ಹಿಂಡನ್‌ಬರ್ಗ್ ಸಂಶೋಧನೆಯು ಜನವರಿ 24ರಂದು ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ವಂಚನೆಯನ್ನು ಮಾಡಿದೆ ಎಂದು ವರದಿ ಮಾಡಿದೆ. ಇದಾದ ಬಳಿಕ ಗೌತಮ್ ಅದಾನಿ ಸಂಪತ್ತು ಇಳಿದಿದೆ. ಸೆಪ್ಟೆಂಬರ್ 2022ರಲ್ಲಿ 150 ಬಿಲಿಯನ್ ಡಾಲರ್‌ನಷ್ಟಿದ್ದ ಅದಾನಿ ಆದಾಯವು 53 ಬಿಲಿಯನ್ ಡಾಲರ್‌ಗೆ ಇಳಿದಿದೆ. ಅಷ್ಟು ಮಾತ್ರವದಲ್ಲದೇ ಪೋರ್ಬ್ಸ್‌ನ ಟಾಪ್ 35 ಶ್ರೀಮಂತರ ಪಟ್ಟಿಯಿಂದಲೂ ಗೌತಮ್ ಅದಾನಿ ಹೊರಕ್ಕೆ ಬಿದ್ದಿದ್ದಾರೆ. ಒಂದು ವರದಿಯಿಂದ ಆದ ಇಷ್ಟೊಂದು ಬೆಳವಣಿಗೆಗಳನ್ನು ನಾವು ಗಮನಿಸುತ್ತಿರುವಾಗಲೇ ಈಗ ಮತ್ತೆ ಹಿಂಡನ್‌ಬರ್ಗ್ ಹೊಸ ವಂಚನೆ ಪ್ರಕರಣವನ್ನು ಬಯಲಿಗೆಳೆಯುವುದಾಗಿ ತಿಳಿಸಿದೆ.
ಅದಾನಿ ಗ್ರೂಪ್‌ನ ಸಂಸ್ಥೆಯು ಸುಮಾರು 120 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆಯು ಮ್ಯಾನಿಪುಲೇಷನ್ ಮಾಡಿದೆ, ಹಲವಾರು ವಂಚನೆಗಳನ್ನು ಮಾಡಿದೆ ಎಂದು ಆರೋಪ ಮಾಡಿ ಹಿಂಡನ್‌ಬರ್ಗ್ ವರದಿ ಮಾಡಿದೆ. ಅದಕ್ಕಾಗಿ ಹಲವಾರು ಸಾಕ್ಷಿಗಳು ಕೂಡಾ ನಮ್ಮಲ್ಲಿದೆ ಎಂದು ಹೇಳಿಕೊಂಡಿದೆ. ಗುಜರಾತ್‌ನ ದೊಡ್ಡ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ಬಳಿಕ ಈಗ ಹಿಂಡನ್‌ಬರ್ಗ್ ಮತ್ತೊಂದು ಅತೀ ದೊಡ್ಡ ಬಾಂಬ್ ಸಿಡಿಸಲು ಸಿದ್ಧತೆ ನಡೆಸಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಸಂಸ್ಥೆ
ಈ ಬಗ್ಗೆ ಮಾರ್ಚ್ 23ರಂದು ಅಮೇರಿಕಾದ ಈ ಸಂಸ್ಥೆಯು ಟ್ವೀಟ್ ಮಾಡಿದೆ. "ಹೊಸ ವರದಿ ಶ್ರೀಘ್ರ ಬರಲಿದೆ, ಇನ್ನೊಂದು ದೊಡ್ಡ ಪ್ರಕರಣ ಇದಾಗಿದೆ," ಎಂದು ಮಾಹಿತಿ ನೀಡಿದೆ. ಈ ಕೆಲವೇ ಅಕ್ಷರಗಳ ಒಂದು ಟ್ವೀಟ್ ಜಾಗತಿಕವಾಗಿಯೇ ಭಾರೀ ಕುತೂಹಲ, ಸಂಚಲವನ್ನು ಮೂಡಿಸಿದೆ. ಇನ್ನು ಹಲವಾರು ಮಂದಿ ಮತ್ತೊಂದು ಹಗರಣವು ಯುಎಸ್‌ನ ಬ್ಯಾಂಕ್‌ಗಳಿಗೆ ಸಂಬಂಧಪಟ್ಟಿದ್ದು ಆಗಿರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಓರ್ವ ಭಾರತೀಯ ಟ್ವಿಟ್ಟರ್ ಬಳಕೆದಾರ ಹಿಂಡನ್‌ಬರ್ಗ್‌ನ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಈ ವರದಿಯು ಮತ್ತೊಂದು ಭಾರತೀಯ ಸಂಸ್ಥೆಯ ಬಗ್ಗೆ ಆಗಿರದು ಎಂಬ ಆಶಾದಾಯಕತೆಯನ್ನು ಹೊಂದಿದ್ದೇವೆ," ಎಂದು ತಿಳಿಸಿದ್ದಾರೆ. ಹಾಗೆಯೇ ಈ ಬಾರಿ ಚೀನಾದ ಸಂಸ್ಥೆಯ ಬಗ್ಗೆ ಹಿಂಡನ್‌ಬರ್ಗ್ ವರದಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಜಾಗತಿಕವಾಗಿ, ಭಾರತದಲ್ಲಿ ಸಂಚಲನ ಸೃಷ್ಟಿ
