ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಬಹಿರಂಗಪಡಿಸಿದ ಬಳಿಕ ಅದಾನಿ ಸಂಸ್ಥೆ ಭಾರೀ ನಷ್ಟವನ್ನು ಕಂಡಿದೆ. ಹಲವಾರು ಯೋಜನೆಗಳನ್ನು ಕೈಬಿಡುತ್ತಿದೆ. ಈಗ ಅದಾನಿ ಗ್ರೂಪ್ ಗುಜರಾತ್‌ನ ಮುಂದ್ರಾದಲ್ಲಿನ ಸುಮಾರು 34,900 ಕೋಟಿ ರೂಪಾಯಿಯ ಪೆಟ್ರೋಕೆಮಿಕಲ್ ಯೋಜನೆಯನ್ನು ಕೈಬಿಟ್ಟಿದೆ. ಇದು ಭಾರತದ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡುವ ಸಾಧ್ಯತೆಯಿದೆ. ಇಲ್ಲಿ ತಯಾರಿಸಲಿದ್ದ ಪಾಲಿ ವಿನೈಲ್ ಕ್ಲೋರೈಡ್‌ಗಾಗಿ (ಪಿವಿಸಿ) ಭಾರತ ಮತ್ತೆ ಬೇರೆ ದೇಶಗಳ ಮೇಲೆ ಅವಲಂಭಿತವಾಗ ಬೇಕಾಗುತ್ತದೆ.
ಅದಾನಿ ಗ್ರೂಪ್ ಈ ಯೋಜನೆಯಡಿಯಲ್ಲಿ ಗುಜರಾತ್‌ನ ಮಂದ್ರಾ ಬಂದರಿನಲ್ಲಿ ಪೆಟ್ರೋಕೆಮಿಕಲ್ ಘಟಕವನ್ನು ಆರಂಭ ಮಾಡಲು ಸಿದ್ಧವಾಗಿತ್ತು. ಪ್ಸಾಸ್ಟಿಕ್ ಸಿಂಥೆಟಿಕ್ ಪಾಲಿಮರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ಪ್ಲಾಸ್ಟಿಕ್ನಲ್ಲಿ ಪಿವಿಸಿ ಮೂರನೇದ್ದಾಗಿದೆ. ಈ ಘಟಕದಲ್ಲಿ ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಉತ್ಪಾದನೆ ಮಾಡಲಾಗುತ್ತದೆ. ಇನ್ನು ಭಾರತದಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಹಾಗಿರುವಾಗ ಈಗ ಈ ಯೋಜನೆಯನ್ನೇ ಅದಾನಿ ಗ್ರೂಪ್ ಕೈಬಿಟ್ಟಿರುವುದು ದೇಶದಲ್ಲಿ ಆಮದು ಹೆಚ್ಚಳಕ್ಕೆ ಕಾರಣವಾಗಲಿದೆ.

ಮಾಹಿತಿ ಪ್ರಕಾರ ವಾರ್ಷಿಕವಾಗಿ ದೇಶಕ್ಕೆ ಪ್ರಸ್ತುತ 35 ಲಕ್ಷ ಟನ್ ಪಿವಿಸಿ ಅಗತ್ಯವಿದೆ. ಬೇಡಿಕೆಯೂ ಕೂಡಾ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಸಾಗುತ್ತಿದೆ. ಸದ್ಯ ಬೇಡಿಕೆಯ 35 ಲಕ್ಷ ಟನ್ ಪಿವಿಸಿ ಪೈಕಿ ದೇಶದಲ್ಲಿ ಬರೀ 14 ಲಕ್ಷ ಟನ್ ಮಾತ್ರ ಉತ್ಪಾದನೆ ಮಾಡಲಾಗುತ್ತದೆ. ಉಳಿದ 17 ಲಕ್ಷ ಟನ್ ಪಿವಿಸಿಗಾಗಿ ಭಾರತವು ಇತರೆ ದೇಶಗಳ ಮೇಲೆ ಅವಲಂಭಿತವಾಗಿದೆ, ಅಂದರೆ ಭಾರತವು 17 ಲಕ್ಷ ಟನ್ ಪಿವಿಸಿ ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತದೆ. ಈಗ ಈ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಭಾರತವು ಆಮದು ಮೇಲಿನ ಅವಲಂಬನೆ ಮುಂದುವರಿಸುವಂತೆ ಮಾಡಲಿದೆ.
