಯಾಚರಣೆ ಆರಂಭಿಸಿದರೆ, ಕೇವಲ 1 ಗಂಟೆ 55 ನಿಮಿಷ ಅಥವಾ 2 ಗಂಟೆಗಳ ಒಳಗೆ ಪ್ರಯಾಣ ಮಾಡಬಹುದು ಎಂದು ಹೇಳಲಾಗಿದೆ. ಇದು ಎರಡು ರಾಜ್ಯಗಳ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗುತ್ತದೆ.
ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ವಿಶೇಷ ಒತ್ತು ನೀಡಲಾಗಿದ್ದು, ಇದೀಗ ಮಾತುಕತೆಯಿಂದ ಕಾರ್ಯಾಚರಣೆಯತ್ತ ಸಾಗಿದೆ. ಈ ಕಾರಿಡಾರ್ ಬೆಂಗಳೂರು ಮತ್ತು ಹೈದರಾಬಾದ್ ಎಂಬ ಎರಡು ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ ಪ್ರಯಾಣ ವಿವರ:
ಪ್ರಸ್ತುತ, 626 ಕಿಲೋಮೀಟರ್ ದೂರವನ್ನು ಎಕ್ಸ್‌ಪ್ರೆಸ್ ರೈಲಿನಲ್ಲಿ 110-130 ಕಿ.ಮೀ/ಗಂಟೆ ವೇಗಕ್ಕೆ ಸುಮಾರು 8.5 ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ ಹೈಸ್ಪೀಡ್ ರೈಲು ಬಂದ ನಂತರ, 350 ಕಿ.ಮೀ/ಗಂಟೆ ವೇಗದಲ್ಲಿ ಕೇವಲ 2 ಗಂಟೆಗಳಲ್ಲಿ ತಲುಪುವ ಗುರಿಯನ್ನು ಇದು ಹೊಂದಿದೆ.
ಸದ್ಯ ಕೇಂದ್ರ ರೈಲ್ವೇ ಅಧಿಕಾರಿಗಳು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿ, ರಾಜ್ಯದ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದಾರೆ.
100 ಕಿ.ಮೀ ಕರ್ನಾಟದಲ್ಲೇ ಪ್ರಯಾಣ
ಹೈಸ್ಪೀಡ್ ರೈಲು ಯೋಜನೆಯ ಕಾರಿಡಾರ್‌ಗಳು ನೆರೆ ರಾಜ್ಯದಲ್ಲಿ ಸಂಪರ್ಕಿಸಿದರೂ, ಸುಮಾರು 100 ಕಿಲೋಮೀಟರ್ ಮಾರ್ಗ ಕರ್ನಾಟಕದ ಮೂಲಕವೇ ಹಾದುಹೋಗಲಿದೆ. ಈ ಮಾರ್ಗವು ತುಮಕೂರು ಜಿಲ್ಲೆಯ ಮೂಲಕ ರಾಜ್ಯವನ್ನು ಪ್ರವೇಶಿಸಲಿದ್ದು, ಆಲಿಪುರ, ದೇವನಹಳ್ಳಿ ಮತ್ತು ಕೋಡಿಹಳ್ಳಿ ಎಂಬ ಮೂರು ಪ್ರಮುಖ ನಿಲ್ದಾಣಗಳನ್ನು ಹೊಂದಿರುತ್ತದೆ.
ಈ ಮೂಲಕ ಚಿಕ್ಕಬಳ್ಳಾಪುರದ ಆಲಿಪುರವು ರಾಜ್ಯದ ಹೈ-ಸ್ಪೀಡ್ ಜಾಲಕ್ಕೆ ಮೊದಲ ನಗರವಾಗಲಿದೆ. ದೇವನಹಳ್ಳಿ ನಿಲ್ದಾಣವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರೀ ಪ್ರಯೋಜನವಾಗಲಿದೆ. ಇನ್ನು ಈ ಯೋಜನೆ ಆರಂಭಕ್ಕೆ 176 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಇದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಅರಣ್ಯ ಪ್ರದೇಶಗಳೂ ಸೇರಿವೆ.


Click it and Unblock the Notifications