ಅದಾನಿ ಗ್ರೂಪ್ ವಿರುದ್ಧವಾಗಿ ಹಿಂಡನ್‌ಬರ್ಗ್ ವರದಿ ಪ್ರಕಟವಾದ ಬಳಿಕ ಮಾರುಕಟ್ಟೆಯಲ್ಲಿ ದೊಡ್ಡ ಬೆಳವಣಿಗೆ ಕಂಡು ಬಂದಿದೆ. ಎಲ್ಲ ವಿರೋಧ ಪಕ್ಷಗಳು ಅದಾನಿ ಗ್ರೂಪ್ ಹಾಗೂ ನರೇಂದ್ರ ಮೋದಿ ಸರ್ಕಾರದ ನಡುವಿನ ನಂಟನ್ನು ಬೊಟ್ಟು ಮಾಡಿ ತೋರಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹಿಂಡನ್‌ಬರ್ಗ್-ಅದಾನಿ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
"2.5 ವರ್ಷದಲ್ಲಿಯೇ ಓರ್ವ ವ್ಯಕ್ತಿಯ ಸಂಪತ್ತು 13 ಪಟ್ಟು ಹೆಚ್ಚಳವಾಗಿದೆ. 2014ರಲ್ಲಿ ಈ ವ್ಯಕ್ತಿಯ ಆದಾಯವು 50,000 ಕೋಟಿ ರೂಪಾಯಿ ಆಗಿತ್ತು, ಆದರೆ 2019ರ ವೇಳೆಗೆ ಒಂದು ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಎರಡು ವರ್ಷದಲ್ಲೇ ಈ ಮ್ಯಾಜಿಕ್ ಆಗಿದೆ. ದಿಡೀರ್ ಆದಾಯವು 12 ಲಕ್ಷ ರೂಪಾಯಿಗೆ ಏರಿಕೆಯಾಗಿದೆ," ಎಂದು ಗೌತಮ್ ಅದಾನಿ ಆದಾಯ ಏರಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಲ್ಲಿಕಾರ್ಜುನ ಖರ್ಗೆ ಲೆಕ್ಕಾಚಾರ ವಿವರಿಸಿದ್ದಾರೆ.
ಹಿಂಡನ್‌ಬರ್ಗ್ ಬಯಲಿಗೆಳೆದ ಪ್ರಕರಣಗಳು
ಹಿಂಡನ್‌ಬರ್ಗ್ ಈ ಹಿಂದೆ ಎಲೆಕ್ಟ್ರಿಟ್ ಟ್ರಕ್‌ಗಳ ಉತ್ಪಾದನ ಸಂಸ್ಥೆಯಾದ ನಿಕೋಲಾ ಕಾರ್ಪೋರೇಷನ್ ವಿರುದ್ಧ ಸೆಪ್ಟೆಂಬರ್ 2020ರಲ್ಲಿ ವರದಿ ಪ್ರಕಟಿಸಿ ಪ್ರಕರಣ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ನಿಕೋಲಾ ಕಾರ್ಪೋರೇಷನ್ ಮಾಜಿ ಉದ್ಯೋಗಿಗಳ ಸಹಕಾರ ನೀಡಿದ್ದರು. 2020 ಜೂನ್‌ನಲ್ಲಿ ನಿಕೋಲಾ ಆರಂಭವಾಗಿದೆ. ಕೆಲವು ದಿನಗಳಲ್ಲೇ 34 ಬಿಲಿಯನ್ ಡಾಲರ್ ಸಂಪತ್ತನ್ನು ದಾಟಿ ಸಂಸ್ಥೆಯು ಫೋರ್ಡ್ ಮೋಟರ್ ಅನ್ನು ಮೀರಿಸಿದೆ. ಜನವರಿ 2023 ರಲ್ಲಿ, ಕಂಪನಿಯ ಮೌಲ್ಯವು 1.34 ಬಿಲಿಯನ್ ಡಾಲರ್‌ಗೆ ಕುಸಿದಿದೆ.


Click it and Unblock the Notifications