ಯಾವುದಕ್ಕೆ ಪಿವಿಸಿ ಬಳಕೆ
ಫ್ಲೋರಿಂಗ್, ಎಲೆಕ್ಟ್ರಿಕ್ ವೈರು, ಚರಂಡಿ ಪೈಪು, ಏಪ್ರಾನ್ ಮೊದಲಾದವುಗಳ ಉತ್ಪಾದನೆ ಮಾಡಲು ಪಿವಿಸಿ ಬಳಕೆ ಮಾಡಲಾಗುತ್ತದೆ. ಅದಾನಿ ಗ್ರೂಪ್ ಗುಜರಾತ್‌ನ ಮಂದ್ರಾ ಬಂದರಿನಲ್ಲಿ ಸ್ಥಾಪನೆ ಮಾಡಲಿದ್ದ ಘಟಕದಲ್ಲಿ ಸುಮಾರು 2,000 ಕಿಲೋ ಟನ್ನಷ್ಟು ಪಿವಿಸಿ ಉತ್ಪಾದನೆ ಮಾಡಬಹುದಾಗಿತ್ತು. ಅಂದರೆ ಸರಿಸುಮಾರು ಭಾರತದಲ್ಲಿ ಹೆಚ್ಚುವರಿಯಾಗಿ 2 ಲಕ್ಷ ಟನ್ ಪಿವಿಸಿ ಉತ್ಪಾದನೆ ಮಾಡಬಹುದು. ಇದಕ್ಕಾಗಿ ವಾರ್ಷಿಕವಾಗಿ 31ಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಅಗತ್ಯ. ಈ ಕಲ್ಲಿದ್ದಲ್ಲನ್ನು ಅದಾನಿ ಗ್ರೂಪ್ ಆಸ್ಟ್ರೇಲಿಯಾ, ರಷ್ಯಾ ಮೊದಲಾದ ದೇಶಗಳಿಂದ ಆಮದು ಮಾಡಲು ನಿರ್ಧಾರ ಮಾಡಿತ್ತು.
ಈ ಯೋಜನೆ ಕೈಬಿಡಲು ಪ್ರಮುಖ ಕಾರಣ ಹಿಂಡನ್‌ಬರ್ಗ್ ವರದಿ ಎಂದು ಹೇಳಲಾಗಿದೆ. ಅದಾನಿ ಗ್ರೂಪ್ ಮೇಲೆ ಹಲವಾರು ವಂಚನೆಗಳ ಆರೋಪವನ್ನು ಮಾಡಿ ಪ್ರಕಟವಾದ ಈ ಹಿಂಡನ್‌ಬರ್ಗ್ ವರದಿಯು ಗ್ರೂಪ್ ಸಾಕಷ್ಟು ನಷ್ಟವನ್ನು ಕಾಣಲು ಕಾರಣವಾಗಿದೆ. ಈ ನಷ್ಟವನ್ನು ಸರಿದೂಗಿಸಲು, ಹೂಡಿಕೆದಾರರ ನಂಬಿಕೆಯನ್ನು ಮರುಪಡೆಯುವ ನಿಟ್ಟಿನಲ್ಲಿ ಅದಾನಿ ಗ್ರೂಪ್ ಷೇರು ಆಧಾರಿತ ಸಾಲಗಳನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ. ಈ ಎಲ್ಲ ಬೆಳವಣಿಗೆ ನಡುವೆ ಪೆಟ್ರೋಕೆಮಿಕಲ್ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಮತ್ತೆ ಯೋಜನೆ ಮುಂದುವರಿಸುವ ಸಾಧ್ಯತೆಯಿದೆ.
ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications