ಹೊಸೂರು ಏರ್ಪೋರ್ಟ್ ಯಾವಾಗ ಕಾರ್ಯಾರಂಭ ಎಂದು ಕಾದು ಕುಳಿತಿದ್ದವರಿಗೆ ಈಗ ಒಂದು ಗುಡ್‌ನ್ಯೂಸ್ ಸಿಕ್ಕಿದೆ. ಅದೇನೆಂದರೆ ಹೊಸೂರು ವಿಮಾನ ನಿಲ್ದಾಣವನ್ನು ವೇಗವಾಗಿ ಮುಗಿಸಲು ತಮಿಳುನಾಡು ಸರ್ಕಾರ ಕೆಲಸ ಚುರುಕುಗಿಒಳಿಸಿದೆ. ಇದರ ಸಲುವಾಗಿಯೇ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.. ಸದ್ಯ ಹೊಸ ವಿಮಾನ ನಿಲ್ದಾಣಕ್ಕಾಗಿ ಜಾಗ ತೆರವುಗೊಳಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ. ಆದರೆ ಈಗಿರುವ ಮಾಹಿತಿಯ ಪ್ರಕಾರ, ಈ ಪ್ರಕ್ರಿಯೆಗೆ ಕೇಂದ್ರದ ಅನುಮೋದನೆ ಸಿಗಲು ಕನಿಷ್ಠ 6 ರಿಂದ 8 ತಿಂಗಳು ಬೇಕಾಗಬಹುದು ಎನ್ನಲಾಗಿದೆ.

ರಕ್ಷಣಾ ಸಚಿವಾಲಯಕ್ಕೆ ಮತ್ತೆ ಮನವಿ:
ಸದ್ಯ ಈ ಯೋಜನೆಗಾಗಿ ಹಲವು ರೀತಿಯ ಕಾರ್ಯಗಳು ನಡೆಯಬೇಕಿದೆ. ಅದರ ಭಾಗವಾಗಿ ತಮಿಳುನಾಡು ಸರ್ಕಾರ ಜೂನ್ ತಿಂಗಳಿನಲ್ಲೇ ಮನವಿಯೊಂದನ್ನು ಸಲ್ಲಿಸಿತ್ತಿ. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಮತ್ತೆ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದು ಪ್ರತಿಕ್ರಿಯೆಗಾಗಿ ಕಾದು ಕುಳಿತಿದೆ. ಹೊಸೂರು ಪ್ರದೇಶದ ವಾಯುಪ್ರದೇಶವು ಸದ್ಯ ಹೆಚ್‌ಎಎಲ್ ನಿಯಂತ್ರಣದಲ್ಲಿದೆ. ಇದರಿಂದಲೇ ಹೊಸೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಮತ್ತು ಭದ್ರತಾ ವಿಚಾರಗಳು ಮುಖ್ಯ ಅಡೆತಡೆಯಾಗಿ ಪರಿಣಮಿಸುತ್ತಿವೆ.
ವಾಯುಪ್ರದೇಶ ಅತಿಕ್ರಮಣ..ದೊಡ್ಡ ತಾಂತ್ರಿಕ ಸವಾಲು:
ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಹೊಸೂರು ಪ್ರದೇಶದ ಆಕಾಶಪಥ ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣ, HAL ಮತ್ತು TAAL ಸಂಸ್ಥೆಗಳ ವಾಯುಪ್ರದೇಶದೊಂದಿಗೆ ಅತಿಕ್ರಮಿಸಿದೆ. ತಮಿಳುನಾಡು ಸರ್ಕಾರ ಇದಕ್ಕೆ ತಾಂತ್ರಿಕ ಪರಿಹಾರಗಳನ್ನು ನೀಡಿರುವುದಾಗಿ ಮೂಲಗಳು ತಿಳಿಸಿವೆ. ಒಂದೇ ವಲಯದಲ್ಲಿ ಅನೇಕ ಸಂಸ್ಥೆಗಳು ಕಾರ್ಯನಿರ್ವಹಿಸುವ ಸಾಧ್ಯತೆಗಳ ಬಗ್ಗೆ ಸ್ಪಷ್ಟನೆ ನೀಡಲಾಗಿದೆ ಮತ್ತು ಈಗ ಕೇಂದ್ರದ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದಾರೆ.
