ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಜನವರಿ 24ರಂದು ಹಿಂಡನ್‌ಬರ್ಗ್ ವರದಿ ಮಾಡಿದೆ. ಈ ವರದಿಯಾಗಿ ಸುಮಾರು ನಾಲ್ಕು ತಿಂಗಳುಗಳು ಕಳೆದಿದೆ. ಈ ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಭಾರೀ ನಷ್ಟವನ್ನು ಕಂಡಿದೆ, ಇತ್ತೀಚೆಗೆ ಸ್ಟಾಕ್ ಕೊಂಚ ಸುಧಾರಿಸಿಕೊಳ್ಳುತ್ತಿದೆಯಾದರೂ ಕೂಡಾ ಇನ್ನು ಕೂಡಾ ಸಂಸ್ಥೆಯ ಸ್ಟಾಕ್ ಸಂಪೂರ್ಣವಾಗಿ ಸುಧಾರಿಸಿಕೊಂಡಿಲ್ಲ.
ಅದಾನಿ ಗ್ರೂಪ್‌ನ ಹತ್ತು ಸ್ಟಾಕ್‌ಗಳ ಪೈಕಿ ಎರಡು ಸ್ಟಾಕ್‌ಗಳು ಬೌನ್ಸ್‌ಬ್ಯಾಕ್ ಆಗಿದೆಯಾದರೂ ಕೂಡಾ ಹಿಂಡನ್‌ಬರ್ಗ್ ವರದಿಯು ಮುನ್ನ ಅದಾನಿ ಸ್ಟಾಕ್‌ಗಳು ಇದ್ದ ಸ್ಥಿತಿಗೆ ಮತ್ತೆ ತಲುಪಿಲ್ಲ. ಗ್ರೂಪ್‌ನ ಸ್ಟಾಕ್‌ಗಳ ಸಂಪೂರ್ಣ ಮಾರುಕಟ್ಟೆ ಮೌಲ್ಯವು ಈಗಲೂ ಕೂಡಾ 100 ಬಿಲಿಯನ್ ಡಾಲರ್‌ಗೂ ಇಳಿದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಂಬೈ ಮೂಲದ ಹೂಡಿಕೆ ಸಂಸ್ಥೆ ಪೈಪರ್ ಸೆರಿಕಾ ಅಡ್ವೈಸರ್ಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಫಂಡ್ ಮ್ಯಾನೆಜರ್ ಅಭಯ್ ಅಗರ್ವಾಲ್, "ಅದಾನಿ ಷೇರುಗಳು ತಮ್ಮ ಮೌಲ್ಯವನ್ನು ಮರುಪಡೆಯುತ್ತಿದೆ. ಆದರೆ ಹಿಂಡನ್‌ಬರ್ಗ್ ವರದಿಗೂ ಮುನ್ನ ಇದ್ದ ಮಾರುಕಟ್ಟೆ ಮೌಲ್ಯ ಈಗ ಇಲ್ಲ," ಎಂದು ತಿಳಿಸಿದ್ದಾರೆ.
"ಹಿಂಡನ್‌ಬರ್ಗ್ ವರದಿಯ ಬಳಿಕ ಹೂಡಿಕೆದಾರರು ಈಗ ಗ್ರೂಪ್‌ನ ಆಡಳಿತ ಸಮಸ್ಯೆಗಳ ಬಗ್ಗೆ ಅಧಿಕ ಕಾಳಜಿಯನ್ನು ಹೊಂದಿಲ್ಲ. ಮುಂದಿನ ಮೂರು, ಆರು ಅಥವಾ 12 ತಿಂಗಳುಗಳು ಆದರೂ ಕೂಡಾ ಎಲ್ಲಾ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ," ಎಂದು ಕೂಡಾ ಅಭಯ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ, ನಾಲ್ಕು ತಿಂಗಳ ಅವಧಿಯಲ್ಲಿ 10 ಅದಾನಿ ಗ್ರೂಪ್ ಷೇರುಗಳಲ್ಲಿ ಸರಾಸರಿ ಶೇಕಡ 23ರಷ್ಟು ಕುಸಿತ ಕಂಡು ಬಂದಿದೆ. ಅದಾನಿ ಸೇರಿದಂತೆ 2020 ರಿಂದ ಹಿಂಡನ್‌ಬರ್ಗ್‌ನ ಗುರಿಗೆ ಒಳಗಾದ ಇತರೆ ಕೆಲವು ಪ್ರಮುಖ ಕಂಪನಿಗಳ ಷೇರುಗಳು ಕೂಡಾ ಶೇಕಡ 19ರಷ್ಟು ನಷ್ಟವನ್ನು ಕಂಡಿದೆ.
