ಕರ್ನಾಟಕ ಸರ್ಕಾರವು ಮನೆ ಬಾಗಿಲಿನಲ್ಲಿಯೇ ಆರೋಗ್ಯ ಸೇವೆ ಒದಗಿಸುವ ವಿನೂತನ ಯೋಜನೆಯನ್ನು ಅಕ್ಟೋಬರ್ 24 ರಿಂದ ಅಂದರೆ ಇಂದಿನಿಂದ ಜಾರಿಯಾಗಲಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಗೃಹ ಆರೋಗ್ಯ ಯೋಜನೆ ಪ್ರಮುಖವಾಗಿ ಗ್ರಾಮೀಣ ಜನರ ಆರೋಗ್ಯ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.
ರಾಜ್ಯದ ಜನರು ಆರ್ಥಿಕ ಹೊರೆಯಾಗುತ್ತದೆ ಎಂದು ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ ಎಂಬ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಚ್ಚುತ್ತಿರುವ ಎನ್‌ಸಿಡಿಗಳ ಸಂಭವವನ್ನು ಪರಿಹರಿಸುವುದು ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.

ಗೃಹ ಆರೋಗ್ಯ ಯೋಜನೆ : ಆರೋಗ್ಯ ಸೇವೆ ಮನೆ ಬಾಗಿಲಿಗೆ
ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳ ಮಾದರಿಯಲ್ಲೇ ವೈದ್ಯರನ್ನು, ಆರೋಗ್ಯ ಸಿಬ್ಬಂದಿಗಳನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ಕಳುಹಿಸಿ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧಿ ಒದಗಿಸುವುದು ಈ ಯೋಜನೆಯ ಮೂಲ ಪರಿಕಲ್ಪನೆಯಾಗಿದೆ.
ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ, ಅದು ಬರುವ ಮುನ್ನವೇ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ರೋಗವನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಬಹುದು. ಹೊಸ ಆರೋಗ್ಯ ಯೋಜನೆಯಲ್ಲಿ, ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಗೆ ಬಂದು ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ತಪಾಸಣೆ ಮಾಡಲಿದ್ದಾರೆ.
ಮೊದಲೆಲ್ಲಾ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಶ್ರೀಮಂತರ ಸಮಸ್ಯೆ ಎಂದುಕೊಳ್ಳಲಾಗುತ್ತಿತ್ತು. ಆದರೆ ಇಂದು ಜಾತಿ, ಮತ, ಧರ್ಮ, ವಯಸ್ಸು ಎನ್ನದೆ ಎಲ್ಲರನ್ನೂ ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಆಧುನಿಕ ಜೀವನಶೈಲಿ, ಅತಿಯಾದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕವಾಗಿ ಸೋಮಾರಿತನ ಇವೆಲ್ಲವೂ ಇದಕ್ಕೆ ಕಾರಣ. ಹೀಗಾಗಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಎನ್‌ಸಿಡಿ(Non-Communicable Diseases)ಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ.
ಕರ್ನಾಟಕದಲ್ಲಿ ಪ್ರಸ್ತುತ ಸುಮಾರು 27% ಜನರು ರಕ್ತದೊತ್ತಡ ಮತ್ತು 15.6% ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಲ್ಲದೆ, 11.5% ಜನರು ಬಾಯಿಯ ಕ್ಯಾನ್ಸರ್, 26% ಜನರು ಸ್ತನ ಕ್ಯಾನ್ಸರ್ ಮತ್ತು 18.3% ಜನರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸರ್ಕಾರ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಹೋಗಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 30 ವರ್ಷಕ್ಕಿಂತ ಮೇಲ್ಪಟ್ಟವರ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಾರೆ.
ಸಣ್ಣ ಪುಟ್ಟ ಕಾಯಿಲೆಗೆ ಸ್ಥಳದಲ್ಲೇ ಔಷಧ ನೀಡಲಾಗುತ್ತದೆ. ಹ್ಯಾಂಡ್ ಎಕ್ಸ್ ರೇ ಮೂಲಕ ಸಂಕೀರ್ಣ ಕಾಯಿಲೆಗಳನ್ನು ಪತ್ತೆ ಹಚ್ಚಲಾಗುತ್ತದೆ. ಗಂಭೀರ ಸಮಸ್ಯೆ ಇದ್ದವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಶಿಫಾರಸ್ಸು ಮಾಡಲಾಗುತ್ತದೆ.
ಗೃಹ ಆರೋಗ್ಯ ಯೋಜನೆಯ ಉದ್ದೇಶ:
ರಾಜ್ಯದಲ್ಲಿ ಹೆಚ್ಚುತ್ತಿರುವ ರಕ್ತದೊತ್ತಡ, ಮಧುಮೇಹ ಮತ್ತು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟುವುದು.
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸೇವೆಗಳನ್ನು ಹತ್ತಿರಕ್ಕೆ ತರುವುದು.
ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು.
ಯೋಜನೆಯ ಕಾರ್ಯಚರಣೆ:
ಮನೆಗೆ ಮನೆಗೆ ಭೇಟಿ: ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಮತ್ತು ಇತರರು ಪ್ರತಿ ಮನೆಗೆ ಭೇಟಿ ನೀಡಿ ಜನರ ಆರೋಗ್ಯವನ್ನು ಪರಿಶೀಲಿಸುತ್ತಾರೆ.
ತಪಾಸಣೆ: ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಸಂಬಂಧಿಸಿದ ತಪಾಸಣೆಗಳನ್ನು ನಡೆಸಲಾಗುತ್ತದೆ.
30 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತೆ: ವಿಶೇಷವಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ.
ವಾರದಲ್ಲಿ ನಾಲ್ಕು ದಿನ: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ದಿನಕ್ಕೆ 15 ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತದೆ.
ರೋಗ ಪತ್ತೆ ಮತ್ತು ಚಿಕಿತ್ಸೆ: ರೋಗ ಪತ್ತೆಯಾದರೆ, ಅಗತ್ಯ ಔಷಧಿಗಳನ್ನು ಮಾತ್ರೆ ಪೆಟ್ಟಿಗೆ ಮೂಲಕ ಜನರಿಗೆ ಒದಗಿಸಲಾಗುತ್ತದೆ.
ಆರೋಗ್ಯ ಶಿಕ್ಷಣ: ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.
ಯೋಜನೆಯ ಉಪಯೋಗಗಳು:
ಜನರು ತಮ್ಮ ಆರೋಗ್ಯದ ಬಗ್ಗೆ ಅರಿವು ಪಡೆಯಲು ಸಹಾಯ ಮಾಡುತ್ತದೆ.
ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡುವುದರಿಂದ ಜೀವ ಉಳಿಸಬಹುದು.
ಆರೋಗ್ಯ ಸೇವೆಗಳನ್ನು ಜನರಿಗೆ ಹತ್ತಿರ ತರುತ್ತದೆ.
ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.


Click it and Unblock the Notifications