ಕನಿಷ್ಠ 8 ವರ್ಷಗಳ ಒಪ್ಪಂದದ ಅಡ್ಡಿ:
ಈ ಯೋಜನೆಗೆ ಮತ್ತೊಂದು ದೊಡ್ಡ ಅಡೆತಡೆ ಎಂದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL) ಮತ್ತು ಕೇಂದ್ರ ಸಚಿವಾಲಯದ ಮಧ್ಯೆ ಇರುವ ಹಳೆಯ ಒಪ್ಪಂದ. ಈ ಒಪ್ಪಂದದ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ಪ್ರಯಾಣಿಕ ವಿಮಾನ ನಿಲ್ದಾಣ ಆರಂಭಿಸಲು ನಿರ್ಬಂಧವಿದೆ. ಇದರಿಂದಾಗಿ, ಎಲ್ಲ ತನ್ನಿಕೆಗಳು ನೀಡಿದರೂ, ಹೊಸೂರಿನಲ್ಲಿ ಪ್ರಯಾಣಿಕ ಸೇವೆಗಳನ್ನು ಪ್ರಾರಂಭಿಸಲು ಇನ್ನೂ 8 ವರ್ಷಗಳ ಕಾಲ ಕಾಯಬೇಕಾಗಬಹುದು.
ಬೆಂಗಳೂರು ವಿಮಾನ ನಿಲ್ದಾಣದ ದಟ್ಟಣೆ ಕಡಿಮೆ ಮಾಡುವ ಗುರಿ:
ಹೊಸೂರು, ಬೆಂಗಳೂರಿನಿಂದ ಕೇವಲ 26 ಕಿ.ಮೀ ದೂರದಲ್ಲಿರುವುದರಿಂದ, ಹೊಸ ವಿಮಾನ ನಿಲ್ದಾಣವು ಬೆಂಗಳೂರು ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ಜಾಗ ತೆರವುಗೊಂಡ ನಂತರ ತಾತ್ವಿಕ ಅನುಮೋದನೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹೊಸೂರು-ಬೆಳೆದೊಯ್ಯುತ್ತಿರುವ ಕೈಗಾರಿಕಾ ಪ್ರದೇಶ:
ಹೊಸೂರು ಈಗಾಗಲೇ ಎಲೆಕ್ಟ್ರಾನಿಕ್ಸ್, ಉತ್ಪಾದನೆ ಮತ್ತು ರಫ್ತು ವಲಯಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶ. ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಂದರೆ, ಹೂಡಿಕೆದಾರರಿಗೆ ಉತ್ತಮ ಸಂಪರ್ಕ ಸಿಗುತ್ತದೆ. ಸರಕು ಸಾರಿಗೆ ಹಾಗೂ ಪ್ರಯಾಣಿಕ ಸೇವೆಗಳು ಸುಲಭವಾಗುತ್ತದೆ. ಇದರಿಂದ ತಮಿಳುನಾಡಿನ ಉತ್ತರ ಭಾಗಕ್ಕೆ ದೊಡ್ಡ ಮಟ್ಟದ ಆರ್ಥಿಕ ಉತ್ತೇಜನ ದೊರೆಯಲಿದೆ.
2300 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಸ್ತಾವನೆ:
ತಮಿಳುನಾಡು ಸರ್ಕಾರವು 2,300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ. ಇದರಲ್ಲಿ ಸುಮಾರು 650 ಎಕರೆ ಈಗಾಗಲೇ ಸರ್ಕಾರದ ಸ್ವಾಧೀನದಲ್ಲಿದೆ. ಪ್ರಾಥಮಿಕ ವಿನ್ಯಾಸದ ಪ್ರಕಾರ, ಒಂದು ದೊಡ್ಡ ಟರ್ಮಿನಲ್ ಮತ್ತು ಎರಡು ರನ್‌ವೇಗಳನ್ನು ನಿರ್ಮಿಸುವ ಯೋಜನೆ ಇದೆ. ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.
ಶೂಲಗಿರಿ ತಾಲೂಕಿನ ಬೆರಿಗೈ ಮತ್ತು ಬಾಗಲೂರು ನಡುವಿನ ಪ್ರದೇಶದಲ್ಲಿ ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ವರ್ಷಕ್ಕೆ ಸುಮಾರು 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಇರುವಂತೆ ವಿನ್ಯಾಸ ಮಾಡಲಾಗಿದೆ.


Click it and Unblock the Notifications