ವಿದ್ಯುತ್-ವಾಹನ ತಯಾರಕ ಸಂಸ್ಥೆಯಾದ ನಿಕೋಲಾ ಕಾರ್ಪೊರೇಷನ್ ಮತ್ತು ಇಕಾನ್ ಎಂಟರ್‌ಪ್ರೈಸಸ್ ಎಲ್‌ಪಿ ಕೂಡಾ ನಾಥನ್ ಆಂಡರ್ಸನ್ ಅವರ ಕಂಪನಿಗೆ ಈ ಹಿಂದೆ ಗುರಿಯಾಗಿದೆ. ಇನ್ನು ಅದಾನಿ ಗ್ರೂಪ್ ಹೂಡಿಕೆದಾರರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಸಾಲದ ಮರುಪಾವತಿಯನ್ನು ಕೂಡಾ ಮಾಡುತ್ತಿದೆ.
ಆರೋಪವನ್ನು ನಿರಾಕರಿಸಿದ ಅದಾನಿ ಗ್ರೂಪ್
ಅದಾನಿ ಗ್ರೂಪ್ ಈ ಹಿಂಡನ್‌ಬರ್ಗ್ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಈ ವರದಿಯು ಸುಳ್ಳು ಆರೋಪ ಎಂದು ತಿಳಿಸಿದೆ. "ಈ ವರದಿಯು ಒಂದು ನಿರ್ದಿಷ್ಟ ಸಂಸ್ಥೆಯ ಮೇಲೆ ನಡೆಸಿರುವ ದಾಳಿಯಲ್ಲ, ಬದಲಾಗಿ ಭಾರತದ ಮೇಲೆ ಎಲ್ಲ ತಯಾರಿಯ ಮೂಲಕ ನಡೆಸಲಾಗಿರುವ ದಾಳಿಯಾಗಿದೆ," ಎಮದು ಅದಾನಿ ಗ್ರೂಪ್ ಹೇಳಿದೆ.
"ಭಾರತದ ಸ್ವಾತಂತ್ರ್ಯ, ಏಕತೆ, ಭಾರತದ ಸಂಸ್ಥೆಗಳ ಗುಣಮಟ್ಟ ಮತ್ತು ಭಾರತದ ಸಂಸ್ಥೆಗಳ ಬೆಳವಣಿಗೆ, ಭಾರತದ ಮುಂದಿನ ದೃಷ್ಟಿಕೋನದ ಮೇಲೆ ನಡೆಸಲಾಗಿರುವ ದಾಳಿಯಾಗಿದೆ," ಎಂದು ಅದಾನಿ ಗ್ರೂಪ್ ತಿಳಿಸಿದೆ. ಹಿಂಡನ್‌ಬರ್ಗ್ ವರದಿ ಭಾರತದ ನ್ಯಾಯಾಂಗ ಮತ್ತು ನಿಯಮದ ಚೌಕಟ್ಟನ್ನು ಕಡೆಗಣನೆ ಮಾಡಿದೆ ಎಂದು ಅದಾನಿ ಗ್ರೂಪ್ ತಿಳಿಸಿದೆ.
"ನಾವು ನ್ಯಾಯಾಂಗ ಕ್ರಮವನ್ನು ಕೈಗೊಳ್ಳುತ್ತೇವೆ. ನಮ್ಮ ಸ್ಟೇಕ್ ಹೋಲ್ಡರ್‌ಗಳನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ಹಿಂಡನ್‌ಬರ್ಗ್ ವರದಿಯಾಗಲಿ ಅಥವಾ ಬೇರೆ ಯಾವುದೇ ಆರೋಪಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನಾವು ನೀಡಲು ಸಿದ್ಧರಾಗಿದ್ದೇವೆ," ಎಂದು ಹೇಳಿದೆ. ಇನ್ನು ಸೆಬಿ ತನಿಖೆಯು ಕೂಡಾ ನಡೆಯುತ್ತಿದೆ.
ಈ ಸಮಯಕ್ಕೆ ಅದಾನಿ ಸ್ಟಾಕ್ ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 0.59ರಷ್ಟು ಏರಿಕೆಯಾಗಿ 2,448.00 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 1.33ರಷ್ಟು ಹೆಚ್ಚಳವಾಗಿ, 435.35 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.19ರಷ್ಟು ಜಿಗಿದು, 746.80 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 0.88ರಷ್ಟು ಇಳಿಕೆಯಾಗಿದ್ದು, 454.90 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 0.77ರಷ್ಟು ಕುಸಿದು, 1,842.05 ರೂಪಾಯಿಗೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್ ಶೇಕಡ 1.91ರಷ್ಟು ಏರಿಕೆಯಾಗಿ, 831.80 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.0.34ರಷ್ಟು ಹೆಚ್ಚಳವಾಗಿ 680.70 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.0.37ರಷ್ಟು ಇಳಿಕೆಯಾಗಿದ್ದು, 988.15ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 0.25ರಷ್ಟು ಕುಸಿದು 235.70 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 4.75ರಷ್ಟು ಹೆಚ್ಚಳವಾಗಿ 275.50 ರೂಪಾಯಿಗೆ ತಲುಪಿದೆ.


Click it and Unblock the Notifications